Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕರ-ಕಮಲ ಸಮಾನ, ಜೆಡಿಎಸ್ ತೀರ್ಮಾನ!

Tuesday, 28.08.2018, 3:04 AM       No Comments

| ಮಂಜು ಬನವಾಸೆ ಹಾಸನ

ಜೆಡಿಎಸ್ ತವರು ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುತ್ತಿ ರುವ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಪ್ರಾಬಲ್ಯ ಒರೆಗೆ ಹಚ್ಚುವ ಜಿದ್ದಾಜಿದ್ದಿನ ಕಣವಾಗಿದೆ. ಹಾಸನ ನಗರಸಭೆ ಹಾಗೂ ಸಕಲೇಶಪುರ ಪುರಸಭೆ ಹೊರತುಪಡಿಸಿ ಉಳಿದೆಡೆ ಕಾಂಗ್ರೆಸ್, ಬಿಜೆಪಿಯಿಂದ ಪ್ರಬಲ ಪ್ರತಿರೋಧ ವ್ಯಕ್ತ

ವಾಗದಿರುವುದು ಜೆಡಿಎಸ್ ಪ್ರಾಬಲ್ಯ ಮುಂದುವರಿ ಯುವ ಸಾಧ್ಯತೆ ಹೆಚ್ಚಿಸಿದೆ. ಹಾಸನ, ಅರಸೀಕೆರೆ ನಗರಸಭೆ, ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ ಪುರಸಭೆಗಳ ಒಟ್ಟು 135 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದ್ದು, ಜೆಡಿಎಸ್ ಸ್ಥಳೀಯ ಶಾಸಕರಿಗೆ ಹೊಣೆ ಹಂಚಿಕೆ ಮಾಡಿದೆ. ವಿಧಾನಸಭಾ ಚುನಾವಣೆ ಸೋಲಿನ ಕಹಿ ಕಾಂಗ್ರೆಸ್​ನಲ್ಲಿ ಇನ್ನೂ ಮಾಸಿಲ್ಲ. ಸ್ಥಳೀಯ ನಾಯಕರೇ ಅಭ್ಯರ್ಥಿ ಆಯ್ಕೆ ತೀರ್ಮಾನ ಕೈಗೊಂಡಿದ್ದು, ಸಂಘಟಿತ ಹೋರಾಟ ಕಾಣಿಸುತ್ತಿಲ್ಲ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ, ಹಾಸನ ನಗರಸಭೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬಿಜೆಪಿ ಗಂಭೀರ ಹೋರಾಟ ಹಾಸನಕ್ಕೆ ಸೀಮಿತವಾಗಿದೆ.

ಅರಸೀಕೆರೆಯಲ್ಲಿ ನೇರ ಹಣಾಹಣಿ

ನಗರಸಭೆಯಾಗಿ ಮೇಲ್ದರ್ಜೆಗೇರಿದ ಅರಸೀಕೆರೆಯ 31 ವಾರ್ಡ್​ಗಳ ಪೈಕಿ ಬಹುತೇಕ ಕಡೆ ಕಾಂಗ್ರೆಸ್-ಜೆಡಿಎಸ್, ಬಿಜೆಪಿ-ಜೆಡಿಎಸ್ ನಡುವೆ ನೇರ ಸ್ಪರ್ಧೆ ಗೋಚರಿಸುತ್ತಿದೆ. ಜೆಡಿಎಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಾರ್ಯತಂತ್ರ ಹೆಣೆದಿದ್ದಲ್ಲದೆ ಪೂರಕ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ. ಇಡೀ ಚುನಾವಣೆ ಹೊಣೆಯನ್ನು ಯಾವುದೇ ಒಬ್ಬ ಕಾಂಗ್ರೆಸ್ ನಾಯಕರು ನಮ್ಮದೆಂದು ಹೊತ್ತುಕೊಂಡಿಲ್ಲ. ತನ್ನದೇ ಮತಬ್ಯಾಂಕ್ ಹೊಂದಿರುವ ಬಿಜೆಪಿ ಕೆಲ ವಾರ್ಡ್​ಗಳಲ್ಲಿ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

ಸಚಿವ ರೇವಣ್ಣ ‘ಹೊಳೆ’ ಅಬಾಧಿತ!

ಸಚಿವ ಎಚ್.ಡಿ.ರೇವಣ್ಣ ತವರು ಹೊಳೆನರಸೀಪುರದ ಪುರಸಭೆ ಸತತ 3 ಅವಧಿಗಳಿಂದ ಜೆಡಿಎಸ್ ತೆಕ್ಕೆಯಲ್ಲಿದೆ. ಪ್ರತಿ ಬಾರಿಯೂ 23 ವಾರ್ಡ್​ಗಳಲ್ಲಿಯೂ ಎದುರಾಳಿಗಳು ಕಣಕ್ಕಿಳಿದರೂ ವಿರೋಧ ಪಕ್ಷಗಳಿಂದ ಆಯ್ಕೆಯಾಗುವ ಪ್ರತಿನಿಧಿಗಳ ಸಂಖ್ಯೆ ಒಂದಂಕಿ ದಾಟಿಲ್ಲ. ಈ ಬಾರಿ ರೇವಣ್ಣ, ಅದೇ ಮುತುವರ್ಜಿ ವಹಿಸಿದ್ದಾರೆ. ಕಾಂಗ್ರೆಸ್​ನಿಂದ ಅನುಪಮಾ ಮಹೇಶ್, ಬಾಗೂರು ಮಂಜೇಗೌಡ ಚುನಾವಣೆ ನಿಭಾಯಿಸುತ್ತಿದ್ದಾರೆ. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಆದರೂ, ರೇವಣ್ಣ ಪಾರುಪತ್ಯಕ್ಕೆ ಕಾಂಗ್ರೆಸ್ ಭಾರಿ ಪ್ರತಿರೋಧ ಒಡ್ಡುವ ಲಕ್ಷಣವೇನೂ ಕಾಣಿಸುತ್ತಿಲ್ಲ.

ಸಿಂಹಾಸನಪುರಿಗಾಗಿ ತ್ರಿಕೋನ ಸ್ಪರ್ಧೆ

ವಿಧಾನಸಭಾ ಚುನಾವಣೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದ ಜೆಡಿಎಸ್ ಮತಗಳಿಕೆ ಅದೇ ಮಾದರಿ ಮುಂದುವರಿದರೆ ಹಾಸನ ನಗರಸಭೆಯಲ್ಲೂ ಅಧಿಕಾರ ಕೈತಪ್ಪುವ ಸಾಧ್ಯತೆಯಿದೆ. ಹೀಗಾಗಿ, 35 ವಾರ್ಡ್​ಗಳಲ್ಲಿಯೂ ದಳ ಎಚ್ಚರಿಕೆ ಹೆಜ್ಜೆ ಇರಿಸಿದೆ. ಕಾಂಗ್ರೆಸ್​ನಲ್ಲಿ ಕೆಲ ಪ್ರಭಾವಿಗಳನ್ನು ಹೊರತುಪಡಿಸಿದರೆ ಉಳಿದೆಡೆ ಗಮನ ಸೆಳೆಯುವ ಅಭ್ಯರ್ಥಿಗಳು ಕಣಕ್ಕಿಳಿದಿಲ್ಲ. ಬಿಜೆಪಿ ಮಾತ್ರ ವಿಧಾನಸಭಾ ಚುನಾವಣೆ ರೀತಿಯಲ್ಲೇ ಮತ ಸೆಳೆದು ಜೆಡಿಎಸ್​ಗೆ ಟಾಂಗ್ ನೀಡಲು ಯತ್ನಿಸುತ್ತಿದೆ. ಎಲ್ಲ ಪಕ್ಷಗಳಿಂದಲೂ ಹೊಸಮುಖಗಳಿಗೆ ಹೆಚ್ಚಿನ ಪ್ರಾಶಸ್ಱ ದೊರಕಿದೆ.

ಜೆಡಿಎಸ್ ವರ್ಸಸ್ ಅದರ್ಸ್

ಸಕಲೇಶಪುರ ಪುರಸಭೆಯ 23 ವಾರ್ಡ್​ಗಳಲ್ಲಿಯೂ ಜೆಡಿಎಸ್ ಪರಾಭವಗೊಳಿಸಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರರು ಒಗ್ಗೂಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದು ಹೊಸ ಬೆಳವಣಿಗೆ. ವಿಧಾನಸಭಾ ಚುನಾವಣೆ ಪರಾಜಿತ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ನಿರ್ವಹಣೆ ಹೊಣೆ ಹೊತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಹಿರಿಯ ಮುಖಂಡರು ಜೆಡಿಎಸ್​ನ ವಿರೋಧಿಗಳೊಂದಿಗೆ ಸಮನ್ವಯತೆ ಸಾಧಿಸಿ, ಮಾಡುವ ಜಾಣ್ಮೆ ಮೆರೆದಿದ್ದಾರೆ. ಕಳೆದ ಸಲ ಜೆಡಿಎಸ್ ಅಧಿಕಾರ ನಡೆಸಿತ್ತು.

ದಳ ಕಟ್ಟಿ ಹಾಕುವವರ್ಯಾರು?

ಚನ್ನರಾಯಪಟ್ಟಣ ಪುರಸಭೆಯಲ್ಲಿ ಕಳೆದ ಅವಧಿಯಲ್ಲಿ ಬಹುಮತ ಜತೆಗೆ ಇತರ ಪಕ್ಷಗಳ ಸದಸ್ಯರನ್ನು ಸೆಳೆದು ಅಧಿಕಾರ ಸವಿದಿದ್ದ ಜೆಡಿಎಸ್ ಕಟ್ಟಿಹಾಕಲು 23 ವಾರ್ಡ್​ಗಳ ಪೈಕಿ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಮಾತ್ರವೇ ಪ್ರಯತ್ನ ಕಾಣಿಸುತ್ತಿದೆ. ಕಾಂಗ್ರೆಸ್ ಮುಂಚೂಣಿ ನಾಯಕರಾಗ ಬಯಸುವ 10ಕ್ಕೂ ಹೆಚ್ಚು ಮುಖಂಡರು ಬಿ ಫಾರಂ ಹಂಚಿಕೆಯಲ್ಲಿ ಗೆಲುವಿನ ಸಾಧ್ಯತೆಗಿಂತಲೂ ಬೆಂಬಲಿಗರಿಗೆ ಮಣೆ ಹಾಕಿದ್ದು, ಹಲವಡೆ ಜಾತಿ ಲೆಕ್ಕಾಚಾರ ಕೈಕೊಟ್ಟಿದೆ. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿದ್ದು, ಕಾಂಗ್ರೆಸ್ ಸಮರ್ಥ ಪೈಪೋಟಿ ನೀಡಬಲ್ಲದೆ ಎಂಬುದಷ್ಟೆ ಈಗಿನ ಪ್ರಶ್ನೆ.


ಕೊಪ್ಪಳದಲ್ಲಿ ಕೈ ಪ್ರತಿಷ್ಠೆ, ಬಿಜೆಪಿ ಕಸರತ್ತು

| ವಿ.ಕೆ.ರವೀಂದ್ರ ಕೊಪ್ಪಳ

ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿನ ಬಳಿಕ ಎದುರಾಗಿರುವ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಕೊಪ್ಪಳದಲ್ಲಿ ಕಾಂಗ್ರೆಸ್- ಬಿಜೆಪಿ ನಾಯಕರಲ್ಲಿ ಮತ್ತೊಂದು ಬಿರುಸಿನ ಹಣಾಹಣಿಗೆ ವೇದಿಕೆ ಕಲ್ಪಿಸಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಮಲ ಅರಳಿದ್ದು, ಎರಡರಲ್ಲಿ ಕೈ ಮೇಲುಗೈ ಸಾಧಿಸಿದೆ. ಸಂಸದರು ಬಿಜೆಪಿಯವರಾದರೆ, ಜಿಪಂ-ತಾಪಂಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಯಲಬುರ್ಗಾ, ಗಂಗಾವತಿಯಲ್ಲಿ ಕೈ ಭದ್ರ ಕೋಟೆ ಭೇದಿಸಿರುವ ಬಿಜೆಪಿ ಶಾಸಕರು ಸ್ಥಳೀಯ ಸಂಸ್ಥೆಗಳಲ್ಲೂ ಪ್ರಾಬಲ್ಯ ಸಾಧಿಸಲು ಹವಣಿಸಿದರೆ, ವಿಧಾನಸಭೆ ಕಳೆದುಕೊಂಡ ಕೈ ಶಾಸಕರು ಕಮಲಕ್ಕೆ ಕೊಕ್ಕೆ ಹಾಕಲು ತಂತ್ರ ಹೆಣೆಯುತ್ತಿದ್ದಾರೆ. ಗಂಗಾವತಿ, ಯಲಬುರ್ಗಾದಲ್ಲಿ ವಾರ್ಡ್​ಗಳ ಸಂಖ್ಯೆ ಹೆಚ್ಚಾಗುವುದರ ಜತೆಗೆ ಮೀಸಲು ಸಹ ಬದಲಾಗಿದೆ. ಎರಡೂ ಪಕ್ಷಗಳಲ್ಲಿ ಹಾಲಿ ಸದಸ್ಯರು ಹಾಗೂ ಟಿಕೆಟ್ ಆಕಾಂಕ್ಷಿಗಳಲ್ಲಿ ಗೊಂದಲ ಮೂಡಿಸಿದ್ದು, ಬಂಡಾಯಕ್ಕೆ ಕಾರಣವಾಗಿದೆ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಲೆಕ್ಕಾಚಾರ ಉಲ್ಟಾ ಆದರೂ ಅಚ್ಚರಿ ಇಲ್ಲ.

ಕೊಪ್ಪಳ ಯಾರ ಸಪ್ಪಳ?

ಕೊಪ್ಪಳದಲ್ಲಿ ಕಾಂಗ್ರೆಸ್​ನ ರಾಘವೇಂದ್ರ ಹಿಟ್ನಾಳ ಎರಡನೇ ಬಾರಿಗೆ ಶಾಸಕರಾಗಿದ್ದು, ನಗರಸಭೆಯಲ್ಲಿ ಸುಲಭವಾಗಿ ದಡ ಸೇರುವ ಲೆಕ್ಕಾಚಾರದಲ್ಲಿದ್ದಾರೆ. ಕಳೆದ ಬಾರಿ 31 ವಾರ್ಡ್​ಗಳ ಪೈಕಿ 11ರಲ್ಲಿ ಅರಳಿದ್ದ ಬಿಜೆಪಿಗೆ ಗದ್ದುಗೆ ಹಿಡಿವ ಅವಕಾಶವಿದ್ದರೂ ದಳಪತಿಗಳನ್ನು ಹೈಜಾಕ್ ಮಾಡಿದ ಕಾಂಗ್ರೆಸಿಗರು ಅಧಿಕಾರ ಹಿಡಿದರು. ಎಲ್ಲ ವಾರ್ಡ್​ಗಳಲ್ಲೂ ಕೈ-ಕಮಲ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಜೆಡಿಎಸ್ ಕೆಲವಕ್ಕೆ ಸೀಮಿತ. ಕೆಲ ವಾರ್ಡ್​ಗಳ ಮೀಸಲು ಬದಲಾಗಿದ್ದು, ಹಾಲಿ ಸದಸ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅನ್ಸಾರಿಗೆ ಹ್ಯಾಟ್ರಿಕ್ ತವಕ

ಜಿಲ್ಲೆಯ ಹಾಟ್ ಕ್ಷೇತ್ರ ಎಂದೇ ಹೆಸರಾಗಿರುವ ಗಂಗಾವತಿಯಲ್ಲಿ 2007ರಿಂದಲೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪ್ರಬಲ ಹಿಡಿತವಿದೆ. ಸದ್ಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಅಧಿಕಾರದಲ್ಲಿದ್ದು, ನಗರಸಭೆ ವಶಕ್ಕೆ ಪಡೆವ ಸವಾಲು ಎದುರಾಗಿದೆ. ಮುಸ್ಲಿಂ ಮತದಾರರು ಹೆಚ್ಚಿರುವುದು ಕಾಂಗ್ರೆಸ್ ಹಾಗೂ ಜೆಡಿಎಸ್​ಗೆ ವರದಾನವಾಗುತ್ತಿದೆ. ಹಿಂದುತ್ವದ ಮಂತ್ರ ಪಠಿಸಿ ಕಳೆದ ವಿಧಾನಸಭಾ ಚುನಾವಣೆ ಗೆಲುವಿನ ನಗೆ ಬೀರಿರುವ ಬಿಜೆಪಿ ನಾಯಕರು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಅದೇ ಕಾರ್ಡ್ ಪ್ಲೇ ಮಾಡು ತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ತೀವ್ರ ಪೈಪೋಟಿ ಎದುರಾಗಿದೆ.

ಕುಷ್ಟಗಿಯಲ್ಲಿ ಯಾರ ದೋಸ್ತಿ?

ಬಯಲುಸೀಮೆ ಕುಷ್ಟಗಿಯಲ್ಲಿ ಸದ್ಯ ಕಾಂಗ್ರೆಸ್ ಪ್ರಾಬಲ್ಯವಿದ್ದು, ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಕಳೆದ ಸಲ ಬಿಜೆಪಿ ಶಾಸಕ ದೊಡ್ಡನಗೌಡ ಅಧಿಕಾರದಲ್ಲಿದ್ದು, ಪುರಸಭೆ ಚುನಾವಣೆ ಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದಿತ್ತು. ಆದರೂ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಅಧಿಕಾರ ನಡೆಸಿದವು. ಹಲವು ಸರ್ಕಸ್ ನಡೆಸಿದ ಬಿಜೆಪಿ ಕೊನೇ ಅವಧಿಗೆ ಅಧಿಕಾರ ಪಡೆಯಿತು. ಸದ್ಯ 23 ವಾರ್ಡ್​ಗಳಲ್ಲೂ ಕೈ-ಕಮಲ ಅಭ್ಯರ್ಥಿಗಳಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸೇಡು ತೀರಿಸಿಕೊಳ್ಳಲು ಸಜ್ಜು

ಮಾಜಿ ಸಚಿವ ಬಸವರಾಜ ರಾಯರಡ್ಡಿ ತವರು ಕ್ಷೇತ್ರ ಯಲಬುರ್ಗಾದಲ್ಲಿ ಬಿಜೆಪಿ ಅರಳಿದ್ದು, ಪಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ರಡ್ಡಿ ಸಾಹೇಬ್ರು ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾರೆ. ಕಳೆದ ಅವಧಿಯಲಿ ಕೈ-ಕಮಲ ಸಮಬಲ ಸಾಧಿಸಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದವು. ಈ ಬಾರಿ 3 ಹೆಚ್ಚುವರಿ ವಾರ್ಡ್​ಗಳಾಗಿದ್ದು, ಸ್ಪಷ್ಟ ಬಹುಮತ ಪಡೆದು ಪೂರ್ಣಾವಧಿ ಅಧಿಕಾರ ಅನುಭವಿಸಲು ಬಿಜೆಪಿ-ಕಾಂಗ್ರೆಸ್ ನಾಯಕರು ಹವಣಿಸುತ್ತಿದ್ದಾರೆ.

Leave a Reply

Your email address will not be published. Required fields are marked *

Back To Top