ಆರ್‌ಎಸ್‌ಎಸ್‌ಗೆ ಹೆಚ್ಚುತ್ತಿರುವ ಬೆಂಬಲ

ಹಾಸನ: ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ ಅನೇಕರು ಪ್ರಸ್ತುತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯವನ್ನು ಕೊಂಡಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹೇಳಿದರು.


ನಗರ ಹೊರವಲಯದ ಎಚ್.ಕೆ.ಎಸ್. ಅಂತಾರಾಷ್ಟ್ರೀಯ ಶಾಲಾ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.


ಕೆಲ ವರ್ಷಗಳ ಹಿಂದೆ ತಮ್ಮನ್ನು ಬೇಕಿದ್ದರೆ ‘ಕತ್ತೆ’ ಎಂದು ಕರೆಯಿರಿ, ಆದರೆ, ‘ಹಿಂದು’ ಅನ್ನಬೇಡಿ ಎನ್ನುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಆರ್‌ಎಸ್‌ಎಸ್ ಕಾರ್ಯ, ಸೇವಾ ಚಟುವಟಿಕೆ, ಶಾಖೆಯ ಅರಿವು ಹೊಂದಿದ ಅನೇಕರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ದೇಶಾದ್ಯಂತ 75 ಸಾವಿರ ಗ್ರಾಮಗಳಲ್ಲಿ ಶಾಖೆ ನಡೆಸುತ್ತಿರುವ ಏಕೈಕ ಸಂಸ್ಥೆ ಆರ್‌ಎಸ್‌ಎಸ್ ವಿಶ್ವದ 1025 ಕಡೆ ಶಾಖೆ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.


ದೇಶ ಹಾಗೂ ಗಡಿ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳು ನಡೆದಿದ್ದರೂ ಫಲಪ್ರದವಾಗಿರಲಿಲ್ಲ. ಆದರೆ ಗುರೂಜಿ ಅವರು 1925 ರಲ್ಲಿ ಶಾಖೆ ಪ್ರಾರಂಭಿಸುವ ಮೂಲಕ ಅದಕ್ಕೆ ಅಡಿಪಾಯ ಹಾಕಿದರು. ಯುವಕರನ್ನು ಒಂದೆಡೆ ಸೇರಿಸಿ ವ್ಯಾಯಾಮ, ಯೋಗ ಹೇಳಿಕೊಟ್ಟರೆ ದೇಶ ಕಟ್ಟುವುದು ಹೇಗೆಂದು ಕೆಲವರು ಪ್ರಶ್ನಿಸಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಕಂಡುಕೊಂಡಿದ್ದೇವೆ. ಆರ್‌ಎಸ್‌ಎಸ್ ಹುಟ್ಟು ಸಾಕಷ್ಟು ಆಶ್ಚರ್ಯ ಹುಟ್ಟಿಸಿದೆ ಎಂದು ಹೇಳಿದರು.


ಸಾಮಾನ್ಯ ಜನರೂ ದೇಶ ಸೇವೆಯಲ್ಲಿ ತೊಡಗಬೇಕು ಎನ್ನುವುದು ಗುರೂಜಿ ಅವರ ಗುರಿಯಾಗಿತ್ತು. ಆದ್ದರಿಂದಲೇ ಶಾಖೆಗಳನ್ನು ತೆರೆದರು. ಸಂಘ ಇಷ್ಟು ಬೃಹದಾಕಾರವಾಗಿ ಬೆಳೆಯಲು ಸ್ವಯಂ ಸೇವಕರ ಪಾತ್ರ ಹಿರಿದಾಗಿದೆ ಎಂದರು.


ಅಸ್ಪಶ್ಯತೆ ತೊಲಗಲಿ: ಭಾರತದಲ್ಲಿ ಅಸ್ಪಶ್ಯತೆಯ ಪಿಡುಗು ತೊಡೆದು ಹಾಕಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುವುದು ತಾಯಿ ಹಾಗೂ ಶಿಕ್ಷಕರ ಕರ್ತವ್ಯ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್ ಮಾತನಾಡಿ, ಸದೃಢ ದೇಶ ಕಟ್ಟಲು ಎಲ್ಲರೂ ಒಂದಾಗಬೇಕಿದ್ದು, ಇಲ್ಲಿ ತರಬೇತಿ ಪಡೆದ ಶಿಕ್ಷಣಾರ್ಥಿಗಳು ಸಜ್ಜನರನ್ನು ಗುರುತಿಸಿ ಅವರೂ ರಾಷ್ಟ್ರ ಕಾರ್ಯದಲ್ಲಿ ತೊಡಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ದ್ವಿತೀಯ ವರ್ಷ ಸಂಘ ಶಿಕ್ಷಾ ವರ್ಗದ ಸರ್ವಾಧಿಕಾರಿ ಉಮಾಪತಿ, ಪ್ರಥಮ ವರ್ಷ ಸಂಘ ಶಿಕ್ಷಾ ವರ್ಗದ ವರ್ಗಾಧಿಕಾರಿ ಡಾ. ಸಚ್ಚಿದಾನಂದ ರೈ ಹಾಜರಿದ್ದರು.

175 ಸ್ವಯಂ ಶಿಕ್ಷಕರು ಭಾಗಿ: ಏಪ್ರಿಲ್ 30ರಿಂದ ನಡೆದ ಪ್ರಥಮ ಹಾಗೂ ದ್ವಿತೀಯ ಸಂಘ ಶಿಕ್ಷಾ ವರ್ಗದಲ್ಲಿ 175 ಶಿಬಿರಾರ್ಥಿಗಳು ಭಾಗಿಯಾಗಿದ್ದರು.


ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಸಹ ಕಾರ್ಯವಾಹ ಮುಕುಂದ, ಭಾರತೀಯ ಬೌದ್ಧಿಕ್ ಪ್ರಮುಖ್ ಸ್ವಾಂತರಂಜನ್ ಇತರರು ದಿಕ್ಸೂಚಿ ಭಾಷಣ ಮಾಡಿದ್ದಾರೆ. 1973ರ ಬಳಿಕ ಹಾಸನದಲ್ಲಿ ನಡೆದ ದ್ವಿತೀಯ ಸಂಘ ಶಿಕ್ಷಾ ವರ್ಗ ಇದಾಗಿದೆ.

Leave a Reply

Your email address will not be published. Required fields are marked *