ಪುತ್ರನನ್ನು ಸಂಸತ್ ತಲುಪಿಸಿದ ಕಾರ್ಯತಂತ್ರ

ಹಾಸನ: ಸ್ವಪ್ರತಿಷ್ಠೆ, ರಾಜಕೀಯ ಹಗೆತನಗಳನ್ನು ಬದಿಗಿಟ್ಟು ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟಿ ವಿಶ್ವಾಸಕ್ಕೆ ಪಡೆದ ಸಚಿವ ಎಚ್.ಡಿ.ರೇವಣ್ಣ ಕಾರ್ಯತಂತ್ರ, ಅವರ ಪುತ್ರ ಪ್ರಜ್ವಲ್‌ರನ್ನು ಅನಾಯಾಸವಾಗಿ ಲೋಕಸಭೆ ಪ್ರವೇಶಿಸುವಂತೆ ಮಾಡಿದೆ.


ಚುನಾವಣೆಯಲ್ಲಿ ಪ್ರಜ್ವಲ್ ಅಭ್ಯರ್ಥಿಯಾಗಿದ್ದರೂ ಮುಂದೆ ನಿಂತು ಪ್ರಚಾರ ನಿರ್ವಹಣೆ, ಕಾರ್ಯತಂತ್ರ ಹೆಣೆಯುವ ಕೆಲಸಗಳೆಲ್ಲವನ್ನೂ ಎಚ್.ಡಿ.ರೇವಣ್ಣ ಅವರೇ ನಿಭಾಯಿಸಿದ್ದರು. ಹೀಗಾಗಿ, ತಾಂತ್ರಿಕವಾಗಿ ಅಭ್ಯರ್ಥಿ ಗೆಲುವು ಸಾಧಿಸಿದ್ದರೂ ಅದರ ಶ್ರೇಯ ರೇವಣ್ಣ ಅವರಿಗೆ ಸೇರಬೇಕು.


ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರನ್ನು ಆಯ್ಕೆ ಮಾಡಿದಾಗ ಕಾಂಗ್ರೆಸ್ ವಲಯದಿಂದ ಅಪಸ್ವರ ಕೇಳಿಬಂದಿತ್ತು. ಪ್ರಮುಖ ನಾಯಕರೇ ಕಾಂಗ್ರೆಸ್ ಕಾರ್ಯರ್ತರನ್ನು ಬಿಜೆಪಿ ಕಡೆಗೆ ವಾಲಿಸುವ ಮಾತನಾಡತೊಡಗಿದ್ದರು.


ಸಚಿವ ಎಚ್.ಡಿ.ರೇವಣ್ಣ ಅವರ ಸ್ವಪ್ರತಿಷ್ಠೆ, ಹಟಮಾರಿತನ, ದ್ವೇಷ ರಾಜಕಾರಣಗಳ ಪರಿಚಯವಿದ್ದ ಕಾಂಗ್ರೆಸ್ಸಿಗರು, ಪಕ್ಷದ ಹೈಕಮಾಂಡ್ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಜೆಡಿಎಸ್ ಅಭ್ಯರ್ಥಿ ಪರವಾಗಿ ನಾವು ಮತ ಕೇಳುವುದು ಸಾಧ್ಯವೇ ಇಲ್ಲ ಎನ್ನುವ ನಿಲುವು ತಳೆದಿದ್ದರು.


ಇದರಿಂದ ಮೇಲ್ನೋಟಕ್ಕೆ ಕಾಂಗ್ರೆಸ್ ಮತಗಳು ಸಾರಾಸಗಟಾಗಿ ಬಿಜೆಪಿ ಪಾಲಾಗಲಿವೆ ಎನ್ನುವ ವಾತಾವರಣ ನಿರ್ಮಾಣವಾಗತೊಡಗಿತ್ತು. ಆದರೆ, ಎಲ್ಲವನ್ನೂ ಕೇವಲ ತಮ್ಮ ನಡವಳಿಕೆ, ಕಾರ್ಯತಂತ್ರದಿಂದಲೇ ಸಚಿವ ಎಚ್.ಡಿ.ರೇವಣ್ಣ ಒಂದೆರಡು ದಿನಗಳಲ್ಲಿಯೇ ತಿರುಗುಮುರುಗು ಮಾಡಲು ಯಶಸ್ವಿಯಾದರು.


ವಿರೋಧಿಗಳ ಮನೆ ಕದ ತಟ್ಟಿದ ರೇವಣ್ಣ: ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ, ಟೀಕಿಸುವಾಗಲೂ ವಿರೋಧಿಗಳ ಹೆಸರು ಹೇಳದಷ್ಟು ಹಗೆತನ ಸಾಧಿಸುತ್ತಿದ್ದ ರೇವಣ್ಣ, ಅದೇ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟಿ ಅವರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯತಂತ್ರವನ್ನು ಆಯ್ಕೆ ಮಾಡಿಕೊಂಡರು.


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಕಡು ವಿರೋಧಿಯಾಗಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಬಿ.ಶಿವರಾಮು ಮನೆಗೆ ಮೊದಲು ಪುತ್ರ ಪ್ರಜ್ವಲ್‌ರನ್ನು ಕಳುಹಿಸಿ ಬೆಂಬಲ ಕೋರಿಸಿದ್ದ ರೇವಣ್ಣ, ನಂತರ ತಾವೇ ಅವರ ಮನೆಗೆ ಭೇಟಿ ನೀಡಿದರು. ನಗುಮೊಗದಿಂದ ಅವರನ್ನು ಮಾತನಾಡಿಸಿದರು. ಈವರೆಗೂ ತಮ್ಮ ನಡುವೆ ಯಾವ ವೈರತ್ವವೂ ಇರಲಿಲ್ಲವೇನೋ ಎಂಬಂತೆ ವಿಶ್ವಾಸ ತೋರಿಸಿದರು.


ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಬಿ.ಶಿವರಾಮು ಅವರಂತಹ ನಾಯಕರು ಅಸಮಾಧಾನ ಹೊರಹಾಕಿದಾಗ, ಅದೆಲ್ಲವನ್ನೂ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇನೆ. ಮುಂದೆ ನನ್ನ ನಡವಳಿಕೆ ನೋಡಿ ನಿರ್ಧಾರ ಮಾಡಿ ಎಂದು ಭರವಸೆ ನೀಡಿ ಅವರನ್ನು ವಿಶ್ವಾಸಕ್ಕೆ ಪಡೆದುಕೊಂಡರು.


ನಂತರ ಕಾಂಗ್ರೆಸ್‌ನ ಎರಡು-ಮೂರನೇ ಸಾಲಿನ ನಾಯಕರ ಮನೆಗಳಿಗೂ ಭೇಟಿ ನೀಡಿ ಅವರನ್ನು ಪ್ರಜ್ವಲ್ ಪರ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಲು ಒಪ್ಪಿಸಿದರು.


ಎಲ್ಲೆಡೆ ಪ್ರಜ್ವಲ್‌ರನ್ನು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಎಂದೇ ಪರಿಚಯಿಸುವುದನ್ನು ರೂಢಿಸಿಕೊಂಡರು. ಹಿಂದೆ ಜೆಡಿಎಸ್ ತೊರೆದಿದ್ದ ರಾಜ್ಯಸಭೆ ಮಾಜಿ ಸದಸ್ಯ ಎಚ್.ಕೆ.ಜವರೇಗೌಡ ಅವರನ್ನೂ ಆತ್ಮೀಯತೆಯಿಂದ ಮಾತನಾಡಿಸಿ ಹಳೇ ಕಹಿ ಮರೆತು ಅವರೂ ಮೈತ್ರಿ ಧರ್ಮದಂತೆ ಪ್ರಚಾರ ನಡೆಸುವಂತೆ ನೋಡಿಕೊಂಡರು.


ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ಗುತ್ತಿಗೆ ಹಂಚಿಕೆ ಮುಂತಾದ ವಿಷಯಗಳಲ್ಲಿ ಪ್ರಾಮುಖ್ಯತೆ ನೀಡುವುದಾಗಿ ಭರವಸೆ ಮೂಡಿಸಿದರು. ಅಲ್ಲಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಸಭೆಗಳನ್ನು ಆಯೋಜಿಸಿ ತಳಮಟ್ಟದಲ್ಲಿ ಎರಡೂ ಪಕ್ಷಗಳ ಮುಖಂಡರ ನಡುವಿನ ಅಸಮಾಧಾನಕ್ಕೆ ತೇಪೆ ಹಚ್ಚಿದರು.


ಜೆಡಿಎಸ್ ಶಾಸಕರು, ಮುಖಂಡರಿಗೆ ಟಾರ್ಗೆಟ್: ಇನ್ನೊಂದೆಡೆ, ತಮ್ಮ ಪಕ್ಷದ ಶಾಸಕರು, ಮುಖಂಡರಿಗೆ ಮತ ಸೆಳೆಯುವ ಟಾರ್ಗೆಟ್ ನೀಡಿದ ಎಚ್.ಡಿ.ರೇವಣ್ಣ ಹಾಗೂ ಅವರ ಪತ್ನಿ ಭವಾನಿ, ಪ್ರಚಾರ ಏರುಪೇರಾಗದಂತೆ ಸಮನ್ವಯ ಸಾಧಿಸಿದರು.


ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿವಾಸಗಳಿಗೆ ಭವಾನಿ, ಪ್ರಜ್ವಲ್ ಹಾಗೂ ಮತ್ತೊಬ್ಬ ಪುತ್ರ ಡಾ.ಸೂರಜ್ ಭೇಟಿ ನೀಡುವ ವೇಳಾಪಟ್ಟಿಯನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡು ಅದನ್ನು ಪಾಲನೆ ಮಾಡಿದರು. ವಿವಿಧ ಸಮುದಾಯಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ಪಡೆದರು.


ಯಥೇಚ್ಛ ಸಂಪನ್ಮೂಲ ಬಳಕೆ: ಸಚಿವ ಎಚ್.ಡಿ.ರೇವಣ್ಣ ಕುಟುಂಬ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿತ್ತು. ತಮ್ಮ ಪುತ್ರನ ಪ್ರಥಮ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಹಿನ್ನಡೆಯಾಗಬಾರದೆಂದು ನಿರ್ಧರಿಸಿದ್ದ ಕುಟುಂಬದ ಹಿರಿಯರು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು.


ಸಂಪನ್ಮೂಲ ಹಂಚಿಕೆ ವಿಷಯದಲ್ಲಿ ಕೊಂಚವೂ ಹಿಂದೆ-ಮುಂದೆ ನೋಡಲಿಲ್ಲ. ವಿಧಾನಸಭಾ ಕ್ಷೇತ್ರವಾರು ತಳಮಟ್ಟದವರೆಗೆ ಸಂಪನ್ಮೂಲ ತಲುಪಿಸುವ ಕಾರ್ಯಕರ್ತರ ಜಾಲ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದು, ಮತ ಗಳಿಕೆಯ ಮೇಲೆ ಪ್ರಭಾವ ಬೀರಿತು.

Leave a Reply

Your email address will not be published. Required fields are marked *