ಪೆಟ್ರೋಲ್ ಬಂಕ್‌ನಲ್ಲಿ ದರೋಡೆ

ಮಾರಕಾಸ್ತ್ರ ತೋರಿಸಿ 2.2 ಲಕ್ಷ ರೂ. ಕಳವು .

ಹಿರೀಸಾವೆ: ಗ್ರಾಹಕರಂತೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳ ತಂಡವೊಂದು ಪೆಟ್ರೋಲ್ ಬಂಕಿನ ಕೆಲಸಗಾರರಿಗೆ ಮಾರಕಾಸ್ತ್ರಗಳನ್ನು ತೋರಿಸಿ 2.20 ಲಕ್ಷ ರೂ.ಗಳನ್ನು ದೋಚಿರುವ ಘಟನೆ ಸೋಮವಾರ ಮುಂಜಾನೆ ಹಿರೀಸಾವೆಯಲ್ಲಿ ನಡೆದಿದೆ.

ಹಿರೀಸಾವೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದಲ್ಲಿರುವ ಶ್ರೀ ಲಕ್ಷ್ಮೀರಂಗನಾಥ ಪೆಟ್ರೋಲ್ ಬಂಕ್ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಶೇಷಾದ್ರಿ ಮತ್ತು ಪ್ರಕಾಶ್ ಎಂಬ ಇಬ್ಬರು ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂಕ್‌ಗೆ ಬಂದ ಚಾಲಕ ಕೆಳಗಿಳಿದು ಡೀಸೆಲ್ ಹಾಕುವಂತೆ ತಿಳಿಸಿದ್ದಾನೆ. ಪ್ರಕಾಶ್ ಡೀಸೆಲ್ ಹಾಕಲು ಮುಂದಾದಾಗ ಕಾರಿನಿಂದ ಉಳಿದ ನಾಲ್ವರು ದುಷ್ಕರ್ಮಿಗಳು ಲಾಂಗ್,ಮಚ್ಚುಗಳೊಂದಿಗೆ ಕೆಳಗಿಳಿದಿದ್ದಾರೆ.

ಇದರಿಂದ ಗಾಬರಿಗೊಂಡ ಸಿಬ್ಬಂದಿ ಮಾಲೀಕರಿಗೆ ಕರೆ ಮಾಡಲು ಯತ್ನಿಸುವಷ್ಟರಲ್ಲಿ ದರೋಡೆಕೋರರು ಇಬ್ಬರನ್ನು ಸುತ್ತುವರಿದು ಶಸ್ತ್ರಾಸ್ತ್ರಗಳನ್ನು ತೋರಿಸಿ ಕೂಗಾಡದಂತೆ ಎಚ್ಚರಿಸಿದ್ದಾರೆ. ಶೇಷಾದ್ರಿ ಮತ್ತು ಪ್ರಕಾಶನ ಕುತ್ತಿಗೆಗೆ ಮಚ್ಚು ಹಿಡಿದು ಹಣ ಎಷ್ಟಿದೆ ಎಲ್ಲವನ್ನು ಕೊಡಿ ಎಂದು ಗದರಿಸಿದ್ದಾರೆ. ಅಲ್ಲಿಂದ ಬಂಕ್‌ನ ಕಚೇರಿಗೆ ಎಳೆದುಕೊಂಡು ಹೋದ ದರೋಡೆಕೋರರು ಕ್ಯಾಷ್ ಟೇಬಲ್‌ನ ಬಾಗಿಲನ್ನು ಮಚ್ಚಿನಿಂದ ಒಡೆದು ಅದರಲ್ಲಿದ್ದ 2.20 ಲಕ್ಷ ರೂ.ಗಳನ್ನು ತಾವು ತಂದಿದ್ದ ಬ್ಯಾಗ್‌ಗೆ ತುಂಬಿಕೊಂಡಿದ್ದಾರೆ.

ಅಲ್ಲೇ ಪಕ್ಕದಲ್ಲಿದ್ದ ಬೀರುವಿನ ಡೋರನ್ನು ಮಚ್ಚಿನಿಂದ ಒಡೆಯಲು ಪ್ರಯತ್ನಿಸಿ ಜಖಂ ಮಾಡಿದ್ದಾರೆ, ಅಷ್ಟರಲ್ಲಿ ಶೇಷಾದ್ರಿ ಎಂಬ ಯುವಕ ಬೀರುವಿನ ಕೀ ಹಿಂದಿನ ರೂಮಿನಲ್ಲಿದೆ ತರುತ್ತೇನೆ ಎಂದು ಹೇಳಿ ಅಲ್ಲಿಂದ ಬಂಕಿನ ಹಿಂಭಾಗಕ್ಕೆ ಬಂದವನೇ ಕಾಂಪೌಂಡನ್ನು ನೆಗೆದು ಪರಾರಿಯಾಗಿದ್ದಾನೆ.

ಸಿಸಿ ಟಿವಿ ಜಖಂ: ಕ್ಯಾಷ್ ಟೇಬಲಿನಿಂದ ಹಣ ತೆಗೆಯುವ ಸಮಯದಲ್ಲಿ ಉಳಿದ ದರೋಡೆಕೋರರು ಬಂಕಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ವೈರ್‌ಗಳನ್ನು ಕಿತ್ತುಹಾಕಿದ್ದು, ರಿಸೀವರ್‌ಗಳನ್ನು ಲಾಂಗ್‌ನಿಂದ ಒಡೆದು ಜಖಂಗೊಳಿಸಿದ್ದಾರೆ. ಆ ವೇಳೆಗಾಗಲೇ ಶೇಷಾದ್ರಿ ಎಂಬ ಯುವಕ ಅಲ್ಲಿಂದ ಓಡಿ ಹೋಗಿರುವ ಪರಿಣಾಮ ಯಾರಿಗಾದರೂ ತಿಳಿಸಬಹುದು ಎಂದು ಗಾಬರಿಗೊಂಡಿದ್ದ ದರೋಡೆಕೋರರು ಬಂಕಿನ ರೆಸ್ಟ್ ರೂಮಿನಲ್ಲಿ ಮಲಗಿದ್ದ ಮತ್ತಿಬ್ಬರು ಕೆಲಸಗಾರರಾದ ಸುನಿಲ್ ಹಾಗೂ ಶ್ರೀನಿವಾಸ್ ಎಂಬವರನ್ನು ಎಚ್ಚರಗೊಳಿಸಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಅವರ ಬಳಿ ಇದ್ದ 4 ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.