ಸಿನಿಮಾ

ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಬಜರಂಗದಳ ಬ್ಯಾನ್ ಮಾಡಲ್ಲ; ಲಿಂಗರಾಜ ಪಾಟೀಲ

ಹಾವೇರಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಿರುವಾಗ ಬಜರಂಗದಳ ಬ್ಯಾನ್ ಮಾಡುವುದು ಎಲ್ಲಿಂದ ಬಂತು ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಲೇವಡಿ ಮಾಡಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವುದಾಗಿ ಘೋಷಿಸಿದೆ. ಈ ರೀತಿ ಸಮಾಜ ಒಡೆಯುವ ಕೆಲಸಕ್ಕೆ ಕಾಂಗ್ರೆಸ್ ಪ್ರಸಿದ್ಧವಾಗಿದೆ. ಇಂಥವರಿಗೆ ಚುನಾವಣೆಯಲ್ಲಿ ಜನರೇ ಬುದ್ದಿ ಕಲಿಸುತ್ತಾರೆ ಎಂದರು.
ಬಿಜೆಪಿ ಕೇವಲ ಪ್ರಚಾರಕ್ಕಾಗಿ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ನಾವು ಹಿಂದೆಯೂ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ನಡೆದುಕೊಂಡು ಬಂದಿದ್ದೇವೆ. ರಾಜ್ಯ, ರಾಷ್ಟ್ರೀಯ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮತ್ತೆ ಡಬಲ್ ಇಂಜಿನ್ ಸರ್ಕಾರ ಜಾರಿಗೊಳ್ಳುವುದು ಖಚಿತವಾಗಿದೆ. ರಾಜ್ಯದಲ್ಲಿ 140ಕ್ಕೂ ಅಧಿಕ ಸೀಟು ಗೆಲ್ಲುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಬಿಜೆಪಿ ಪ್ರಣಾಳಿಕೆ ಕಾರ್ಯಕರ್ತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಪ್ರತಿ ವರ್ಷ ಮೂರು ಸಿಲಿಂಡರ್, ಬಡವರಿಗಾಗಿ ಅಟಲ್ ಆಹಾರ ಕೇಂದ್ರ ಸ್ಥಾಪನೆ, ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್ ನಂದಿನಿ ಹಾಲು, ಐದು ಕೆಜಿ ಅಕ್ಕಿ, ಏಕರೂಪ ನಾಗರಿಕ ಸಂಹಿತೆ ಜಾರಿ, ವಸತಿ ರಹಿತರಿಗೆ ವಸತಿ ಯೋಜನೆ, ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿರುವುದು ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಭೋಜರಾಜ ಕರೂದಿ, ಪಾಲಾಕ್ಷಪ್ಪ ಪಾಟೀಲ, ಬಸವರಾಜ ಕಳಸೂರ, ಪ್ರಭು ಹಿಟ್ನಳ್ಳಿ, ಶಶಿಧರ ಹೊಸಳ್ಳಿ, ಗಿರೀಶ ತುಪ್ಪದ, ಕಿರಣ ಕೋಣನವರ, ಇತರರಿದ್ದರು.

Latest Posts

ಲೈಫ್‌ಸ್ಟೈಲ್