More

    ಮಾರ್ಚ್ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ; ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯ; ಪಾರದರ್ಶಕವಾಗಿ ಆಯೋಜಿಸಲು ಎಡಿಸಿ ವೀರಮಲ್ಲಪ್ಪ ಸೂಚನೆ

    ಹಾವೇರಿ: ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಮಾರ್ಚ್ 1ರಿಂದ 22ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಬೇಕು. ಜಿಲ್ಲಾಡಳಿತಕ್ಕೆ ಯಾವುದೇ ಮುಜುಗರವಾಗದಂತೆ ಬಹಳ ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಬುಧವಾರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪರೀಕ್ಷಾ ಕಾರ್ಯಗಳನ್ನು ಲೋಪವಾಗದಂತೆ ನಿರ್ವಹಿಸಲಾಗಿದೆ. ಇದೇ ಮಾದರಿಯಲ್ಲಿ ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳನ್ನು ನಿರ್ವಹಿಸಬೇಕು ಎಂದರು.
    ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾವನ್ನು ಕಡ್ಡಾಯವಾಗಿ ಅಳವಡಿಸಬೇಕು ಹಾಗೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಶುದ್ಧವಾದ ಕುಡಿಯುವ ನೀರು, ಪಿಠೋಪಕರಣ, ಗಡಿಯಾರ ಅಳವಡಿಸಬೇಕು. ಶೌಚಗೃಹ ವ್ಯವಸ್ಥೆ ಮಾಡಬೇಕು ಎಂದರು.
    ಸಭೆಯಲ್ಲಿ ಡಿಡಿಪಿಯು ಡಾ.ಎಚ್.ಉಮೇಶಪ್ಪ, ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ವಿವಿಧ ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
    ಬಿಗಿ ಬಂದೋಬಸ್ತ್ ಮಾಡಿ
    ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಬೇಕು. ಆರೋಗ್ಯ ಸಹಾಯಕರನ್ನು ನೇಮಿಸಬೇಕು. ಸಿಸಿಟಿವಿ ಕಣ್ಗಾವಲಿನಲ್ಲಿ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ಬಂಡಲ್ ತೆರೆಯಬೇಕು. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿನ ಝರಾಕ್ಸ್ ಸೆಂಟರ್ ಹಾಗೂ ಟೈಪಿಂಗ್ ಸೆಂಟರ್ ಮುಚ್ಚಿಸಬೇಕು ಎಂದು ಎಡಿಸಿ ವೀರಮಲ್ಲಪ್ಪ ಸೂಚಿಸಿದರು.
    15,011 ವಿದ್ಯಾರ್ಥಿಗಳು
    ಜಿಲ್ಲೆಯ 139 ಪದವಿಪೂರ್ವ ಕಾಲೇಜುಗಳ ಪೈಕಿ 22 ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಸುಗಮ ಪರೀಕ್ಷೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 15,011 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 13,666 ಹೊಸಬರು, 573 ಪುನರಾವರ್ತಿತ ಹಾಗೂ 772 ಬಾಹ್ಯ ವಿದ್ಯಾರ್ಥಿಗಳು ಇದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಉಮೇಶಪ್ಪ ತಿಳಿಸಿದ್ದಾರೆ.
    ಪರೀಕ್ಷಾ ವೇಳಾಪಟ್ಟಿ ಇಂತಿದೆ
    ಮಾ.1ರಂದು ಕನ್ನಡ, ಮಾ.4ರಂದು ಗಣಿತ ಮತ್ತು ಶಿಕ್ಷಣ ಶಾಸ್ತ್ರ, ಮಾ.5ರಂದು ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ, ಮಾ.6ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಮಾ.7ರಂದು ಇತಿಹಾಸ ಮತ್ತು ಭೌತಶಾಸ್ತ್ರ, ಮಾ.9ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರಮತ್ತು ಗೃಹ ವಿಜ್ಞಾನ, ಮಾ. 11ರಂದು ತರ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ಪರೀಕ್ಷೆಗಳು ನಡೆಯಲಿವೆ.
    ಮಾ.13ರಂದು ಇಂಗ್ಲಿಷ್, ಮಾ.15ರಂದು ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ ಮತ್ತು ಮೂಲ ಗಣಿತ, ಮಾ.16ರಂದು ಅರ್ಥಶಾಸ್ತ್ರ, ಮಾ.18ರಂದು ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮಾ.20 ರಂದು ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ ಮತ್ತು ಗಣಕ ವಿಜ್ಞಾನ, ಮಾ.21ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್ ಹಾಗೂ ಮಾ.22ರಂದು ಹಿಂದಿ ವಿಷಯದ ಪರೀಕ್ಷೆಗಳು ನಡೆಯಲಿವೆ ಎಂದು ಡಿಡಿಪಿಯು ಡಾ.ಎಚ್.ಉಮೇಶಪ್ಪ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts