ಹಾವೇರಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಎಂಬಾತನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 67 ಸಾವಿರ ರೂ. ದಂಡ ವಿಧಿಸಿ ಹಾವೇರಿ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1)ದ ನ್ಯಾಯಾಧೀಶರಾದ ನಿಂಗೌಡ ಪಾಟೀಲ ಶುಕ್ರವಾರ ತೀರ್ಪು ನೀಡಿದ್ದಾರೆ.
ಪ್ರಭುಸ್ವಾಮಿ ಶಿವಜೋಗಯ್ಯ ಬಾಳಿಹಳ್ಳಿಮಠ ಅಪ್ರಾಪ್ತ ಬಾಲಕಿ ಎಂದು ಗೊತ್ತಿದ್ದರೂ ಮದುವೆಯಾಗುವುದಾಗಿ ಮತ್ತು ಪ್ರೀಸುವುದಾಗಿ ಹೇಳಿ ಪುಸಲಾಯಿಸಿದ್ದ. 2021ರ ಏಪ್ರಿಲ್ 29ರಂದು ರಾತ್ರಿ ಅಪಹರಿಸಿಕೊಂಡು ಕಡಕೋಳ ಬಸ್ ನಿಲ್ದಾಣದಿಂದ ಮಂಗಳೂರು ಜಿಲ್ಲೆ ಸುರತ್ಕಲ್ ತಾಲೂಕು ಕುಳೈ ಗ್ರಾಮದ ವ್ಯಾಪ್ತಿಯ ಒಂದು ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದ.
ಬಾಲಕಿಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗುವಂತೆ ಮಾಡಿದ್ದ ಕುರಿತು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಇನ್ಸಪೆಕ್ಟರ್ ದೇವಾನಂದ ಎಸ್. ತನಿಖೆ ನಡೆಸಿ, ದೋಷರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈತನ ಮೇಲೆ ಹೊರಿಸಲಾದ ಆಪಾದನೆಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ ನೊಂದ ಬಾಲಕಿಗೆ 50 ಸಾವಿರ ರೂ. ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ನೊಂದ ಬಾಲಕಿಗೆ 4,00,000 ರೂ. ಪರಿಹಾರ ನೀಡಬೇಕೆಂದು ಎಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ (ಪೋಕ್ಸೋ) ವಿಜಯಕುಮಾರ ಶಂಕರಗೌಡ ಪಾಟೀಲ ವಾದ ಮಂಡಿಸಿದ್ದರು.