ಚಿಮ್ಮಿಕೋಲ್ ಗ್ರಾಮಸ್ಥರ ಪ್ರತಿಭಟನೆ

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಆಗ್ರಹ * ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷೃ ಆರೋಪ

ಹಾಸನ: ಸಕಲೇಶಪುರ ತಾಲೂಕಿನ ಚಿಮ್ಮಿಕೋಲ್ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ)ದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹಾನುಬಾಳ್ ಹೋಬಳಿಯ ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಈ ಗ್ರಾಮದಲ್ಲಿ 40 ದಲಿತ ಕುಟುಂಬಗಳು ಕೂಲಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದೇವೆ. ಆದರೆ ಕುಡಿಯುವ ನೀರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಗ್ರಾಮದಲ್ಲಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರವಿದ್ದು, 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಧ್ಯಾಹ್ನದ ಬಿಸಿಯೂಟಕ್ಕೂ ನೀರಿಲ್ಲ. ಹಾನುಬಾಳ್‌ನಿಂದ ನಿತ್ಯ ಬರುವ ಶಿಕ್ಷಕ ಕ್ಯಾನ್‌ಗಳಲ್ಲಿ ನೀರು ತರುತ್ತಾರೆ. ಕೆಲವು ಬಾರಿ ನೀರು ತರದೇ ಇದ್ದಾಗ ಮಕ್ಕಳಿಗೆ ಅಡುಗೆ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಮನೆಯಿಂದಲೇ ಊಟದ ಡಬ್ಬಿ ಕಳುಹಿಸಬೇಕಾಗುತ್ತದೆ. ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿರುವ ಗ್ರಾಮಸ್ಥರು ಅನಾರೋಗ್ಯಕ್ಕೀಡಾದರೂ ಆಸ್ಪತ್ರೆ ಇಲ್ಲ ಎಂದರು.

ಗ್ರಾಮದಲ್ಲಿ ಮೊದಲಿನಿಂದಲೂ ನೀರಿಗೆ ಸಮಸ್ಯೆ ಇದೆ. ಇಷ್ಟು ದಿನ ಕಾಫಿ ಪ್ಲಾಂಟರ್‌ವೊಬ್ಬರು ತಮ್ಮ ಬೋರ್‌ವೆಲ್ ನೀರನ್ನು ನೀಡುತ್ತಿದ್ದರು. ಮೂರು ತಿಂಗಳಿಂದ ಅವರೂ ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ. ಕಾಫಿ ತೋಟದ ಕೆಲಸಕ್ಕೆ ಹೋದವರಿಗೆ ಮಾತ್ರ ನೀರು ನೀಡುತ್ತಾರೆ. ದುಡಿಮೆಗೆ ಹೋಗದ 20ಕ್ಕೂ ಹೆಚ್ಚು ಕುಟುಂಬಗಳು ನೀರಿಲ್ಲದೆ ಪರದಾಡುವಂತಾಗಿದೆ ಎಂದು ಅವಲತ್ತುಕೊಂಡರು.

ಗ್ರಾಮದಿಂದ 1 ಕಿ.ಮೀ. ದೂರದಲ್ಲಿರುವ ಬಾವಿಯಿಂದ ನೀರು ತರಬೇಕು. ಆದರೆ, ರಸ್ತೆ ವ್ಯವಸ್ಥೆ ಸರಿಯಿಲ್ಲದ ಕಾರಣ ಮಹಿಳೆಯರು ಬಾವಿಗೆ ಹೋಗಲು ಹೆದರುತ್ತಾರೆ. ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು, ಬಾವಿಗೆ ತೆರಳಲು ಪುರುಷರೂ ಹೆದರುವಂತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.
ಶಾಸಕ ಎಚ್.ಕೆ.ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗ್ರಾಪಂ ವತಿಯಿಂದ ಶೀಘ್ರದಲ್ಲೇ ನೀರಿನ ಪೈಪ್‌ಲೈನ್ ವ್ಯವಸ್ಥೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿ.ಪಂ. ಪ್ರಭಾರ ಸಿಇಒ ಪುಟ್ಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.