More

  ಜಿಲ್ಲೆಯಲ್ಲಿ ಒಬ್ಬ ಬಾಲಕಾರ್ಮಿಕನೂ ಇರಬಾರದು; ಎಡಿಸಿ ಪೂಜಾರ ವೀರಮಲ್ಲಪ್ಪ ಆಶಯ; ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

  ಹಾವೇರಿ: ಜಿಲ್ಲೆಯಲ್ಲಿ ಒಬ್ಬರೂ ಬಾಲ ಕಾರ್ಮಿಕರು ಇರಬಾರದು ಎಂಬುದು ಜಿಲ್ಲಾಡಳಿತದ ಕಾಳಜಿಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಹೇಳಿದರು.
  ಇಲ್ಲಿನ ನಾಗೇಂದ್ರನಮಟ್ಟಿ ಸಮುದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.
  ಇಂದಿನ ಮಕ್ಕಳು ಸಮಾಜದ ಬೆನ್ನೆಲುಬು. ಪ್ರತಿಯೊಬ್ಬರೂ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಬೇಕು. ಮಕ್ಕಳು ಹಕ್ಕುಗಳ ಮತ್ತು ಕಾಯ್ದೆ ಬಗ್ಗೆ ಅರಿವು ಹೊಂದಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕೆಗಳು, ಹೋಟೆಲ್, ಕಾರ್ಖಾನೆಗಳು ಇತರೆ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ ‘1098’ಗೆ ಕರೆಮಾಡಿ ಎಂದರು.
  ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್.ಮಜೀದ್ ಮಾತನಾಡಿ, ಇಂದಿನ ಮಕ್ಕಳು ಇಂದಿನ ಪ್ರಜೆಗಳು. ದೇಶದಲ್ಲಿ ಶೇ.40 ರಷ್ಟು ಮಕ್ಕಳಿದ್ದಾರೆ. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. 18 ವರ್ಷದೊಳಗಿನ ಮಕ್ಕಳು ಶಾಲೆಯಲ್ಲಿರಬೇಕು. ಮಕ್ಕಳಿಗೆ ಬದುಕುವ, ರಕ್ಷಣೆ, ಭಾಗವಹಿಸುವಿಕೆ ಹಾಗೂ ವಿಕಾಸದ ಹಕ್ಕು ನೀಡಲಾಗಿದೆ. ಮಕ್ಕಳಿಗೆ ಎಲ್ಲ ಹಕ್ಕುಗಳು ದೊರೆತಾಗ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದರು.
  ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನ್ನಪೂರ್ಣ ಸಂಗಳದ ಮಾತನಾಡಿದರು. ಸಹಾಯ ಕಾನೂನು ನೆರವು ಅಭಿರಕ್ಷಕ ಎನ್.ಎನ್.ದಿಳ್ಳೆಪ್ಪನವರ ‘ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016’ರ ಕುರಿತು ಉಪನ್ಯಾಸ ನೀಡಿದರು.
  ಜಿಲ್ಲಾ ಕಾರ್ಮಿಕ ಅಧಿಕಾರಿ ಮಹೇಶ ಕುಳಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಜತ್ತಿ, ಕಾರ್ಯದರ್ಶಿ ಪಿ.ಎಸ್.ಹೆಬ್ಬಾಳ, ಶಹರ ಠಾಣೆ ಸಿಪಿಐ ಮೋತಿಲಾಲ ಪವಾರ, ಪಿಎಸ್‌ಐ ಜಗದೀಶ ಉಪಸ್ಥಿತರಿದ್ದರು.
  ದೀಪಾ ನಿರೂಪಿಸಿದರು. ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರ ವಂದಿಸಿದರು. ಹೆಲ್ಪ್‌ಲೈನ್ 1098ಗೆ ಕರೆ ಮಾಡಿ
  ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ, ಕಾಣೆಯಾದ ಹಾಗೂ ಶಾಲೆಯಿಂದ ಹೊರಗಳಿದ ಮಕ್ಕಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿ. ಇದು 24/7 ಕಾರ್ಯನಿರ್ವಹಿಸುತ್ತದೆ. ಮಕ್ಕಳ ತೆರೆದ ತಂಗುದಾಣ, ಸ್ಪಂದನ ದತ್ತು ಕೇಂದ್ರ, ನಿರ್ಗತಿಕ ಮಕ್ಕಳ ಕುಟೀರಗಳನ್ನು ಮಕ್ಕಳ ಪುನರ್ವಸತಿಗೆ ಸ್ಥಾಪಿಸಲಾಗಿದೆ ಎಂದು ಮಜೀದ್ ಹೇಳಿದರು.
  ಮಕ್ಕಳ ಜಾಥಾಕ್ಕೆ ಚಾಲನೆ
  ನಾಗೇಂದ್ರನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.8ರ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಜಾಗೃತಿ ಜಾಥಾಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ಜೆ.ಎಂ.ಎಫ್.ಸಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಬಾಲಮುಕುಂದ ರಮೇಶರಾವ ಮುತಾಲಿಕ ದೇಸಾಯಿ ಚಾಲನೆ ನೀಡಿದರು.

  See also  ಕಾರ್ಮಿಕ ಸಚಿವ ಲಾಡ್ ಜಿಲ್ಲಾ ಪ್ರವಾಸ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts