ತೈಲ ಟ್ಯಾಂಕರ್‌ನ ಚಕ್ರ ಸಿಡಿತ

ಹಾಸನ: ಚಲಿಸುತ್ತಿದ್ದ ತೈಲ ಟ್ಯಾಂಕರ್‌ನ ಮುಂಬದಿ ಚಕ್ರ ಸಿಡಿದ ರಭಸಕ್ಕೆ ಲಾರಿಯ ಚಕ್ರಗಳು ಚೆಲ್ಲಾಪಿಲ್ಲಿಯಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ತಾಲೂಕಿನ ಕಟ್ಟಾಯ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ 12.30ರಲ್ಲಿ ಅವಘಡ ಸಂಭವಿಸಿದೆ. ಹಾಸನದ ಎಚ್‌ಪಿಸಿಎಲ್‌ನಲ್ಲಿ ಡೀಸೆಲ್ ತುಂಬಿಕೊಂಡು ಅರಕಲಗೂಡಿಗೆ ಹೊರಟಿದ್ದ ಟ್ಯಾಂಕರ್ ಇದಾಗಿದೆ. ಅತಿಯಾದ ಬಿಸಿಲು ಹಾಗೂ ವೇಗದ ಚಾಲನೆಯಿಂದ ಟಯರ್ ಸಿಡಿದಿದೆ ಎನ್ನಲಾಗಿದೆ. ಪರಿಸ್ಥಿತಿ ಅರಿತ ಚಾಲಕ ತಕ್ಷಣವೇ ವಾಹನದಿಂದ ಹೊರ ಹಾರಿದ್ದಾನೆ. ಈ ವೇಳೆ ರಸ್ತೆಯಲ್ಲಿ ಯಾವುದಾದರೂ ವಾಹನ ಅಥವಾ ಜನರು ಬಂದಿದ್ದರೂ ಭಾರಿ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ಚಕ್ರಗಳನ್ನು ಕಳೆದುಕೊಂಡ ಟ್ಯಾಂಕರ್ ಅದೇ ಸ್ಥಿತಿಯಲ್ಲಿ ನಿಂತಿತ್ತು. ಡೀಸೆಲ್ ಕೂಡ ಸೋರಿಕೆಯಾಗಿಲ್ಲ. ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿ ಗೊರೂರು ಠಾಣೆ ಪೊಲೀಸರು ಸೇರಿದ್ದ ಜನರನ್ನು ಚದುರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ವಾಹನ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.