ಧ್ರುವನಾರಾಯಣ್ ವಿರುದ್ಧ ಶಾಸಕ ವಾಗ್ದಾಳಿ

ನಂಜನಗೂಡು: ಚುನಾವಣೆಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರೂ ಎರಡು ಪಕ್ಷಗಳ ನಡುವೆ ಕಿತಾಪತಿ ತಂದಿಟ್ಟು ದ್ವೇಷದ ರಾಜಕಾರಣ ಮಾಡುತ್ತಿರುವುದು ಸಿದ್ದರಾಮಯ್ಯ ಅವರೇ ಹೊರತು ಶ್ರೀನಿವಾಸಪ್ರಸಾದ್ ಅಲ್ಲ ಎಂದು ಶಾಸಕ ಬಿ.ಹರ್ಷವರ್ಧನ್ ಟಾಂಗ್ ಕೊಟ್ಟರು.

ನಗರದ ಯಾತ್ರಿ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಚುನಾವಣಾ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದರು. ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಡಾ.ಯತೀಂದ್ರ ಅವರು ವಿ.ಶ್ರೀನಿವಾಸಪ್ರಸಾದ್ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಆರೋಪ ಮಾಡಿರುವುದು ಸರಿಯಲ್ಲ.

ಮೈತ್ರಿ ಧರ್ಮ ಪಾಲನೆ ಮಾಡುವುದಾಗಿ ಹೇಳಿ ಮಂಡ್ಯ, ಹಾಸನ, ತುಮಕೂರು ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸಿ ವಿಷಮ ಪರಿಸ್ಥಿತಿ ನಿರ್ಮಾಣ ಮಾಡಿರುವ ಹಿಂದೆ ಸಿದ್ದರಾಮಯ್ಯ ಕೈವಾಡವಿರುವುದು ಸ್ಪಷ್ಟವಾಗಿದೆ. ದ್ವೇಷದ ರಾಜಕಾರಣ ಮಾಡುವ ಅವರ ತಂದೆ ಸಿದ್ದ ರಾಮಯ್ಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಶ್ರೀನಿವಾಸಪ್ರಸಾದ್ ಅವರ ವಿರುದ್ಧ ಮಾತನಾಡಲು ಡಾ.ಯತೀಂದ್ರ ಅವರಿಗೆ ನೈತಿಕತೆ ಯಿದೆಯೇ ಎಂದು ಪ್ರಶ್ನಿಸಿದರು.

ಧ್ರುವನಾರಾಯಣ ಅವರಿಗೆ ರಾಜಕೀಯ ಗುರುಗಳು ಯಾರೆಂಬುದು ಚಾಮರಾಜನಗರ ಜನತೆಗೆ ತಿಳಿದಿದೆ. ಆರಂಭಿಕ ದಿನಗಳಲ್ಲಿ ಬಿ.ಬಸವಲಿಂಗಪ್ಪ ಅವರ ಮನೆಗೆ ಧ್ರುವನಾರಾಯಣ್ ಬಂದಿದ್ದರು. ಬಸವಲಿಂಗಪ್ಪ ಅವರು ಏಕೆ ದೂರ ಮಾಡಿದರು ಎಂಬುದು ಧ್ರುವನಾರಾಯಣ ಅವರಿಗೆ ತಿಳಿದಿದೆ. ರಾಜಶೇಖರಮೂರ್ತಿ ಕೈಬಿಟ್ಟ ಮೇಲೆ ಯಾರ ಜತೆ ಕೈಜೋಡಿಸಿದ್ದು ಎಂಬುದನ್ನು ಧ್ರುವನಾರಾಯಣ ಅವರು ನೆನಪಿಸಿಕೊಳ್ಳಬೇಕು.

ಇದೇ ಶ್ರೀನಿವಾಸಪ್ರಸಾದ್ ಅವರ ಬಳಿ ಬಂದು ನಂಜನಗೂಡಿನಲ್ಲಿ ಸ್ಪರ್ಧಿಸಲು ಆಗಲ್ಲ. ನನಗೆ ಕೊಳ್ಳೇಗಾಲ ಕ್ಷೇತ್ರ ಕೊಡಿಸಿ ಅಂತ ಕಾಲಿಡಿದು ಬೇಡಿಕೊಂಡಿದ್ದು ನೆನಪಿಲ್ಲವೇ?. 2009ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಗಲವಾಡಿ ಶಿವಣ್ಣ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್ ಕೊಡುವುದಾಗಿ ಸೋನಿಯಾ ಗಾಂಧಿ ಮಾತು ಕೊಟ್ಟಿದ್ದರು. ಆದರೂ ನಿಮ್ಮನ್ನು ರಾಷ್ಟ್ರರಾಜಕಾರಣದಲ್ಲಿ ನೋಡಬೇಕೆಂಬ ಆಸೆಯಿಂದ ಶ್ರೀನಿವಾಸಪ್ರಸಾದ್ ಅವರು ಆಸ್ಕರ್ ಫರ್ನಾಂಡೀಸ್ ಬಳಿ ಚರ್ಚಿಸಿ ನಿಮಗೆ ಟಿಕೆಟ್ ಕೊಡಿಸಿ ಧೈರ್ಯ ತುಂಬಿ ಅಖಾಡಕ್ಕಿಳಿಸಿ ಗೆಲ್ಲಿಸಲಿಲ್ಲವೇ. ನಾನು ಇದನ್ನು ಧರ್ಮಸ್ಥಳ ಮಂಜುನಾಥೇಶ್ವರನ ಮೇಲೆ ಆಣೆ ಮಾಡಿ ಹೇಳಲು ಸಿದ್ಧನಿದ್ದೇನೆ. ಧ್ರುವನಾರಾಯಣ ಆಣೆ ಮಾಡಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.

ಶ್ರೀನಿವಾಸಪ್ರಸಾದ್ ಪಕ್ಷದಲ್ಲಿದ್ದರೆ ನಾನು ಪ್ರಬಲವಾಗಿ ಬೆಳೆಯಲು ಸಾಧ್ಯವಾಗಲ್ಲ ಎಂಬ ಭಾವನೆಯಿಂದ ಕಾಂಗ್ರೆಸ್ ಪಕ್ಷ ಬಿಡುವುದು ಧ್ರುವನಾರಾಯಣ ಅವರಿಗೆ ಅಗತ್ಯವಾಗಿತ್ತು. ಈ ಬಾರಿ ಚಾಮರಾಜನಗರ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಡಾ.ಮಹದೇವಪ್ಪ ಅವರಿಗೆ ಪಕ್ಷವಹಿಸಿದೆ. ಆದರೆ, ಸುನಿಲ್ ಬೋಸ್‌ಗೆ ನಂಜನಗೂಡು ಕ್ಷೇತ್ರದಿಂದ ಟಿಕೆಟ್ ತಪ್ಪಿಸಿದ್ದು ಧ್ರುವನಾರಾಯಣ ಎಂದು ಆರೋಪಿಸಿದರು.

ಶ್ರೀನಿವಾಸಪ್ರಸಾದ್ ಕಣಕ್ಕಿಳಿಯುವ ಬಗ್ಗೆ ಕಾರ್ಯಕರ್ತರಲ್ಲಿ ಉತ್ಸಾಹ ಹಾಗೂ ಗೊಂದಲವೂ ಇದೆ. ಕಳೆದ ವಿಧಾನಸಭಾ ಚುನಾವಣೆ ಬಳಿಕ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಚುನಾವಣಾ ನಿವೃತ್ತಿ ಘೋಷಿಸದಂತೆ ಮನವಿ ಮಾಡಿದ್ದೆ. ಕೆಲ ದಿನಗಳ ಹಿಂದೆ ಚಾಮರಾಜ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಪ್ರಸಾದ್ ಹೇಳಿಕೆ ನೀಡಿದಾಗಲೇ ಧ್ರುವನಾರಾಯಣ ಅರ್ಥ ಮಾಡಿಕೊಳ್ಳಬೇಕಿತ್ತು. ಇದೀಗ ಶ್ರೀನಿವಾಸಪ್ರಸಾದ್ ಅಭ್ಯರ್ಥಿ ಆಗಿರುವುದರಿಂದ ಎದುರಾಳಿ ಪಕ್ಷಕ್ಕೆ ನಡುಕ ಹುಟ್ಟಿಸಿದೆ. 25 ವರ್ಷ ಸಂಸದರಾಗಿ ಪ್ರಸಾದ್ ಹಾಗೂ 10 ವರ್ಷದಲ್ಲಿ ಧ್ರುವನಾರಾಯಣ ಸಾಧನೆ ಕುರಿತು ಚರ್ಚೆಯಾಗಲಿ ಎಂದರು.

ಕಾಂಗ್ರೆಸ್-ಜೆಡಿಎಸ್ ಮೇಲ್ನೋಟಕ್ಕೆ ಮೈತ್ರಿಯಾಗಿದ್ದರೂ ತಳಮಟ್ಟದಲ್ಲಿ ಹಳಸಿಕೊಂಡಿದೆ. 8 ಲೋಕಸಭಾ ಕ್ಷೇತ್ರಗಳನ್ನು ಧಾರೆ ಎರೆ ದಿ ರುವ ಕಾಂಗ್ರೆಸ್ 64 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಂತಾಗಿದೆ. ಚುನಾವಣೆಯಲ್ಲಿ ಧ್ರುವನಾರಾಯಣ ಗೆದ್ದರೆ ಕೇಂದ್ರದಲ್ಲಿ ಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಆದರೆ ಮುಂದಿನ ಪ್ರಧಾನಿ ನರೇಂದ್ರ ಮೋದಿಯೇ ಆಗಬೇಕೆಂದು ದೇಶವೇ ನಿರ್ಧರಿಸಿದೆ. ಪ್ರಸಾದ್ ಗೆದ್ದರೆ ಕೇಂದ್ರದ ಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಶ್ರೀನಿವಾಸಪ್ರಸಾದ್ ಗೆದ್ದರೆ ಅದು ಮೋದಿ ವರ್ಚಸ್ಸಿನಿಂದ ಮಾತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಚಾಮರಾಜನಗರಕ್ಕೆ ನಿಜವಾದ ಚೌಕಿದಾರ್ ಪ್ರಸಾದ್ ಆಗಬೇಕು. 39 ವರ್ಷದಿಂದ ಬಿಜೆಪಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದು ಈ ಬಾರಿ ವಿಜಯ ಪತಾಕೆ ಬಾವುಟ ಹಾರಿಸುವುದು ಶತಸಿದ್ಧ. ಅದು ಶ್ರೀನಿವಾಸಪ್ರಸಾದ್ ಅವರಿಂದ ಮಾತ್ರ ಸಾಧ್ಯ ಎಂದರು.

ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ಬಿ.ಎನ್.ಸದಾನಂದ, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಸಿ. ಚಿಕ್ಕರಂಗ ನಾಯ್ಕ, ರಾಜ್ಯ ಸಮಿತಿ ಸದಸ್ಯ ಕುಂಬ್ರಹಳ್ಳಿ ಸುಬ್ಬಣ್ಣ, ತಾಲೂಕು ಅಧ್ಯಕ್ಷ ಎಚ್.ಎಂ.ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಉದ್ಯಮಿ ಯು.ಎನ್.ಪದ್ಮನಾಭರಾವ್, ಮುಖಂಡರಾದ ಎನ್.ಆರ್.ಕೃಷ್ಣಪ್ಪಗೌಡ, ಸಿಂಧುವಳ್ಳಿ ಕೆಂಪಣ್ಣ, ಮಹೇಶ್, ವಿಜಯಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ, ಸದಸ್ಯ ಸಿದ್ದರಾಜೇಗೌಡ, ಅಣ್ಣಯ್ಯಶೆಟ್ಟಿ ಹಾಜರಿದ್ದರು.