ಮಕ್ಕಳು ಸೈನಿಕರಾಗುವ ಕನಸು ಕಾಣಬೇಕು

ಹಾಸನ: ಯುವಕರು ಇಂಜಿನಿಯರ್ ಅಥವಾ ವೈದ್ಯನಾಗಬೇಕೆಂಬ ಬಯಕೆಯ ಜತೆಗೆ ದೇಶ ಕಾಯುವ ಸೈನಿಕರಾಗಲು ಮನಸ್ಸು ಮಾಡಬೇಕೆಂದು ದಿ. ಸುಬೇದಾರ್ ತೇಜೂರು ನಾಗೇಶ್ ಪತ್ನಿ ಆಶಾ ಕಿವಿಮಾತು ಹೇಳಿದರು.

ನಗರದ ವಿದ್ಯಾ ನಗರ ಕ್ರೈಸ್ಟ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ದೇಶ ಸೇವೆಯಲ್ಲಿ ಸೈನಿಕರ ಪಾತ್ರ ಮಹತ್ತರವಾದುದು. ಪೋಷಕರು ತಮ್ಮ ಮಕ್ಕಳಿಗೆ ದೇಶದ ಇತಿಹಾಸ, ಗಡಿ ರಕ್ಷಣೆಯಲ್ಲಿ ಸೈನಿಕರ ಪಾತ್ರಗಳ ಬಗ್ಗೆ ತಿಳಿಸಿಕೊಡಬೇಕು ಎಂದರು.

ಪ್ರಾಂಶುಪಾಲ ಫ್ರೈಸನ್ ಕೆ. ಥಾಮಸ್ ಮಾತನಾಡಿ, ಸ್ವಾತಂತ್ರೃ ನಂತರ ಭಾರತ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ದೇಶದಲ್ಲಿ ಹೆಚ್ಚಿರುವ ಭಯೋತ್ಪಾದನಾ ಚಟುವಟಿಕೆಗೆ ಶಾಶ್ವತ ಕಡಿವಾಣ ಹಾಕಿದರೆ ಸುಭದ್ರ ರಾಷ್ಟ್ರ ಕಟ್ಟಿಕೊಳ್ಳಬಹುದು ಎಂದರು.

ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಾ. ಬಿ.ಆರ್. ಅಂಬೇಡ್ಕರ್, ಬಾಬು ರಾಜೇಂದ್ರ ಪ್ರಸಾದ್ ಸೇರಿದಂತೆ ಇತರ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಶಾಲೆಯ ಆಡಳಿತಾಧಿಕಾರಿ ಶೋಭಿ, ಜೋಷ್ ಹಾಗೂ ಇತರರು ಇದ್ದರು.