ಅಪ್ಪನ ಮುಹೂರ್ತ ಪ್ರಜ್ವಲ್ ನಾಮಪತ್ರ

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬೆಳಗ್ಗೆ ಹೊಳೆನರಸೀಪುರದ ಲಕ್ಷ್ಮಿನರಸಿಂಹಸ್ವಾಮಿ, ರಾಘವೇಂದ್ರ ಸ್ವಾಮಿ ಹಾಗೂ ಎದುರು ಮುಖದ ಆಂಜನೇಯ ದೇವಾಲಯಗಳಿಗೆ ಪಾಲಕರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹರದನಹಳ್ಳಿಯ ಕುಲದೈವ ದೇವೇಶ್ವರ ದೇವಾಲಯದಲ್ಲಿ ನಾಮಪತ್ರವಿರಿಸಿ ಪೂಜೆ ನೆರವೇರಿಸಿದರು. ಮಾವಿನಕೆರೆ ಬೆಟ್ಟದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆ ಬಳಿಕ ದೇವರ ಎದುರು ನಿಂತು ಪ್ರಜ್ವಲ್ ನಾಮಪತ್ರಕ್ಕೆ ಸಹಿ ಹಾಕಿದರು.

ನಗರದ ಎನ್​ಆರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪ್ರಜ್ವಲ್​ರನ್ನು ಮೆರವಣಿಗೆಯಲ್ಲಿ ಕರೆತಂದರು. ಬೃಹದಾಕಾರದ ಸೇಬುಹಣ್ಣಿನ ಹಾರ ಹಾಕಿದ ಬೆಂಬಲಿಗರು, ದಾರಿಯುದ್ಧಕ್ಕೂ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಪ್ರಜ್ವಲ್​ಗೆ ತಂದೆ ಎಚ್.ಡಿ.ರೇವಣ್ಣ, ತಾಯಿ ಭವಾನಿ ರೇವಣ್ಣ ಸಾಥ್ ನೀಡಿದರು.

ಹಾರಾಡಿದ ಕಾಂಗ್ರೆಸ್ ಬಾವುಟ: ಈವರೆಗೆ ಜಿಲ್ಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿ ನೋಡಿದ್ದ ಜನರಿಗೆ ಇದೇ ಮೊದಲ ಬಾರಿಗೆ ಎರಡೂ ಪಕ್ಷಗಳ ದೋಸ್ತಿ ಕಣ್ತುಂಬಿಕೊಳ್ಳುವ ಅವಕಾಶ ದೊರಕಿತು. ಮೆರವಣಿಗೆ ಹಾಗೂ ಬಹಿರಂಗ ಸಭೆಗಳಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸುವ ಮೂಲಕ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಬೆಂಬಲ ಸೂಚಿಸಿದರು. ಬಹಿರಂಗ ಸಭೆ ವೇದಿಕೆಯ ಬಲಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಬಾವುಟಗಳನ್ನು ಒಟ್ಟಾಗಿ ಸೇರಿಸಿ ಕಂಬವೊಂದಕ್ಕೆ ಕಟ್ಟುವ ಮೂಲಕ ಎರಡೂ ಪಕ್ಷಗಳ ಕಾರ್ಯಕರ್ತರನ್ನು ತೃಪ್ತಿಪಡಿಸಲಾಯಿತು. ಪ್ರಜ್ವಲ್​ಗೆ ಎಂಎಲ್​ಸಿ ಗೋಪಾಲಸ್ವಾಮಿ ಕಾಂಗ್ರೆಸ್ ಶಾಲು ಹಾಕಿದರೆ, ಜೆಡಿಎಸ್ ಮುಖಂಡರೂ ಗೋಪಾಲಸ್ವಾಮಿ ಕೊರಳಿಗೆ ಜೆಡಿಎಸ್ ಶಾಲು ಹಾಕಿದರು.

ಎರಡು ಬಾರಿ ನಾಮಪತ್ರ ಸಲ್ಲಿಕೆ

ಪುತ್ರನ ನಾಮಪತ್ರ ಸಲ್ಲಿಕೆಗಾಗಿ ಎಚ್.ಡಿ.ರೇವಣ್ಣ 12.30ರಿಂದ 12.40ರ ಮುಹೂರ್ತ ನಿಗದಿಪಡಿಸಿ ದ್ದರು. 12.30ಕ್ಕೆ ಡಿಸಿ ಕಚೇರಿ ಯೊಳಗೆ ತೆರಳಿದ ಪ್ರಜ್ವಲ್, 12.36ಕ್ಕೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ಎ.ಜಗನ್ನಾಥ್ ಸೂಚಕರಾಗಿ ಸಹಿ ಮಾಡಿದರು. ಬಹಿರಂಗ ಸಭೆ ಬಳಿಕ 2.35ಕ್ಕೆ ದೇವೇಗೌಡರ ಉಪಸ್ಥಿತಿಯಲ್ಲಿ ಪ್ರಜ್ವಲ್ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಹಾಸನ ಜನತೆಗೆ ದ್ರೋಹ ಮಾಡಿಲ್ಲ

ಹಾಸನ: ಪ್ರಜ್ವಲ್​ರನ್ನು ಅಭ್ಯರ್ಥಿಯಾಗಿ ಘೊಷಿಸುವಾಗ ದೇವೇಗೌಡರು ಕಣ್ಣೀರಿಟ್ಟಾಗ ಲಘುವಾಗಿ ಮಾತನಾಡಿದವರು ಮಾನವೀಯತೆ ಹಾಗೂ ಹೃದಯ ಇಲ್ಲದವರು ಎಂದು ಬಹಿರಂಗ ಸಭೆಯಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು. ದೇವೇಗೌಡರು ಕಣ್ಣೀರು ಹಾಕಿದ್ದು ನಿಮ್ಮನ್ನು ಮರುಳು ಮಾಡಲಿಲ್ಲ. 60 ವರ್ಷಗಳಿಂದ ಅವರನ್ನು ಬೆಳೆಸಿ ಪ್ರಧಾನಿ ಹುದ್ದೆಯಲ್ಲಿ ಕೂರಿಸಿದ ಜನರಿಂದ ದೂರವಾಗುವ ಸಂದರ್ಭ ಭಾವುಕರಾಗಿ ಕಣ್ಣೀರು ಹಾಕಿದರು. ಹಾಸನಾಂಬೆ ಮುಂಭಾಗ ನಿಂತು ಹೇಳುತ್ತಿದ್ದೇನೆ ಅವರು ಜಿಲ್ಲೆಯ ಜನರಿಗೆ ದ್ರೋಹ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು. ರಾಜ್ಯದ ಕೆಲವು ಸುದ್ದಿವಾಹಿನಿಗಳಿಗೆ ನಾವು ಏನು ದ್ರೋಹ ಮಾಡಿದ್ದೇವೆ ಎನ್ನುವುದು ಗೊತ್ತಿಲ್ಲ. ಕಳೆದ 9 ತಿಂಗಳಲ್ಲಿ ನಾವು ಮಾಡಿದ ಒಂದು ಒಳ್ಳೆಯ ಕೆಲಸವನ್ನೂ ತೋರಿಸುವುದಿಲ್ಲ. ಹಾಸನಕ್ಕೆ ಬಂದು ಯಾರಿಗೆ ವೋಟ್ ಹಾಕುತ್ತೀರಿ ಎಂದು ಕಾಲೇಜು ವಿದ್ಯಾರ್ಥಿನಿಯರಿಗೆ ಮೈಕ್ ಹಿಡಿಯುತ್ತಾರೆ. ಅವರು ಮೋದಿ ಎನ್ನುತ್ತಾರೆ. ಹಾಸನಕ್ಕೆ ಮೋದಿಯವರು ಏನು ಮಾಡಿದ್ದಾರೆ ಎಂದು ವೋಟ್ ಹಾಕುತ್ತೀರಿ ಎಂದು ನನ್ನ ಮಗಳ ಸಮಾನರಾದ ಆ ಹುಡುಗಿಯರನ್ನು ಕೇಳುತ್ತೇನೆ ಎಂದರು.

ರಾಷ್ಟ್ರ ರಾಜಕಾರಣ ದಲ್ಲಿ ಮುಂದೆ ಏನಾಗುತ್ತದೆ ಗೊತ್ತಿಲ್ಲ. ಸದ್ಯಕ್ಕೆ ರಾಹುಲ್ ಗಾಂಧಿ ಪ್ರಧಾನಿ ಮಾಡಲು ದೇವೇಗೌಡರು ಬೆಂಬಲ ಸೂಚಿಸಿದ್ದಾರೆ. 1996ರಲ್ಲಿ ನಮ್ಮ ರಾಜ್ಯ ದಾಟಿ ಬರುವುದಿಲ್ಲ ಎನ್ನುತ್ತಿದ್ದ ಗೌಡರನ್ನು ಬಲವಂತವಾಗಿ ಪ್ರಧಾನಿ ಮಾಡಿದ್ದರು. ಈ ಬಾರಿ ಏನಾಗುತ್ತದೆಯೋ ನೋಡೋಣ.

| ಎಚ್.ಡಿ.ಕುಮಾರಸ್ವಾಮಿ ಸಿಎಂ

10.11 ಕೋಟಿ ರೂ. ಆಸ್ತಿ ಒಡೆಯ

ಹಾಸನ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 10.11 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಚರಾಸ್ತಿಗಳಲ್ಲಿ 18 ಹಸು ಹಾಗೂ 2 ಎತ್ತುಗಳು ಸೇರಿರುವುದು ವಿಶೇಷ. ಸ್ವಂತ ಕಾರಿಲ್ಲ. ಆದರೆ 5 ಲಕ್ಷ ರೂ. ಮೌಲ್ಯದ ಕೃಷಿ ಉದ್ದೇಶದ ಟ್ರ್ಯಾಕ್ಟರ್ ಹೊಂದಿದ್ದಾರೆ.

ಹೊಳೆನರಸೀಪುರದ ಚನ್ನಾಂಬಿಕ ಕನ್ವೆನ್ಷನ್ ಹಾಲ್​ನಲ್ಲಿ 14.66 ಲಕ್ಷ ರೂ., ಸಿಎನ್​ಡಿ ಎಂಟರ್​ಪ್ರೖೆಸಸ್ ಪ್ರೖೆ.ಲಿ. ಷೇರುಗಳಲ್ಲಿ 27.10 ಲಕ್ಷ ರೂ., ಸರ್ದಾರ್ ಸರೋವರ್ ಬಾಂಡ್​ನಲ್ಲಿ 3 ಸಾವಿರ ರೂ., ಸಿಎನ್​ಡಿ ಎಂಟರ್​ಪ್ರೖೆಸಸ್ ಪ್ರೖೆ.ಲಿ.ನಲ್ಲಿ 49.29 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.

ವಿವಿಧ ಬ್ಯಾಂಕ್ ಖಾತೆಗಳಲ್ಲಿ 11.41 ಲಕ್ಷ ರೂ. ಠೇವಣಿ ಹೊಂದಿದ್ದಾರೆ. ಸುಮಾರು 1,100 ಗ್ರಾಂ ಚಿನ್ನಾಭರಣ, 18 ಕೆಜಿ ಬೆಳ್ಳಿ ವಸ್ತು, 5 ಕೆಜಿ ಬೆಳ್ಳಿ ಆಭರಣ ಸೇರಿ ಒಟ್ಟು 1.64 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಅಜ್ಜಿ ಚನ್ನಮ್ಮಗೆ 23 ಲಕ್ಷ ರೂ., ಸಹೋದರ ಆರ್.ಸೂರಜ್​ಗೆ 37.20 ಲಕ್ಷ ರೂ. ಹಾಗೂ ಸನ್​ಡ್ರೖೆ ಲೋನ್ಸ್ ಆಂಡ್ ಅಡ್ವಾನ್ಸ್ ಸಂಸ್ಥೆಗೆ 25 ಲಕ್ಷ ರೂ. ಸಾಲ ನೀಡಿದ್ದಾರೆ. ನೆಲಮಂಗಲ ತಾಲೂಕಿನ ಬಾವಿಕೆರೆ, ಹೊಳೆನರಸೀಪುರ ತಾಲೂಕಿನ ಮಾರಗೋಡನಹಳ್ಳಿ, ಹಾಸನ ತಾಲೂಕಿನ ಗೌರಿಪುರ, ತವರೂರು ಪಡುವಲಹಿಪ್ಪೆಯಲ್ಲಿ 3.60 ಕೋಟಿ ರೂ. ಮೌಲ್ಯದ 52 ಎಕರೆ 16 ಗುಂಟೆ ಕೃಷಿ ಭೂಮಿ, ಮೈಸೂರಿನ ಕುವೆಂಪುನಗರದಲ್ಲಿ 1.90 ಕೋಟಿ ರೂ. ಮೌಲ್ಯದ ವಾಣಿಜ್ಯ ಕಟ್ಟಡ, ಮೈಸೂರಿನ ಶ್ರೀರಾಂಪುರದಲ್ಲಿ 2.75 ಕೋಟಿ ರೂ. ಬೆಲೆಬಾಳುವ ಕೃಷಿಯೇತರ ಭೂಮಿ ಇದೆ.

ಆದರೆ, ಸ್ವಂತ ಮನೆ ಇಲ್ಲ. ಪ್ರಜ್ವಲ್ ತಂದೆ ಎಚ್.ಡಿ.ರೇವಣ್ಣ ಅವರಿಂದ 1.26 ಕೋಟಿ ರೂ., ತಾಯಿ ಭವಾನಿಯಿಂದ 43.75 ಲಕ್ಷ ರೂ. ಸೇರಿ ಕುಟುಂಬದ ವಿವಿಧ ಸದಸ್ಯರಿಂದ 3.72 ಕೋಟಿ ರೂ. ಸಾಲ ಪಡೆದಿದ್ದಾರೆ. ಅವಿವಾಹಿತರಾಗಿರುವ ಪ್ರಜ್ವಲ್, 2013-14ನೇ ಸಾಲಿನಲ್ಲಿ ಬೆಂಗಳೂರು ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಸ್​ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ ಪದವಿ ಪಡೆದಿದ್ದಾರೆ.

35 ಅಭ್ಯರ್ಥಿಗಳಿಂದ 38 ಉಮೇದುವಾರಿಕೆ

ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ.18ರಂದು ನಡೆಯುವ ಮೊದಲ ಹಂತದ ಚುನಾವಣೆ ಸಂಬಂಧ ಗುರುವಾರ 35 ಅಭ್ಯರ್ಥಿಗಳು 38 ನಾಮಪತ್ರ ಸಲ್ಲಿಸಿದ್ದಾರೆ. ಮಾ.19ರಂದು ಅಧಿಸೂಚನೆ ಹೊರಡಿಸಿದ್ದು, ಇದುವರೆಗೆ ಒಟ್ಟು 72 ಅಭ್ಯರ್ಥಿಗಳಿಂದ 83 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿಯ ಪಿ.ಸಿ.ಮೋಹನ್, ಇದೇ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರಾಜ್ ಉಮೇದುವಾರಿಕೆ ಸಲ್ಲಿಸಿದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಂಸದೆ ಶೋಭಾ ಕರಂದ್ಲಾಜೆ 2 ಪ್ರತ್ಯೇಕ ನಾಮಪತ್ರ ಸಲ್ಲಿಸಿದರು. ಎಸ್​ಯುುಸಿಐ (ಕಮ್ಯೂನಿಸ್ಟ್), ಉತ್ತಮ ಪ್ರಜಾಕೀಯ ಪಾರ್ಟಿ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ, ಜೈಪ್ರಕಾಶ್ ಜನತಾದಳ, ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾ, ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿ, ಅಹಿರಾ ನ್ಯಾಷನಲ್ ಪಾರ್ಟಿ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿ ವಿವಿಧ ರಾಜಕೀಯ ಪಕ್ಷಗಳಿಂದಲೂ ನಾಮಪತ್ರ ಸಲ್ಲಿಕೆಯಾಗಿವೆ.

ಪ್ರಕಾಶ್ ರಾಜ್ ಆಸ್ತಿ -ಠಿ;32 ಕೋಟಿ

ನಾಮಪತ್ರ ಜತೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಪ್ರಕಾಶ್​ರಾಜ್, ಪತ್ನಿ ರಶ್ಮಿ ವರ್ವ ಹಾಗೂ ಮಕ್ಕಳ ಹೆಸರಿನಲ್ಲಿ 32 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. 5,15,53,352 ಕೋಟಿ ರೂ. ಚರಾಸ್ತಿ ಹಾಗೂ 26,94,09,916 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಮನೆ, ವಾಹನ ಸಾಲ, ಬಾಕಿ ತೆರಿಗೆ ಸೇರಿ 8,08,20,377 ರೂ. ಸಾಲ ಹೊಂದಿದ್ದಾರೆ.

ಮೋಹನ್ ಆಸ್ತಿ -ಠಿ; 75.54 ಕೋಟಿ

ಪಿ.ಸಿ.ಮೋಹನ್ ಕುಟುಂಬದ ಆಸ್ತಿ ಮೌಲ್ಯ 75,54,29,306 ರೂ. ಇದರಲ್ಲಿ 25,45,27,734 ರೂ. ಚರಾಸ್ತಿ ಮತ್ತು 50,09,01,572 ರೂ. ಸ್ಥಿರಾಸ್ತಿ ಇದೆ. 31,25,21,957 ರೂ. ಸಾಲ ಹೊಂದಿದ್ದಾರೆ.

ಶೋಭಾ ಆಸ್ತಿ -ಠಿ;10.48 ಕೋಟಿ

ಶೋಭಾ ಕರಂದ್ಲಾಜೆ 7.38 ಕೋಟಿ ರೂ. ಚರಾಸ್ತಿ ಮತ್ತು 3.10 ಕೋಟಿ ರೂ. ಸ್ಥಿರಾಸ್ತಿ ಘೊಷಿಸಿಕೊಂಡಿದ್ದಾರೆ. 24.16 ಲಕ್ಷ ರೂ. ತೆರಿಗೆ ಪಾವತಿ, 4.99 ಕೋಟಿ ರೂ. ಸಾಲವಿದೆ. 1000 ಗ್ರಾಂ ಚಿನ್ನದ ಬಿಸ್ಕೆಟ್ಸ್, 650 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿ ಪರಿಕರಗಳನ್ನು ಹೊಂದಿದ್ದಾರೆ. ಪುತ್ತೂರಿನಲ್ಲಿ 15 ಸೆಂಟ್ಸ್ ಜಾಗ, ಬೆಂಗಳೂರಲ್ಲಿ 3 ಕೋಟಿ ರೂ. ಮೌಲ್ಯದ ಫ್ಲ್ಯಾಟ್, ಟಯೋಟ ಇನ್ನೋವಾ ಕಾರು, ಹೋಂಡಾ ಆಕ್ಟಿವಾ ಸ್ಕೂಟರ್ ಇದೆ. ಶೋಭಾ ಆಸ್ತಿ 5 ವರ್ಷಗಳಲ್ಲಿ 3 ಕೋಟಿ ಏರಿಕೆಯಾಗಿದೆ. ಹೊನ್ನಾವರದಲ್ಲಿ ಕೋಮುದ್ವೇಷದ ಭಾಷಣ, ಶೆಲ್ ಕಂಪನಿಯಲ್ಲಿ ಅಕ್ರಮ ಹಣ ಹೂಡಿಕೆ ಸೇರಿ 3 ಪ್ರಕರಣ ನ್ಯಾಯಾಲಯದಲ್ಲಿವೆ.