ಗೌಡರ ಸೋಲಿಗೆ ರೇವಣ್ಣ, ಭವಾನಿ , ಪ್ರಜ್ವಲ್ ಕಾರಣ

ಹಾಸನ: ತಮ್ಮ ಕರ್ಮಕ್ಷೇತ್ರವಾಗಿದ್ದ ಹಾಸನದಿಂದ ದೇವೇಗೌಡರು ತುಮಕೂರಿಗೆ ವಲಸೆ ಹೋಗಬೇಕು ಎಂದು ತೀರ್ಮಾನಿಸಿದ ಅವರ ಕುಟುಂಬದ ಕಿಚನ್ ಕ್ಯಾಬಿನೆಟ್‌ನಿಂದಾಗಿಯೇ ಪರಾಭವಗೊಳ್ಳಬೇಕಾಯಿತು ಎಂದು ಶಾಸಕ ಪ್ರೀತಂ ಜೆ.ಗೌಡ ಅಭಿಪ್ರಾಯಪಟ್ಟರು.


ಇಡೀ ಜಿಲ್ಲೆಯ ಜನರು ಪಕ್ಷಾತೀತವಾಗಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕೆಂದು ಆಸೆಪಟ್ಟಿದ್ದರು. ಆದರೆ ಅವರು ಕುಟುಂಬ ರಾಜಕಾರಣ ವಿಸ್ತರಿಸಲು ಹೋಗಿ ಎಡವಟ್ಟು ಮಾಡಿಕೊಂಡರು. ಗೌಡರ ಸೋಲಿಗೆ ಎಚ್.ಡಿ.ರೇವಣ್ಣ, ಭವಾನಿ ಹಾಗೂ ಪ್ರಜ್ವಲ್ ಕಾರಣ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ದೇವೇಗೌಡರು ಕೇವಲ ಒಂದು ಕುಟುಂಬಕ್ಕೆ ಸೇರಿದ ವ್ಯಕ್ತಿಯಲ್ಲ. ಅವರು ದೇಶದ ಮುತ್ಸದ್ಧಿ ರಾಜಕಾರಣಿ. ರಾಜ್ಯ ಹಾಗೂ ದೇಶದ ಆಸ್ತಿ. ನಾವು ನಮ್ಮ ನಾಯಕ ಮೋದಿ ಹೆಸರು ಹೇಳಿ ಮತ ಕೇಳುತ್ತೇವೆ. ಅದೇ ಮಾದರಿಯಲ್ಲಿ ಜೆಡಿಎಸ್‌ನವರು ದೇವೇಗೌಡರ ನಾಮಬಲ ಬಳಕೆ ಮಾಡುತ್ತಾರೆ. ಆದರೀಗ ಅವರನ್ನೇ ಸೋಲಿಸಿದ್ದಾರೆ. ಈಗ ಯಾರ ಮುಖ ಇಟ್ಟುಕೊಂಡು ಮತ ಪಡೆಯುತ್ತಾರೆ ಎಂದು ಟಾಂಗ್ ನೀಡಿದರು.


ರೇವಣ್ಣ ಉಡಾಫೆ ಬಿಡಲಿ: ಸುಮಲತಾ ಗೆಲುವಿಗೆ ಸಚಿವ ಎಚ್.ಡಿ.ರೇವಣ್ಣ ಅವರೇ ಪ್ರಮುಖ ಕಾರಣ. ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಿದರೆ ಅದು ರೇವಣ್ಣ ಪಾಲಾಗಬೇಕು. ಅವರು ಸುಮಲತಾ ಬಗ್ಗೆ ಲಘುವಾಗಿ ಮಾತನಾಡುವವರೆಗೂ ಪೈಪೋಟಿಯಿಂದ ನಡೆಯುತ್ತಿದ್ದ ಪ್ರಚಾರ ಅವರ ಮಾತಿನ ನಂತರ ಸಂಪೂರ್ಣ ಬದಲಾಯಿತು. ಇನ್ನಾದರೂ ಅವರು ಉಡಾಫೆ ಮಾತನಾಡುವುದನ್ನು ಮೊದಲು ಕಡಿಮೆ ಮಾಡಬೇಕು ಎಂದರು.


ಸನ್ಯಾಸತ್ವ ಹೇಳಿಕೆಗೆ ಬದ್ಧವಾಗಿರಲಿ: ದೇಶದಲ್ಲಿ ಮೋದಿಯವರನ್ನು ವೈಯಕ್ತಿಕವಾಗಿ ತೆಗಳಿದವರೆಲ್ಲರೂ ಹೀನಾಯವಾಗಿ ಸೋಲು ಕಂಡಿದ್ದಾರೆ. ರೇವಣ್ಣ ಅವರೂ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು. ನಾನು ಅದಕ್ಕಾಗಿ ಕಾಯುತ್ತಿದ್ದೇನೆ. ಅವರು ತಮ್ಮ ಮಾತಿಗೆ ಬದ್ಧವಾಗಿರಬೇಕು ಎಂದರು.


ರೇವಣ್ಣ ಮುಂದಾದರೂ ನಾನು ಎನ್ನುವ ನಾನತ್ವ ಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜನರು ಅವರನ್ನೂ ಮನೆಗೆ ಕಳಿಸುತ್ತಾರೆ. ಮಂಡ್ಯ ಜನರು ಅದನ್ನು ತೋರಿಸಿಕೊಟ್ಟಿದ್ದಾರೆ. ಅವರು ಕ್ಷುಲ್ಲಕ ರಾಜಕಾರಣ ಬಿಡದಿದ್ದರೆ ಜನಸಾಮಾನ್ಯರು ಅವರನ್ನು ಸಹಿಸುವುದಿಲ್ಲ ಎಂದರು.


ಹಾಸನದಲ್ಲಿ ಮಹಾಘಟಬಂಧನ್‌ಗೆ ಗೆಲುವು: ದೇಶದಲ್ಲಿ ಎಲ್ಲಿಯೂ ಮಹಾಘಟಬಂಧನ್ ಯಶಸ್ವಿಯಾಗಿಲ್ಲ. ಆದರೆ ಹಾಸನ ಕ್ಷೇತ್ರದಲ್ಲಿ ಅದರಿಂದ ಜೆಡಿಎಸ್‌ಗೆ ಲಾಭವಾಯಿತು. ಮೈತ್ರಿ ಪಕ್ಷಗಳ ನಾಯಕರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದರು. ಹೀಗಾಗಿ ನಮಗೆ ಇಲ್ಲಿ ಸೋಲಾಯಿತು ಎಂದು ಪ್ರೀತಂ ವಿಶ್ಲೇಷಿಸಿದರು.


ಬಿಜೆಪಿ ಇಲ್ಲಿ ಸೋಲು ಕಂಡಿದ್ದರೂ ಮತಗಳಿಕೆಯಲ್ಲಿ ದಾಪುಗಾಲಿಟ್ಟಿದೆ. 2014ರ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿದ್ದ ಸಮಯದಲ್ಲಿಯೂ ಬಿಜೆಪಿ ಕೇವಲ 1.65 ಲಕ್ಷ ಮತ ಗಳಿಸಿತ್ತು. ಈ ಬಾರಿ 5.35 ಲಕ್ಷ ಮತ ಗಳಿಸಿದೆ. ಜಿಲ್ಲೆಯಲ್ಲಿ ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ನಡೆಸಿದೆ. ನಾವು ಪರಾಭವಗೊಂಡಿದ್ದರೂ ಹತಾಶರಾಗುವ ಫಲಿತಾಂಶವೇನೂ ಬಂದಿಲ್ಲ ಎಂದರು.


ದೇಶಾದ್ಯಂತ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಿ ನೋಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಹಾಸನವೂ ಹೊರತಾಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದು ಹೋಗಿತ್ತು. ಈ ಬಾರಿ ನಾಪತ್ತೆಯಾಗಿದೆ. ಕಳೆದು ಹೋದವರನ್ನು ಹುಡುಕಬಹುದು. ನಾಪತ್ತೆಯಾದವರನ್ನು ಎಲ್ಲಿಯೂ ಕಾಣಲು ಸಾಧ್ಯವಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.


ಮೊದಲು ಪ್ರಮಾಣವಚನ ಸ್ವೀಕರಿಸಲಿ: ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಅಭಿನಂದಿಸುತ್ತೇನೆ. ಆದರೆ ರಾಜೀನಾಮೆ ಮಾತನಾಡಿರುವ ಅವರು ಮೊದಲು ಸಂಸತ್‌ನಲ್ಲಿ ಪ್ರಮಾಣವಚನ ಸ್ವೀಕರಿಸಬೇಕು. ಆನಂತರ ಸ್ಪೀಕರ್‌ಗೆ ರಾಜೀನಾಮೆ ನೀಡಬೇಕಾಗುತ್ತದೆ. ಅದನ್ನು ಬಿಟ್ಟು ಮಾಧ್ಯಮದವರ ಮುಂದೆ ಮಾತನಾಡಬಾರದು ಎಂದರು.


ಐಐಟಿ ಬೇಡ, ಐಟಿ ಬೇಕು: ನಮ್ಮ ನಗರದಲ್ಲಿ ಐಐಟಿ ಸ್ಥಾಪನೆಯಾಗುವುದರಿಂದ ಸ್ಥಳೀಯರು ಭೂಮಿ ಕಳೆದುಕೊಳ್ಳಬೇಕಾಗುತ್ತದೆ ಹೊರತು ಯಾವುದೇ ಲಾಭವಾಗುವುದಿಲ್ಲ. ಈಗಾಗಲೇ ಒಂದು ಸಾವಿರ ಎಕರೆ ಭೂಮಿಯನ್ನು ಐಐಟಿಗಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುತ್ತೇವೆ ಎಂದರು.


ನಮಗೆ ಐಐಟಿಗಿಂತಲೂ ಮುಖ್ಯವಾಗಿ ಐಟಿ ಕಂಪೆನಿಗಳು ಬೇಕು.ನಗರದಲ್ಲಿ ನಾಲ್ಕು ಇಂಜಿನಿಯರಿಂಗ್ ಕಾಲೇಜುಗಳಿದ್ದರೂ ಉದ್ಯೋಗ ನೀಡಲು ಒಂದೇ ಒಂದು ಐಟಿ ಕಂಪೆನಿಯಿಲ್ಲ. ಆಲೂಗಡ್ಡೆ, ಟೊಮ್ಯಾಟೋ ಬೆಳೆಯುವವರ ಅನುಕೂಲಕ್ಕೆ ಒಂದೇ ಒಂದು ಚಿಪ್ಸ್ ಹಾಗೂ ಕೆಚಪ್ ತಯಾರಿಕೆ ಕಾರ್ಖಾನೆಗಳಿಲ್ಲ. ಕೈಗಾರಿಕಾ ಕೇಂದ್ರದಲ್ಲಿರುವ ಭೂಮಿ ನಮ್ಮ ಜನರ ಅನುಕೂಲಕ್ಕೆ ಬಳಕೆಯಾಗುವಂತಹ ಉದ್ಯಮಗಳಿಗೆ ನೀಡಬೇಕು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು.


ಆಪರೇಷನ್ ಬಗ್ಗೆ ಮಾತನಾಡಲ್ಲ:ಆಪರೇಷನ್ ಕಮಲ ಆಡಿಯೋ ವಿಚಾರ ನ್ಯಾಯಾಲಯದಲ್ಲಿದೆ. ಅದರಲ್ಲಿರುವ ಧ್ವನಿ ನನ್ನದಲ್ಲ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ, ನಿಂಬೆ ಹಣ್ಣು ಹಿಡಿದು ಶಾಸ್ತ್ರ ಹೇಳಲು ಜ್ಯೋತಿಷಿಯೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Leave a Reply

Your email address will not be published. Required fields are marked *