ಹತ್ತಿ ವಹಿವಾಟು ಆರಂಭ

ಹಳಿಯಾಳ: ಭತ್ತದ ಕಣಜವೆಂದು ಗುರುತಿಸಲ್ಪಡುವ ಹಳಿಯಾಳ ತಾಲೂಕಿನಲ್ಲಿ ಅಪರಿಚಿತವಾದಂತಿದ್ದ ಹತ್ತಿ ಬೆಳೆಯನ್ನು ಪರಿಚಯಿಸಿ ಹತ್ತಿ ಬೇಸಾಯವನ್ನು ಆರಂಭಿಸುವಂತೆ ಪ್ರೋತ್ಸಾಹಿಸಿದ ಕೀರ್ತಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಸಲ್ಲುತ್ತದೆ ಎಂದು ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ ಹೇಳಿದರು.

ಇಲ್ಲಿಯ ಎಪಿಎಂಸಿ ಆವರಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಹತ್ತಿ ವಹಿವಾಟಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶಪಾಂಡೆಯವರು ಕೃಷಿ ಸಚಿವರಾಗಿದ್ದಾಗ ಕೈಗೊಂಡ ಈ ದೂರದೃಷ್ಟಿಯುಳ್ಳ ಹತ್ತಿ ಕೃಷಿಯ ಯೋಜನೆಯಿಂದಾಗಿ ತಾಲೂಕಿನ ರೈತರ ಭಾಗ್ಯದ ಬಾಗಿಲು ತೆರೆದು ಹತ್ತಿ ಈ ಭಾಗದ ರೈತರ ಪಾಲಿಗೆ ಬಿಳಿ ಬಂಗಾರವಾಗಿ ಪರಿಣಮಿಸಿದೆ ಎಂದರು. ಸಮಾರಂಭದಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಹತ್ತಿ ಖರೀದಿದಾರರಾದ ವೆಂಕಟೇಶ ಬಂಡಾರಕರ, ಅನಿಲಕುಮಾರ, ಬಾಳಗಿ ಟ್ರೇಡರ್ಸ್, ತಾಲೂಕಿನ ರೈತ ಪ್ರಮುಖರು ಪಾಲ್ಗೊಂಡಿದ್ದರು.

ಕಡಿಮೆ ಇಳುವರಿ: ಪ್ರಸಕ್ತ ವರ್ಷ ಆದ ಅಧಿಕ ಮಳೆಯಿಂದ ಹತ್ತಿ ಬೆಳೆಯ ಇಳುವರಿ ಕಡಿಮೆಯಾಗಿರುವುದು ಕಂಡು ಬಂದಿದೆ. ಹತ್ತಿ ವಹಿವಾಟಿನ ಮೊದಲ ದಿನ ಎಪಿಎಂಸಿ ಮಾರುಕಟ್ಟೆಗೆ 512 ಹತ್ತಿ ಅಂಡಿಗೆಗಳು ಬಂದಿದ್ದವು. ಸ್ಥಳೀಯ 21 ದಲ್ಲಾಳಿಗಳು ವಹಿವಾಟು ಆರಂಭಿಸಿದ್ದರು. ಈ ಬಾರಿ ಅಂದಾಜು ಬೆಲೆ ಪ್ರತಿ ಕ್ವಿಂಟಾಲ್​ಗೆ 6700 ರಿಂದ 7000 ರೂ. ವರೆಗೆ ಆಕರಿಸುವ ಸಾಧ್ಯತೆಗಳಿವೆ ಎಂದು ಹತ್ತಿ ಬೆಳೆಗಾರರು ನಿರೀಕ್ಷಿಸಿದ್ದಾರೆ.