ಭವಾನಿ ರೇವಣ್ಣ, ಮಾಜಿ ಸಚಿವ ಮಂಜು ಪುತ್ರನ ನಡುವೆ ವಾಕ್ಸಮರ

ಹಾಸನ: ಹಾಸನ ಜಿಲ್ಲೆಯ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹಾಸನದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಸದಸ್ಯ ಹಾಗೂ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಿನ್ನೆಲೆಯಲ್ಲಿ ಜಿ.ಪಂನಲ್ಲಿ ನಡೆದ ಸಭೆ ಗೊಂದಲ ಗೂಡಾಗಿದೆ. ಸದಸ್ಯರ ಖಾತೆ ಅದಲು ಬದಲಾದ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಿ.ಪಂ. ಸದಸ್ಯರ ನಡುವೆ ವಾಕ್ಸಮರವೇ ನಡೆದಿದೆ.

ಶಾಸಕರಾದ ಶಿವಲಿಂಗೇಗೌಡ ಹಾಗೂ ಸದಸ್ಯ ಮಂತರ್ ಗೌಡರ ನಡುವೆ ಕಿತ್ತಾಟ ನಡೆದಿದ್ದು, ಜಿ.ಪಂನಲ್ಲಿ ಕಡಿಮೆ ಸ್ಥಾನ ಗೆದ್ದಿದ್ದೀರಿ ಸುಮ್ಮನಿರಿ ಎಂದು ಶಾಸಕ ಶಿವಲಿಂಗೇಗೌಡ ಕಿಚಾಯಿಸಿದ್ದಕ್ಕೆ, ರಾಜ್ಯದಲ್ಲಿ 35 ಸ್ಥಾನ ಗೆದ್ದವರಿಗೆ ಮುಖ್ಯಮಂತ್ರಿ ಸ್ಥಾನವನ್ನೆ ಬಿಟ್ಟು ಕೊಟ್ಟಿದ್ದೇವೆ ಎಂದು ಮಂತರ್​ ಗೌಡ ತಿರುಗೇಟು ನೀಡಿದರು.

ಸಿಎಂ ಸ್ಥಾನ ಕೊಡಿ ಎಂದು ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಯಾರ ಮನೆ ಬಾಗಿಲಿಗೂ ಬಂದಿರಲಿಲ್ಲ ಎಂದು ಭವಾನಿ ರೇವಣ್ಣ ಮಂತರ್ ಗೌಡಗೆ ಪ್ರತ್ಯುತ್ತರ ನೀಡಿದರು. ಅಲ್ಲದೆ, ಇಲ್ಲಿ ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತಾಡಬೇಡಿ ಎಂದು ರೇಗಿದರು.

ಈ ಹಿಂದೆ ಮಾಜಿ ಸಚಿವ ಎ. ಮಂಜು ಅವರು ಸಚಿವ ಎಚ್​.ಡಿ. ರೇವಣ್ಣ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ್ದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಈಗ ಸಚಿವ ಮಂಜು ಪುತ್ರ ಮಂತರ್ ಗೌಡ ಹಾಗೂ ಭವಾನಿ ರೇವಣ್ಣ ನಡುವಿನ ವಾಕ್ಸಮರ ಮತ್ತೊಮ್ಮೆ ಕಾಂಗ್ರೆಸ್​, ಜೆಡಿಎಸ್​ ನಡುವಿನ ಅಸಮಾಧಾನವನ್ನು ಹೊರಹಾಕಿದೆ.