More

  ನರೇಗಾದಲ್ಲಿ ಶೇ.187ರಷ್ಟು ಗುರಿ ಸಾಧನೆ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಹಾವೇರಿ ಜಿಲ್ಲೆ; ಎರಡು ತಿಂಗಳಲ್ಲಿ 99 ಸಾವಿರ ಜನರಿಗೆ ಉದ್ಯೋಗ

  ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ಎರಡು ತಿಂಗಳಲ್ಲಿ 99,936 ಜನರಿಗೆ ಉದ್ಯೋಗ ಒದಗಿಸುವ ಮೂಲಕ ಶೇ.187ರಷ್ಟು ಗುರಿ ತಲುಪಿರುವ ಹಾವೇರಿ ಜಿಲ್ಲೆ, ರಾಜ್ಯದಲ್ಲಿ ಚಿಕ್ಕಮಗಳೂರು ನಂತರದ ಸ್ಥಾನ ಪಡೆದಿದೆ. ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ನೀಡಿತ್ತು. 2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದ ಅಧಿಕಾರಿಗಳು ಉದ್ಯೋಗ ಸೃಜನೆಗೆ ನಿಗದಿಪಡಿಸಿದ್ದ ಗುರಿಗೆ ತಕ್ಕಂತೆ ಜನರಿಗೆ ಕೆಲಸ ಒದಗಿಸುವಲ್ಲಿ ಜಿಲ್ಲಾ ಪಂಚಾಯಿತಿ ಯಶಸ್ವಿಯಾಗಿದೆ ಎಂದು ಸರ್ಕಾರ ವರದಿಯಲ್ಲಿ ಉಲ್ಲೇಖಿಸಿದೆ.
  2024ರ ಏಪ್ರಿಲ್‌ನಿಂದ ಜೂನ್ 11ರವರೆಗೆ ನಿಗಧಿತ ಗುರಿಗಿಂತ ಶೇ.208.03ರಷ್ಟು ಸಾಧನೆ ಮಾಡಿರುವ ಚಿಕ್ಕಮಗಳೂರು ಮೊದಲ ಸ್ಥಾನದಲ್ಲಿದೆ. ಶೇ.187.47ರಷ್ಟು ಸಾಧನೆ ಮಾಡುವ ಮೂಲಕ ಹಾವೇರಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ರಾಯಚೂರು ಮೂರನೇ ಸ್ಥಾನದಲ್ಲಿದೆ.
  ಪ್ರಸಕ್ತ 2024-25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ಪ್ರಕಾರ ಜಿಲ್ಲೆಯ ಎಲ್ಲ 223 ಗ್ರಾಮ ಪಂಚಾಯಿತಿಗಳಲ್ಲಿ 14,875 ಕಾಮಗಾರಿಗಳ ಪೈಕಿ 50 ಲಕ್ಷ ಮಾನವ ದಿನಗಳ ಸೃಜನೆ ಗುರಿ ಮತ್ತು 329.40 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಏಪ್ರಿಲ್ ಮತ್ತು ಮೇನಲ್ಲಿ ಬರಗಾಲದ ಸಮಯದಲ್ಲಿ ಜನರಿಗೆ ನಿರಂತರ ಉದ್ಯೋಗ ಒದಗಿಸಲಾಗಿದ್ದು, 13.61 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ ತಿಳಿಸಿದ್ದಾರೆ.
  ಜೂ.11ರವರೆಗೆ 15.03 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದ್ದು, ಪ್ರತಿದಿನದ ಕೂಲಿ 349 ರೂ. ಕೂಲಿ ನೀಡಲಾಗುತ್ತಿದೆ. ಹೆಣ್ಣು ಮತ್ತು ಗಂಡಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಬರಗಾಲ ಸಮಯದಲ್ಲಿ ಜನರು ವಲಸೆ ಹೋಗದಂತೆ ನಿಗಧಿತ ಸಮಯದಲ್ಲಿ ಕೆಲಸದ ಜತೆಗೆ ಕೂಲಿ ಹಣವನ್ನು ಪಾವತಿಸಲಾಗಿದೆ. ಒಟ್ಟಾರೆ 55,056 ಕುಟುಂಬಗಳಿಗೆ ಕೆಲಸ ನೀಡಲಾಗಿದ್ದು, 99,936 ಜನರಿಗೆ ಉದ್ಯೊಗ ಒದಗಿಸಲಾಗಿದೆ. ಮುಂಬರುವ ಮಳೆಗಾಲದಲ್ಲಿ ನೆರೆಹಾವಳಿಯಾಗದಂತೆ ಮುಂಜ್ರಾಗತಾ ಕ್ರಮಗಳನ್ನು ಸಹ ಕೈಗೆತ್ತಿಕೊಳ್ಳಲಾಗಿದೆ. ಕೆರೆಗಳ ದುರಸ್ತಿ, ಕಾಲುವೆಗಳ ಹೂಳೆತ್ತುವುದು, ತಡೆಗೊಡೆ ನಿರ್ಮಾಣದಂತೆ ಕಾಮಗಾರಿಗಳನ್ನು ಸಹ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ 162 ಕೂಸಿನ-ಮನೆಗಳು ಕಾರ್ಯನಿರ್ವಹಿಸುತ್ತಿದ್ದು, ನರೇಗಾ ಕೆಲಸದಲ್ಲಿ ಸಮಯದಲ್ಲಿ ನರೇಗಾ ಯೋಜನೆ ಕೂಲಿಕಾರರು ತಮ್ಮ ಮೂರು ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಹೋಗಬಹುದು. ಮಕ್ಕಳಿಗೆ ಶುದ್ಧ ನೀರು, ಮತ್ತು ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ.

  See also  ಡಿ.ಕೆ.ಶಿವಕುಮಾರ್​ಗೆ ಓಪನ್​ ಆಪರ್​​ ನೀಡಿದ ಎಚ್​.ಡಿ. ಕುಮಾರಸ್ವಾಮಿ

  6 ಕಾಮಗಾರಿಗೆ ಯೋಜನೆ ಸಿದ್ಧ
  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರ ನಿರ್ದೇಶನದಂತೆ, 2024-25ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿಗಳಲ್ಲಿ 6 ಕಾಮಗಾರಿಗಳಡಿ ಸಂಪೂರ್ಣವಾಗಿ ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ. ಶಾಲಾ ಶೌಚಗೃಹಗಳು, ಶಾಲಾ ಕಾಂಪೌಂಡ್ ಮತ್ತು ಆಟದ ಮೈದಾನಗಳು, ಜಾನುವಾರುಗಳ ಶೆಡ್ ನಿರ್ಮಾಣ, ಸ್ಮಶಾನ ಅಭಿವೃದ್ದಿ ಕಾಮಗಾರಿಗಳು, ಕಾಲುವೆಗಳ ಹೂಳೆತ್ತುವುದು, ಪ್ರತಿ ತಾಲೂಕಿಗೆ 2 ಗ್ರಾಮ ಪಂಚಾಯಿತಿಗಳನ್ನು ಕಡ್ಡಾಯವಾಗಿ ಬದುನೀರು ಮುಕ್ತ ಪಂಚಾಯತಿಗಳನ್ನಾಗಿಸಲು ಜಿಲ್ಲೆಯ 8 ತಾಲೂಕಿಗಳ ಪೈಕಿ ಒಟ್ಟಾರೆ 17 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಆರು ವರ್ಗಗಳ ಕಾಮಗಾರಿಗಳನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವುದರೊಂದಿಗೆ ಜಿಲ್ಲೆಯ ಪ್ರಗತಿ ಕಾಣಬಹುದಾಗಿದೆ.
  ಈ ಗ್ರಾಮ ಪಂಚಾಯತಿಗಳಲ್ಲಿ ಚರಂಡಿ ನಿರ್ಮಾಣ, ಸೋಕ್ ಪಿಟ್ ನಿರ್ಮಾಣ ಮತ್ತು ಸಮುದಾಯ ಬದು ನೀರು ನಿರ್ವಹಣೆಘಟಕ ನಿರ್ಮಾಣ ಮಾಡಲು ಈಗಾಗಲೇ ಯೋಜನೆಯನ್ನು ರೂಪಿಸಲಾಗಿದ್ದು, ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಿಪಂ ಸಿಇಒ ತಿಳಿಸಿದ್ದಾರೆ.
  ಮಹಿಳೆಯರಿಗೆ ಶೇ.60ರಷ್ಟು ಮೀಸಲು
  ಜಿಲ್ಲೆಯಲ್ಲಿ 2024-25ನೇ ಸಾಲಿಗೆ ಮಹಿಳಾ ಭಾಗವಹಿಸುವಿಕೆ ಶೇ 49.04 ರಷ್ಟಿದ್ದು, ಈ ಆರ್ಥಿಕ ವರ್ಷದಲ್ಲಿ ಶೇ.60ರಷ್ಟು ಗುರಿ ಹೊಂದಲಾಗಿದೆ. ಈ ಕುರಿತು ಈಗಾಗಲೇ ಎಲ್ಲ ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಹಾಗೂ ಸರ್ವಸದಸ್ಯರಿಗೆ ಸೂಚಿಸಲಾಗಿದೆ. ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಡಿ ಮಹಿಳೆಯರಿಗೆ ಕಡ್ಡಾಯವಾಗಿ ಎಲ್ಲ ಕಾಮಗಾರಿಗಳಲ್ಲಿ ಶೇ.60ರಷ್ಟು ಇರುವಂತೆ ಕ್ರಮವಹಿಸಲು ಸಿಇಒ ಸೂಚಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts