More

  ಸೊಳ್ಳೆ ಉತ್ಪತ್ತಿ ತಾಣಗಳ ಮೇಲೆ ನಿಗಾವಹಿಸಿ; ಡೆಂಘೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ * ಅಧಿಕಾರಿಗಳಿಗೆ ಡಿಸಿ ರಘುನಂದನ ಮೂರ್ತಿ ಸೂಚನೆ

  ಹಾವೇರಿ: ಮಳೆಗಾಲ ಆರಂಭವಾಗಿರುವ ಕಾರಣ ಅಲ್ಲಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಡೆಂಘೆ, ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ, ಸೊಳ್ಳೆ ಉತ್ಪತ್ತಿ ತಾಣಗಳ ಮೇಲೆ ತೀವ್ರ ನಿಗಾವಹಿಸಿ ನಾಶಪಡಿಸಬೇಕು ಹಾಗೂ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಡೆಂೆ ನಿಯಂತ್ರಣ ಮಾಡಬೇಕು ಎಂದು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಡೆಂಘೆ ದಿನಾಚರಣೆ ಅಂಗವಾಗಿ ಜಿಲ್ಲಾ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಸ್ಪತ್ರೆಗಳು, ಸರ್ಕಾರಿ ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ಕ್ರಮವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಶಾಲಾ- ಕಾಲೇಜು ಸೇರಿದಂತೆ ಸರ್ಕಾರಿ ಕಚೇರಿಗಳ ಮೇಲ್ಛಾವಣಿಗಳನ್ನು ಸ್ವಚ್ಛಗೊಳಿಸಿ ಎಂದು ಸೂಚಿಸಿದರು.
  ಆರೋಗ್ಯ ಇಲಾಖೆ ಅಧಿಕಾರಿಗಳು ಸಾರಿಗೆ ಡಿಪೋಗಳಿಗೆ ಭೇಟಿ ನೀಡಿ ಟಯರ್‌ಗಳಲ್ಲಿ ನೀರು ನಿಲ್ಲದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಬೇಕು. ಟಯರ್‌ನಲ್ಲಿ ನೀರು ನಿಲ್ಲಂತೆ ಸೂಕ್ತ ಕ್ರಮಕೈಗೊಳ್ಳಿ ಎಂದರು. ಸ್ಥಳೀಯ ನಗರ ಸಂಸ್ಥೆಗಳ ಅಧಿಕಾರಿಗಳು ನಗರ ಪಟ್ಟಣಗಳ ಗಟಾರ ನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಿದರು.
  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿ, ತಹಸೀಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಡೆಂಘೆ ನಿಯಂತ್ರಣ ಮಾಡಬೇಕು. ಸ್ವಚ್ಛತಾ ಕಾರ್ಯವನ್ನು ತಮ್ಮ ಕಚೇರಿಂದಲೇ ಆರಂಭಿಸಿ. ಫಾಗಿಂಗ್ ಮಷಿನ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ, ಜಾಗೃತಿ ಕಾರ್ಯಕ್ರಮಕ್ಕೆ ಆಶಾ ಹಾಗೂ ಇತರೆ ಸಿಬ್ಬಂದಿ ಬಳಸಿಕೊಂಡು ನರೇಗಾ ಕಾಮಗಾರಿ ಸೇರಿದಂತೆ ಜನದಟ್ಟಣೆ ಇರುವ ಕಡೆಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
  ಸಭೆಯಲ್ಲಿ ಸವಣೂರ ಉಪವಿಭಾಗಾಧಿಕಾರಿ ಮಹ್ಮದ್ ಖಿಜರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹೊಸಗೌಡ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್,ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಎಂ.ಜಯಾನಂದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಲೇಶ ಎಂ.ಎನ್, ತಹಸೀಲ್ದಾರ ನಗಾರಾಜ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಇತರರು ಉಪಸ್ಥಿತರಿದ್ದರು.
  ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು, ತಹಸೀಲ್ದಾರರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
  ನಿರ್ದಿಷ್ಟ ಔಷಧವಿಲ್ಲ
  ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಮಾತನಾಡಿ, ಡೆಂಘೆ ಈಡೀಸ್ ಈಜಿಪ್ತಿ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ವಿಪರೀತ ಜ್ವರ, ದೇಹದ ಮೇಲೆ ಸಣ್ಣ ಸಣ್ಣ ಗಂದೆಗಳು, ಕಣ್ಣುಗಳ ಹಿಂಭಾಗ, ಮಾಂಸ-ಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ತಲೆನೋವು ಹಾಗೂ ಬಾಯಿ, ಮೂಗು, ಒಸಡುಗಳಿದ ರಕ್ತಸ್ರಾವವಾಗುವುದು ಡೆಂಘೆ ಲಕ್ಷಣಗಳಾಗಿವೆ. ರಕ್ತ ಪರೀಕ್ಷೆ ಮೂಲಕ ಜ್ವರ ಪತ್ತೆ ಹಚ್ಚಲಾಗುವುದು. ಡೆಂಗಿ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.
  ಪ್ರತ್ಯೇಕ ವಾರ್ಡ್
  ಜಿಲ್ಲಾಸ್ಪತ್ರೆಯಲ್ಲಿ ಡೆಂಘೆ ಮತ್ತು ಚಿಕುನ್ ಗುನ್ಯಾ ಜ್ವರದ ಪ್ರಕರಣಗಳಿಗೆ ಪ್ರತ್ಯೇಕ ವಾರ್ಡ್ ನಿರ್ವಹಣೆ ಮಾಡಲಾಗುತ್ತಿದೆ. ಸಂಶಯಾತ್ಮಕ ಎಲ್ಲ ರೋಗಿಗಳ ರಕ್ತ ತಪಾಸಣೆ ಮಾಡಲಾಗುತ್ತಿದೆ. ಸ್ವಚ್ಛ ವಾತಾವರಣ ನಿರ್ಮಾಣ, ಸೊಳ್ಳೆಯಿಂದ ಕಚ್ಚಿಸಿಕೊಳ್ಳುವಿಕೆಯಿಂದ ರಕ್ಷಣೆ ಪಡೆಯಲು ಸೊಳ್ಳೆಪರದೆ ಬಳಕೆ, ಸೊಳ್ಳೆಬ್ಯಾಟ್, ಸೊಳ್ಳೆಬತ್ತಿ, ಸೊಳ್ಳೆ ನಿರೋಧಕ ಮಲಾಮ, ಮೈತುಂಬ ಬಟ್ಟೆ ಧರಿಸಿ ರಕ್ಷಣೆ ಪಡೆಯುವುದು, ಡೆಂಘೆ ನಿಯಂತ್ರಣ ಕ್ರಮಗಳಾಗಿವೆ. ಪ್ರಸಕ್ತ ಸಾಲಿನ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 97 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವು ಸಂಭವಿಲ್ಲ ಎಂದು ಡಾ.ಸರಿತಾ ಮಾಹಿತಿ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts