More

    ತಾಲೂಕಿಗೊಂದು ಕೃಷಿ ಉತ್ಪನ್ನ ಗುರುತಿಸಿ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ

    ಹಾವೇರಿ: ಆಹಾರ ಸಂಸ್ಕರಣಾ ಯೋಜನೆಯಡಿ ತಾಲೂಕಿಗೊಂದು ಕೃಷಿ- ತೋಟಗಾರಿಕೆ ಉತ್ಪನ್ನ ಗುರುತಿಸಿ ವಿಸ್ತೃತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ತಾಲೂಕು ಕೃಷಿ-ತೋಟಗಾರಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದ್ದಾರೆ.
    ಕೃಷಿ ಆಹಾರ ಸಂಸ್ಕರಣಾ ಕಿರು ಉದ್ಯಮ ಯೋಜನೆಯ ಅನುಷ್ಠಾನ ಪ್ರಗತಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಸಣ್ಣಸಣ್ಣ ಗುಂಪುಗಳನ್ನು ಒಟ್ಟುಗೂಡಿಸಿ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ಬೇಡಿಕೆಯ ಉತ್ಪನ್ನಗಳನ್ನು ಗುರುತಿಸಿ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸಲಹೆ ನೀಡಿದರು.
    ಸಣ್ಣ ಸಣ್ಣ ಗುಂಪುಗಳನ್ನು ಸಂಯೋಜಿಸಿ ದೊಡ್ಡ ಪ್ರಮಾಣದಲ್ಲಿ ಉತ್ಪಾನೆಕೈಗೊಂಡು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಜೋಳದ ರೊಟ್ಟಿ ತಯಾರಿಕೆ, ಮೆಕ್ಕೆಜೋಳದ ಸಂಸ್ಕರಿತ ಉಪ ಉತ್ಪನ್ನಗಳ ತಯಾರಿಕೆ, ಮಾವು, ಸಾವಯವ ಸಿರಿಧಾನ್ಯದಂತಹ ಜಿಲ್ಲೆಯ ಹಲವು ವಿಶೇಷವಾದ ಕೃಷಿ-ತೋಟಗಾರಿಕೆ ಉತ್ಪನ್ನಗಳನ್ನು ಗುರುತಿಸಿ ಮೌಲ್ಯವರ್ಧನೆಗೊಳಿಸಿ ಪ್ರಸ್ತುತ ಮಾರುಕಟ್ಟೆಗೆ ಅನುಗುಣವಾಗಿ ವಿಸ್ತರಿಸುವ ಕುರಿತಂತೆ ಪ್ರತಿ ತಾಲೂಕಿನ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಯೋಜನೆಯೊಂದನ್ನು ತಯಾರಿಸಬೇಕು. ಸಂಕ್ಷಿಪ್ತವಾಗಿ ಯೋಜನೆಯ ಮಹತ್ವ ಕುರಿತಂತೆ ಮಂಡಿಸಲು ಸಲಹೆ ನೀಡಿದರು.
    ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಇಬ್ರಾಹಿಂ ಕೆ.ದೊಡ್ಡಮನಿ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಮಲ್ಲಿಕಾರ್ಜುನ, ಲೀಡ್ ಬ್ಯಾಂಕ್ ಮ್ಯಾನೇಜರ್ ಅಣ್ಣಯ್ಯ, ಜಿಲ್ಲೆಯ ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ನಿರ್ದೇಶಕರು, ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
    73 ಕಿರು ಆಹಾರ ಸಂಸ್ಕರಣ ಘಟಕ
    ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆಯಲ್ಲಿ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಚಟುವಟಿಕೆ ಕುರಿತಂತೆ ಜಿಲ್ಲೆಯಲ್ಲಿ 73 ಫಲಾನುಭವಿಗಳು ಕಿರು ಆಹಾರ ಸಂಸ್ಕರಣಾ ಘಟಕಗಳಿಗೆ ನೆರವು ಪಡೆದಿದ್ದಾರೆ. ಈ ಯೋಜನೆಯಡಿ ಶೇ.35ರಷ್ಟು ಸಹಾಯಧನವನ್ನು ಹೆಚ್ಚಿಸಿ ಶೇ.50ರಷ್ಟು ಸಹಾಯಧನವನ್ನು ಸರ್ಕಾರದಿಂದ ಫಲಾನುಭವಿಗಳಿಗೆ ನೀಡಲಾಗುತ್ತಿದೆ. 73 ಉದ್ಯಮಿಗಳಿಗೆ 5.67 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ. 1.25 ಕೋಟಿ ರೂ. ಸಹಾಯಧನ ನೀಡಲಾಗಿದೆ. ರೊಟ್ಟಿ ತಯಾರಿಕಾ ಘಟಕ, ಬೆಲ್ಲದ ಗಾಣ, ಜಿರೇನಿಯಂ ಎಣ್ಣೆ ಘಟಕ, ಹಿಟ್ಟಿನ ಗಿರಣಿ, ಸಿರಿಧಾನ್ಯ ಸಂಸ್ಕರಣ ಘಟಕ, ಬೇಕರಿ, ಖಾರದ ಪುಡಿ ಘಟಕ, ಅಡಕೆ ಸಂಸ್ಕರಣ ಘಟಕ, ಹಪ್ಪಳ ತಯಾರಿಕೆ ಘಟಕಗಳಿಗೆ ನೆರವು ನೀಡಲಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts