More

    ಹಟ್ಟಿಕುದ್ರು -ಬಸ್ರೂರು ಸೇತುವೆ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಹಟ್ಟಿಕುದ್ರು ಜನರ ಸ್ವಾತಂತ್ರ್ಯ ಪೂರ್ವದ ಕನಸು ಈಡೇರುವ ಹಂತಕ್ಕೆ ಬಂದಿದೆ. ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆಗೆ ಶಿಲಾನ್ಯಾಸ ಮೂಲಕ ನಮ್ಮೂರಿಗೂ ಸೇತುವೆ ಆಗುತ್ತದೆ ಎಂಬ ಸಂಭ್ರಮ ಜನರ ಮೊಗದಲ್ಲಿ ನಗು ಅರಳಿಸಿದೆ.

    ಹಟ್ಟಿಕುದ್ರು ನಾಗರಿಕರು ಎಲ್ಲ ಅಗತ್ಯಗಳಿಗೂ ಬಸ್ರೂರನ್ನೇ ಅವಲಂಬಿಸಿದ್ದಾರೆ. ಸಂಪರ್ಕ ಸೇತುವೆ ನಿರ್ಮಿಸುವಂತೆ ಜನಪ್ರತಿನಿಧಿಗಳಲ್ಲಿ ನಿರಂತರ ಬೇಡಿಕೆ ಸಲ್ಲಿಸುತ್ತಿದ್ದು, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಬಸ್ರೂರು -ಹಟ್ಟಿಕುದ್ರು ಸೇತುವೆಗೆ ಶಿಲಾನ್ಯಾಸ ಮಾಡಿದ ಅನಂತರ ಹಲವು ವರ್ಷಗಳ ಹೋರಾಟಕ್ಕೆ ಕೊನೆಗೂ ನ್ಯಾಯ ಸಿಗಲಿದೆ ಎಂಬ ಖುಷಿಯಲ್ಲಿದ್ದಾರೆ.

    ಬಸ್ರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿಕುದ್ರು ಪ್ರಾಕೃತಿಕವಾಗಿ ಸಮೃದ್ಧವಾಗಿರುವ ದ್ವೀಪ ಪ್ರದೇಶ. ಸುಮಾರು 350ರಷ್ಟು ಮನೆಗಳು, ಮೂರು ಸಾವಿರದಷ್ಟು ಜನಸಂಖ್ಯೆ ಇದೆ. ಕುಂದಾಪುರ ಶಾಸಕರಾಗಿ ಪ್ರಥಮ ಬಾರಿ ಆಯ್ಕೆಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಟ್ಟಿಕುದ್ರು ಜನರಿಗೆ ನೀಡಿದ ಭರವಸೆ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆದು ಹಟ್ಟಿಕುದ್ರುವಿನಿಂದ ಹಟ್ಟಿಯಂಗಡಿ ಸಂಪರ್ಕಿಸುವ ಸೇತುವೆ ನಿರ್ಮಿಸಲು ಯಶಸ್ವಿಯಾಗಿದ್ದರು. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಬಸ್ರೂರು -ಹಟ್ಟಿಕುದ್ರು ಸೇತುವೆಗೆ ಕರ್ನಾಟಕ ನೀರಾವರಿ ನಿಗಮ ಮೂಲಕ ಅನುದಾನ ಮಂಜೂರು ಮಾಡಿಸಿದ್ದಾರೆ. 16 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಆಗಲಿದ್ದು, ಸೇತುವೆ ಮೇಲೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಯೋಜನೆಯೂ ಇದ್ದು, ಸಂಪರ್ಕದೊಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಕೂಡ ಪರಿಹಾರ ಆಗಲಿದೆ. ಹಟ್ಟಿಕುದ್ರು ಸೇತುವೆ ಕುರಿತು ವಿಜಯವಾಣಿ ವಿಸ್ತೃತ ವರದಿ ಮಾಡಿತ್ತು.

    ಜೀವ ಭಯದಲ್ಲಿ ಓಡಾಟ: ಮಳೆಗಾಲದ ನಾಲ್ಕು ತಿಂಗಳು ಕಳೆಯುವುದೆಂದರೆ ಹಟ್ಟಿಕುದ್ರು ಜನರಿಗೆ ಸಾಹಸವೇ ಸರಿ. ದೋಣಿಯನ್ನೇ ಅವಲಂಬಿಸಿರುವುದರಿಂದ ಹಾಲಾಡಿ ಹೊಳೆ ದಾಟಿ ಜೀವ ಭಯದಲ್ಲಿ ಬಸ್ರೂರು ತಲುಪಬೇಕಾದ ಅನಿವಾರ್ಯತೆ. ಸುಮಾರು 150ರಿಂದ 160 ವಿದ್ಯಾರ್ಥಿಗಳು ಪ್ರತಿನಿತ್ಯ ಈ ಹೊಳೆ ದೋಣಿ ಮೂಲಕ ಬಸ್ರೂರಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ಮಳೆಗಾಲದಲ್ಲಿ ತುಂಬ ಸಮಸ್ಯೆ. ಕೆಲವೊಮ್ಮೆ ಪ್ರತಿಕೂಲ ಹವಾಮಾನದಿಂದ ದೋಣಿ ಸಂಚಾರ ಆಗದೆ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ತಲುಪಲು ಸಾಧ್ಯವಾಗುವುದಿಲ್ಲ. ಕೃಷಿ ಕೂಲಿ ಕಾರ್ಮಿಕರು, ವ್ಯಾಪಾರಸ್ಥರಿಗೂ ತೊಂದರೆ.

    ಅಂಬಿಗನಿಲ್ಲದಿದ್ದರೆ ವಿದ್ಯಾರ್ಥಿಗಳಿಗೆ ರಜೆ: ಹಟ್ಟಿಕುದ್ರು ದ್ವೀಪದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಬೇಕಾದರೆ ಬಸ್ರೂರಿಗೆ ಬರಲೇಬೇಕು. ಆತ್ತ ಹಟ್ಟಿಯಂಗಡಿ ಮಾರ್ಗದ ಮೂಲಕ ಹೋಗುವುದೆಂದರೆ ಅದು ಸುತ್ತುಗಟ್ಟಿದ ಮಾರ್ಗ. ಸಾಕಷ್ಟು ವಿದ್ಯಾರ್ಥಿಗಳು ಬಸ್ರೂರಿನಲ್ಲಿರುವ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳಿಗೆ ಹೋಗುತ್ತಾರೆ. ದೋಣಿ ನಡೆಸುವ ಅಂಬಿಗನಿಗೆ ಅಸೌಖ್ಯವಾದರೆ ವಿದ್ಯಾರ್ಥಿಗಳಿಗೆ ರಜೆ. ಅಲ್ಲದೆ ಹಟ್ಟಿಕುದ್ರು ಬಸ್ರೂರು ಗ್ರಾಪಂಗೆ ಸೇರಿದ್ದು, ಎಲ್ಲದಕ್ಕೂ ಬಸ್ರೂರು ನೆಚ್ಚಿಕೊಂಡಿದ್ದಾರೆ. ಸೇತುವೆ ಶಂಕುಸ್ಥಾಪನೆ ಅನಂತರ ಹಟ್ಟಿಕುದ್ರು ವಾಸಿಗಳ ಮೊಗದಲ್ಲಿ ನಗುವರಳಿದೆ. ಸಂಚಾರ ಹಾಗೂ ಕುಡಿಯುವ ನೀರು ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ಭರವಸೆಯೂ ಮೂಡಿದೆ.

    ಮರವಂತೆ ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನ ಸೇತುವೆ, ಆನಗಳ್ಳಿ ಸೇತುವೆಗಳು ಕೋಟಿ ಕೋಟಿ ಹಣ ವಿನಿಯೋಗಿಸಿದರೂ ರಸ್ತೆ ಇಲ್ಲದಿದ್ದರೆ ಯೋಜನೆ ಮಣ್ಣು ಪಾಲಾಗುತ್ತದೆ ಎಂಬುದಕ್ಕೆ ನಿದರ್ಶನ. ಅಭಿವೃದ್ಧಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಒಂದು ಇಂಚು ಸ್ಥಳ, ಒಂದು ರೂ. ನಷ್ಟವಾಗಬಾರದು ಎಂಬ ಮನೋಭಾವ ಬದಲಾಗಬೇಕು. ಆನಗಳ್ಳಿ, ಮರವಂತೆ ಸೇತುವೆ ಇದ್ದರೂ ಪ್ರಯೋಜನಕ್ಕೆ ಬಾರದ ಹಾಗಾಗಿದ್ದು, ಹಟ್ಟಿಕುದ್ರು ಸೇತುವೆ ಹಾಗೆ ಆಗಬಾರದು. ಹಟ್ಟಿಕುದ್ರು ನಾಗರಿಕರು ರಸ್ತೆಗೆ ಸ್ಥಳಾವಕಾಶ ಮಾಡಿ ಕೊಟ್ಟರೆ ಸೇತುವೆ ಮಾಡಿದ್ದಕ್ಕೆ ಸಾರ್ಥಕ ಆಗುತ್ತದೆ. ಹಟ್ಟಿಕುದ್ರು ಸೇತುವೆಯಿಂದ ಹಲವು ವರ್ಷಗಳ ಬೇಡಿಕೆ ಈಡೇರಲಿದೆ.

    ಬಿ.ಅಪ್ಪಣ್ಣ ಹೆಗ್ಡೆ ಆಡಳಿತ ಧರ್ಮದರ್ಶಿ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಸ್ರೂರು

    ಕುಂದಾಪುರ ತಾಲೂಕಿನ ಹಟ್ಟಿಕುದ್ರುವಿಗೆ ಸೇತುವೆ ಅವಶ್ಯವಾಗಿ ಬೇಕಾಗಿದೆ. ಹಟ್ಟಿಕುದ್ರುವಿನಿಂದ ಹಟ್ಟಿಯಂಗಡಿಗೆ ಸಂಪರ್ಕವಿದ್ದು, ಬಸ್ರೂರಿಗೆ ಇರಲಿಲ್ಲ. ಪಂಚಾಯಿತಿ, ಹೈಸ್ಕೂಲ್, ಆಸ್ಪತ್ರೆ ಸಹಿತ ಹೆಚ್ಚಿನ ಅವಶ್ಯಕತೆಗೆ ಬಸ್ರೂರಿಗೆ ಬರಬೇಕು. ಹಟ್ಟಿಕುದ್ರು ಜನರಿಗೆ ಬಸ್ರೂರು ತವರು ಮನೆಯಿದ್ದ ಹಾಗಿದ್ದು, ದೋಣಿಯನ್ನೇ ನೆಚ್ಚಿಕೊಂಡಿದ್ದರು. ಹಟ್ಟಿಕುದ್ರು -ಬಸ್ರೂರು ಬೆಸೆಯುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ನಿಗಮ ಹಟ್ಟಿಕುದ್ರು ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ದೃಷ್ಟಿಯಲ್ಲಿ ಬಳ್ಕೂರಲ್ಲಿ ಡ್ಯಾಮ್ ಮಾಡಿದ್ದು, ಅದರಿಂದ ಹಟ್ಟಿಕುದ್ರು ಜನರಿಗೆ ನೀರು ಕೊಡಲು ಆಗಲಿಲ್ಲ. ಹಟ್ಟಿಕುದ್ರು ಲೈನ್‌ನಲ್ಲಿ ವಾರಾಹಿ ಹರಿಯುವುದರಿಂದ ವಾರಾಹಿ ನೀರು ಪೂರೈಕೆ ಸೇತುವೆ ಮೇಲೆ ಪೈಪ್‌ಲೈನ್ ಮೂಲಕ ನೀಡುವ ಉದ್ದೇಶವಿದ್ದು, ಹಟ್ಟುಕುದ್ರು ಸೇತುವೆ ಟೂಇನ್‌ಒನ್ ಆಗಲಿದೆ.

    ಪ್ರತಾಪಚಂದ್ರ ಶೆಟ್ಟಿ ಸಭಾಪತಿ, ವಿಧಾನ ಪರಿಷತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts