ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಾಸನಕ್ಕೆ 1ನೇ ಸ್ಥಾನ ಸಿಗಲು ಕಾರಣ ಯಾರು? ಜಾಲತಾಣದಲ್ಲಿ ಶುರುವಾಯ್ತು ಕ್ರೆಡಿಟ್​ ವಾರ್​

ಹಾಸನ: ಈ ಬಾರಿಯ ಹಾಸನ ಜಿಲ್ಲೆಯ ಎಎಸ್ಸೆಸ್ಸೆಲ್ಸಿ ಫಲಿತಾಂಶ ಅಚ್ಚರಿಗೆ ಕಾರಣವಾಗಿದೆ. ಎಲ್ಲ ಜಿಲ್ಲೆಗಳನ್ನು ಹಿಂದಿಕ್ಕಿ ಹಾಸನ ಮೊದಲನೇ ಸ್ಥಾನಕ್ಕೆ ಜಿಗಿದಿರುವುದರ ಹಿಂದಿನ ಶಕ್ತಿ ಏನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮದೇ ಯೋಚನಾ ಶೈಲಿಯಲ್ಲಿ ಚರ್ಚೆ ಮಾಡುತ್ತಿದ್ದು, ಅವುಗಳ ಸ್ಯಾಂಪಲ್​ ಇಲ್ಲಿದೆ…

ನಿನ್ನೆ(ಮಂಗಳವಾರ) 2018 ಮತ್ತು 2019ನೇ ಸಾಲಿನ ಫಲಿತಾಂಶ ಪ್ರಕಟವಾಯಿತು. ಇದಾದ ಬಳಿಕ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಅವರು ಟ್ವೀಟ್​ ಮೂಲಕ ಈ ಬಾರಿಯ ಫಲಿತಾಂಶ ಹೆಚ್ಚಳಕ್ಕೆ ಅಧಿಕಾರಿಗಳಿಗೆ ನೀಡಿದ ಸಂಪೂರ್ಣ ಸ್ವಾತಂತ್ರ್ಯವೇ ಕಾರಣ ಎಂದು ಹೇಳಿದ್ದರು.

ಇದೀಗ ನೆಟ್ಟಿಗರು ಫಲಿತಾಂಶದ ಕ್ರೆಡಿಟ್​ ಅನ್ನು ತಮ್ಮದೇ ರೀತಿಯಲ್ಲಿ ನೀಡುತ್ತಿದ್ದು, ಅದಕ್ಕೆ ರಾಜಕೀಯವನ್ನು ಎಳೆದು ತಂದಿದ್ದಾರೆ. ಫಲಿತಾಂಶದಲ್ಲಿ ಹಾಸನ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಲು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್​.ಡಿ.ರೇವಣ್ಣ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಕಾರಣ ಎಂದು ಜೆಡಿಎಸ್​ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಲ್ಲದೆ, ಈ ಫಲಿತಾಂಶ ಮೈತ್ರಿ ಸರ್ಕಾರದ ಪ್ರಭಾವ ಎಂದಿದ್ದಾರೆ.

ಎ.ಮಂಜು ಮಂತ್ರಿಯಾಗಿದ್ದ ಕಾರಣ ಎಂದು ಅವರ ಬೆಂಬಲಿಗರು ಹಾಗೂ ಪ್ರೀತಂ ಗೌಡ ಶಾಸಕರಾಗಿದ್ದಕ್ಕೆ ಎಂದು ಅವರ ಬೆಂಬಲಿಗರು ಪೋಸ್ಟ್​ಗಳನ್ನು ಹಾಕಿ ಸಾಮಾಜಿಕ ಜಾಲತಾಣವನ್ನು ಚರ್ಚೆಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.

ಮತ್ತೆ ಕೆಲವರು ಫಲಿತಾಂಶದ ಕ್ರೆಡಿಟ್​ ಅನ್ನು ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರಿಗೆ ನೀಡಿದ್ದಾರೆ. ರೋಹಿಣಿಯವರು ಶಿಕ್ಷಕರಿಗೆ ಆತ್ಮಸ್ಥೈರ್ಯ ಹಾಗೂ ಪ್ರೋತ್ಸಾಹ ನೀಡಿದಕ್ಕೆ ಈ ಫಲಿತಾಂಶ ಬಂದಿದೆ ಎಂದು ಹೇಳಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)