ಹಾವೇರಿ: ಕೇಂದ್ರ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸೈಬರ್ ವಂಚನೆಗೆ ಒಳಗಾಗುವವರ ಸಂಖ್ಯೆ ಮಾತ್ರ ತಿಂಗಳಿಂದ ತಿಂಗಳಿಗೆ, ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಜಿಲ್ಲೆಯೊಂದರಲ್ಲೇ ಎಂಟು ತಿಂಗಳಲ್ಲಿ 80 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು, ವಂಚಕರು ಒಟ್ಟು 8,43,66,791 ರೂ. ವಂಚಿಸಿದ್ದಾರೆ.
2024ರ ಜನವರಿಯಿಂದ ಆಗಸ್ಟ್ 31ರವರೆಗೆ ಹಾವೇರಿ ಸೈಬರ್ ಕ್ರೈಂ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಒಟ್ಟು 80 ಪ್ರಕರಣ ದಾಖಲಾಗಿದ್ದು, 8.43 ಕೋಟಿ ರೂ. ವಂಚನೆಗೀಡಾಗಿದೆ. ಇದರಲ್ಲಿ 55 ಕೇಸ್‌ಗಳನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ. 71.97 ಲಕ್ಷ ರೂ. ಸ್ಥಗಿತಗೊಳಿಸಿದ್ದು, 15.78 ಲಕ್ಷ ರೂ. ದೂರುದಾರರಿಗೆ ಖಾಕಿ ಪಡೆ ಹಿಂತಿರುಗಿಸಿದೆ.
2002ರಲ್ಲಿ 118 ಕೇಸ್ ದಾಖಲಾಗಿದ್ದು, 117 ಕೇಸ್ ಫ್ರೀಜ್ ಮಾಡಲಾಗಿತ್ತು. 1.88 ಕೋಟಿ ರೂ. ವಂಚನೆಗೀಡಾಗಿತ್ತು. ಇದರಲ್ಲಿ 11.96 ಲಕ್ಷ ರೂ.ಯನ್ನು ಪೊಲೀಸರು ದೂರುದಾರರಿಗೆ ಹಿಂತಿರುಗಿಸಿದ್ದಾರೆ. 2023ರಲ್ಲಿ 107 ಕೇಸ್ ವರದಿಯಾಗಿದ್ದು, 90 ಕೇಸ್ ಫ್ರೀಜ್ ಮಾಡಲಾಗಿತ್ತು. 2.16 ಕೋಟಿ ರೂ. ವಂಚನೆಯಾಗಿದ್ದು, 14.77 ಲಕ್ಷ ರೂ. ದೂರುದಾರರಿಗೆ ಆರಕ್ಷಕರು ವಾಪಸ್ ಕೊಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಹಣ ವಂಚಕರ ಪಾಲಾಗಿದೆ. ಅನಕ್ಷರಸ್ಥರಿಗಿಂತ ಹೆಚ್ಚಾಗಿ ಅಕ್ಷರಸ್ಥರು, ಉನ್ನತ ವ್ಯಾಸಂಗ ಮಾಡಿರುವವರೇ ಸೈಬರ್ ವಂಚಕರ ದಾಳಕ್ಕೆ ಬೀಳುತ್ತಿರುವುದು ಆತಂಕ ಮೂಡಿಸಿದೆ. ಹಾಗಾಗಿ, ಮೊಬೈಲ್, ಇಂಟರ್‌ನೆಟ್ ಬಳಕೆದಾರರು ಎಷ್ಟು ಮುನ್ನೆಚ್ಚರಿಕೆ ವಹಿಸಿದರೂ ಕಡಿಮೆಯೇ ಎಂಬಂತಾಗಿದೆ.
ಮುನ್ನೆಚ್ಚರಿಗೆ ಹೀಗಿರಲಿ..
- ಯಾರಿಗೂ ಒಟಿಪಿ ಕೊಡಬೇಡಿ
- ಬ್ಯಾಂಕ್ ನೌಕರರು ಒಟಿಪಿ ಕೇಳಲ್ಲ
- ಅಪರಿಚಿತ ಸಂಖ್ಯೆಯಿಂದ ಬಂದ ಲಿಂಕ್ ಕ್ಲಿಕ್ ಮಾಡಬೇಡಿ
- ಅಪರಿಚಿತರ ವಿಡಿಯೋ ಕರೆ ಸ್ವೀಕರಿಸಬೇಡಿ
- ಹಣ ದುಪ್ಪಟ್ಟು ಮಾಡುವ ಆಮಿಷ ನಂಬದಿರಿ
- ಯಾರಿಗೂ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕೊಡಬೇಡಿ
- ಉದ್ಯೋಗದ ಹೆಸರಲ್ಲಿ ವಂಚಿಸುವವರಿದ್ದಾರೆ
- ಲೋನ್ ಆ್ಯಪ್‌ಗಳಿಂದ ಎಚ್ಚರ
- ಅನಗತ್ಯ ಆ್ಯಪ್ ಡೌನ್‌ಲೋಡ್ ಮಾಡದಿರಿ
- ಕೋಟ್:
ಸೈಬರ್ ಅಪರಾಧಗಳ ಕುರಿತು ಪೊಲೀಸ್ ಇಲಾಖೆಯಿಂದ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಅಂತರ್ಜಾಲ ಬಳಸುವ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಅಪರಿಚಿತ ಸಂಖ್ಯೆಗಳಿಂದ ಬರುವ ಕರೆ, ಸಂದೇಶ ಸ್ವೀಕರಿಸಬೇಡಿ. ಅಪರಿಚಿತರಿಂದ ಬಂದ ಲಿಂಕ್ ಒತ್ತದಿರಿ. ಸಂಶಯ ಬಂದಲ್ಲಿ ಕೂಡಲೇ ಹತ್ತಿರದ ಠಾಣೆ ಅಥವಾ ಸೈಬರ್ ಕ್ರೈಂ ಠಾಣೆ ಸಂಪರ್ಕಿಸಿ.
– ಅಂಶುಕುಮಾರ, ಎಸ್‌ಪಿ
ಕೋಟ್:
ಸೈಬರ್ ವಂಚನೆಗೀಡಾದವರು ತಕ್ಷಣವೇ ಸೆಂಟ್ರಲ್ ಸೈಬರ್ ಪೋರ್ಟಲ್ ಸಂಖ್ಯೆ ‘1930’ಗೆ ಕರೆ ಮಾಡಿ ಮಾಹಿತಿ ಕೊಡಬೇಕು. ಆಗ ಬ್ಯಾಂಕ್ ಖಾತೆ ಫ್ರೀಜ್ ಮಾಡಲಾಗುತ್ತದೆ. ನಂತರ ಸಿಇಎನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಬೇಕು. ಮೊದಲು ಲಾಭದ ಆಸೆ ತೋರಿಸಿ ವಂಚಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಾರದು.
– ಶಿವಶಂಕರ ಗಣಾಚಾರಿ, ಇನ್‌ಸ್ಪೆಕ್ಟರ್, ಸಿಇಎನ್ ಠಾಣೆ