ವಿಶ್ವದರ್ಜೆ ಶಿಕ್ಷಣಕೇಂದ್ರ ಸ್ಥಾಪನೆಗೆ ಸಂಕಲ್ಪ

*ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

ಹಾಸನ: ನಮ್ಮ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬೇರೆಯವರು ಅಸೂಯೆಪಡುವ ಅವಕಾಶ ಇಲ್ಲದಂತೆ ಹಾಸನದಲ್ಲಿ ವಿಶ್ವ ಗುಣಮಟ್ಟದ ಶಿಕ್ಷಣ ಒದಗಿಸುವ ಶಿಕ್ಷಣ ಕೇಂದ್ರ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿಸಾಲ ಋಣಮುಕ್ತ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
12 ವರ್ಷಗಳ ಹಿಂದೆ ಹಾಸನದಲ್ಲಿ ಐಐಟಿ ಸ್ಥಾಪಿಸಬೇಕು ಎನ್ನುವ ದೇವೇಗೌಡರ ಕನಸು ನನಸು ಮಾಡಲು ರೇವಣ್ಣ ಪ್ರಯತ್ನ ಆರಂಭಿಸಿದ್ದರು. ದೇವೇಗೌಡರೇ ಪ್ರಧಾನಿ ಹಾಗೂ ಮಾನವ ಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಹಿಂದೆಯೇ ದೆಹಲಿಗೆ ಹೋದ ಕೆಲವರು, ಹುಬ್ಬಳ್ಳಿ ಇಲ್ಲವೇ ಧಾರವಾಡಕ್ಕೆ ಐಐಟಿ ನೀಡಬೇಕು ಎಂದರು. ಆಗ ದೇವೇಗೌಡರು ಸಂತೋಷದಿಂದಲೇ ಅದಕ್ಕೆ ಬೆಂಬಲ ನೀಡಿದರು. ಕೇಂದ್ರ ಸರ್ಕಾರ ನಮ್ಮ ರಾಜ್ಯದಲ್ಲಿ ಐಐಟಿ ಸ್ಥಾಪಿಸುತ್ತಿದೆ ಎನ್ನುವ ಕಾರಣಕ್ಕಾಗಿ ಸಂತೋಷಪಟ್ಟಿದ್ದರು ಎಂದು ಹೇಳಿದರು.
ಈಗ ಹಾಸನದಲ್ಲಿ ಒಂದು ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾದರೆ, ನಾವು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯನ್ನು ಒಡೆಯುತ್ತಿದ್ದೇವೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ನಾವು ಎಂದಿಗೂ ರಾಜ್ಯವನ್ನು ಒಡೆಯುವ ಕೆಲಸ ಮಾಡುವುದಿಲ್ಲ. ಈಗ ಹಾಸನದಲ್ಲಿ ವಿಶ್ವಗುಣಮಟ್ಟದ ಶಿಕ್ಷಣ ಕೇಂದ್ರ ಸ್ಥಾಪಿಸುವ ಸಂಕಲ್ಪ ಮಾಡಿದ್ದೇವೆ ಎಂದರು.
ನಮ್ಮ ಕುಟುಂಬದವರು ಜಿಲ್ಲೆಯ ಜನರು ಬೆಳೆಸಿದ ಮಕ್ಕಳು. ದೇವೇಗೌಡರು ತಾಪಂ ಸದಸ್ಯ ಸ್ಥಾನದಿಂದ ಹಿಡಿದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಎತ್ತರಕ್ಕೆ ಏರಿದ್ದು ಜಿಲ್ಲೆಯ ಜನರ ಆಶೀರ್ವಾದಿಂದ. ಈ ಋಣವನ್ನು ತೀರಿಸಬೇಕು ಎನ್ನುವ ಕಾರಣಕ್ಕಾಗಿ ರೇವಣ್ಣ, ಸಂಘರ್ಷ ಮಾಡಿಕೊಂಡು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಶ್ರಮಿಸುತ್ತಿದ್ದಾರೆ. ಇಡೀ ರಾಜ್ಯದ ಜನರ ಋಣ ತೀರಿಸಲು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವ ಅನಿವಾರ್ಯತೆ ನನ್ನದಾಗಿದೆ ಎಂದರು.
ರೈತರ ಸಾಲಮನ್ನಾ ಮಾಡಿದಾಕ್ಷಣ ಅನ್ನದಾದರು ನೆಮ್ಮದಿಯಾಗಿರುತ್ತಾರೆ ಎನ್ನುವುದು ನನ್ನ ಭಾವನೆಯಲ್ಲ. ಆದರೆ ಕಳೆದ ನಾಲ್ಕು ವರ್ಷಗಳಿಂದ ಸತತ ಬೆಳೆನಷ್ಟ ಅನುಭವಿಸಿ ಸುಮಾರು 50 ಸಾವಿರ ಕೋಟಿ ರೂ. ನಷ್ಟ ಮಾಡಿಕೊಂಡಿರುವ ರೈತರ ಸಂಕಷ್ಟವನ್ನು ತಾತ್ಕಾಲಿಕವಾಗಿ ಬಗೆಹರಿಸಲು ಒಂದು ಬಾರಿಯ ಸಾಲಮನ್ನಾ ಅಗತ್ಯವಿತ್ತು ಎನ್ನುವ ಕಾರಣಕ್ಕಾಗಿ ಬೆಳೆಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದೇನೆ ಎಂದರು.
ಮೊದಲು ನಾಲ್ಕು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಆಲೋಚನೆ ಹೊಂದಿದ್ದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಮುಂಬರುವ ಡಿಸೆಂಬರ್ ವೇಳೆಗೆ 46 ಸಾವಿರ ಕೋಟಿ ರೂ. ಸಾಲಮನ್ನಾ ಮೊತ್ತವನ್ನು ಬ್ಯಾಂಕ್‌ಗಳಿಗೆ ಜಮಾ ಮಾಡುವ ಕಾರ್ಯಪೂರ್ಣಗೊಳಿಸಲು ಅನುದಾನ ಮೀಸಲಿರಿಸಿದ್ದೇನೆ. ನಾನು ಈ ಬಾರಿ ಬಜೆಟ್ ಮಂಡಿಸಲು ಹೊರಟಾಗ, ಕುಮಾರಸ್ವಾಮಿ ಬಜೆಟ್ ಮಂಡಿಸಲು ಸಾಧ್ಯವೇ? ಅದಕ್ಕೆ ಅನುಮೋದನೆ ದೊರೆಯುತ್ತದೆಯೇ? ಎಂದು ನನ್ನ ಹಿಂದೆ ಕುಳಿತಿದ್ದವರೇ ಕುಹಕವಾಡಿದ್ದರು. ಅವರೆಲ್ಲರಿಗೂ ಈಗ ಉತ್ತರ ನೀಡಿದ್ದೇನೆ ಎಂದರು.
ಕೆಲವರು ನಮ್ಮ ಸರ್ಕಾರ ಹಾಸನಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸುತ್ತಾರೆ. ಇನ್ನು ಕೆಲವರು ಕೇವಲ ರೈತರ ಸರ್ಕಾರ ಎನ್ನುತ್ತಾರೆ. ಆದರೆ ನಮಗೆ ನಮ್ಮ ರೈತರನ್ನು ಉಳಿಸಿಕೊಳ್ಳುವ ಜತೆಗೆ ಯುವಜನರಿಗೆ ಉದ್ಯೋಗ ಕೊಡಿಸಿ ಅವರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಬೇಕು ಎನ್ನುವುದೂ ಗೊತ್ತಿದೆ. ಅಧಿಕಾರಕ್ಕೆ ಬಂದ 8 ತಿಂಗಳಿನಲ್ಲಿಯೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕ್ರಮ ಆರಂಭಿಸಿದ್ದೇವೆ.
ಹಾಸನದ ಸಭೆಗೆ ಬರುವ ಮುಂಚೆ ಕೊಪ್ಪಳದಲ್ಲಿ ಹಾಕಾಂಗ್ ಉದ್ಯಮಿಯೊಬ್ಬರು ಆರಂಭಿಸಲಿರುವ ಗೊಂಬೆಗಳ ಉತ್ಪಾದನೆ ಕಾರ್ಖಾನೆ ಯೋಜನೆಗೆ ಚಾಲನೆ ನೀಡಿದ್ದೇನೆ. ಇದರಿಂದ ಅಲ್ಲಿನ 10 ಸಾವಿರ ಯುವಕರಿಗೆ ಉದ್ಯೋಗ ದೊರಕಲಿದೆ. ಬಳ್ಳಾರಿಯಲ್ಲಿ ವಿಶ್ವಗುಣಮಟ್ಟದ ಜೀನ್ಸ್ ಉತ್ಪಾದನಾ ಘಟಕ ಸ್ಥಾಪನೆಗೆ ಚಾಲನೆ ನೀಡಿದ್ದೇನೆ. ಮುಂದಿನ 3 ವರ್ಷಗಳಲ್ಲಿ ಅಲ್ಲಿ 25-30 ಸಾವಿರ ಯುವಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇದೇ ಮಾದರಿಯಲ್ಲಿ ಬೀದರ್, ಕಲಬುರ್ಗಿ, ಕೊಪ್ಪಳ, ಬೆಳಗಾವಿ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.