ಹಾಸನ: ತಿಂಗಳಿಗೂ ಅಧಿಕ ಕಾಲ ‘ರಜೆಯ ಮಜೆ’ಯಲ್ಲಿದ್ದ ಮಕ್ಕಳು ಮೇ 29ರ ಬುಧವಾರದಿಂದ ಮರಳಿ ಶಾಲೆಗೆ ಆಗಮಿಸಿದರು.
ನಿತ್ಯ ಆಟ, ನೆಂಟರ ಮನೆ ಪ್ರವಾಸ, ಮನೆಗೆಲಸದಲ್ಲಿ ಬ್ಯುಸಿಯಾಗಿದ್ದ ಚಿಣ್ಣರು ಬ್ಯಾಗ್ ಸಮೇತ ಶಾಲೆಗೆ ಬಂದಿದ್ದು, ವಿದ್ಯಾ ಮಂದಿರಗಳು ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿದವು. ಜಿಲ್ಲಾದ್ಯಂತ 3134 ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿದ್ದು, ಬುಧವಾರದಿಂದ ತರಗತಿಗಳು ಆರಂಭವಾದವು. ಜಿಲ್ಲೆಯ ಅನೇಕ ಕಡೆ ಶಾಲೆ ಆವರಣ, ಕೊಠಡಿಯನ್ನು ಸಿಂಗರಿಸಿ ಶೈಕ್ಷಣಿಕ ವರ್ಷದ ಮೊದಲ ದಿನಕ್ಕೆ ಮುನ್ನುಡಿ ಬರೆಯಲಾಯಿತು.
ಶೇ. 80 ರಷ್ಟು ಪುಸ್ತಕ ವಿತರಣೆ: ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದ್ದು, ಶಿಕ್ಷಣ ಇಲಾಖೆಯಿಂದ ಈವರೆಗೆ ಶೇ.80ರಷ್ಟು ಪುಸ್ತಕಗಳ ಬಿಡುಗಡೆಯಾಗಿದೆ. ಪ್ರಕಾಶನದಿಂದ ಪಠ್ಯಪುಸ್ತಕ ತಲುಪುತ್ತಿದ್ದಂತೆ ಶಾಲೆಗಳಿಗೆ ಪೂರೈಸುವ ಕಾರ್ಯವು ತ್ವರಿತಗತಿಯಲ್ಲಿ ಸಾಗಿದೆ. ಈ ವರ್ಷ 14,76,473 ಪುಸ್ತಕಗಳ ಬೇಡಿಕೆಯಿದ್ದು 11,40,146 ಪುಸ್ತಕಗಳು ಈಗಾಗಲೇ ಶಾಲೆಗಳನ್ನು ತಲುಪಿವೆ. ಉಳಿದ 3,36,327 ಪುಸ್ತಕಗಳಿಗೂ ಅನುಮೋದನೆ ದೊರೆತಿದ್ದು ವಾರದಲ್ಲಿ ತಲುಪಲಿವೆ ಎಂದು ಡಿಡಿಪಿಐ ಎಚ್. ಮಂಜುನಾಥ್ ತಿಳಿಸಿದ್ದಾರೆ.
ಬುಕ್ ಬ್ಯಾಂಕ್ ನೆರವು: ಪಠ್ಯಪುಸ್ತಕ ವಿತರಣೆ ವಿಳಂಬವಾದರೆ ಬೋಧನೆಗೆ ತೊಂದರೆಯಾಗಲಿದೆ ಎಂಬುದನ್ನು ಅರಿತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪುಸ್ತಕಗಳನ್ನು ಪಡೆದಿದ್ದು ಅಗತ್ಯವಿರುವ ಕಡೆಗೆ ಹಳೆಯ ಪುಸ್ತಕಗಳ ವಿತರಣೆ ಮಾಡಿದೆ. ಹೀಗಾಗಿ ಜಿಲ್ಲೆಯ ಯಾವ ಶಾಲೆಯಲ್ಲೂ ಪಠ್ಯಪುಸ್ತಕ ಕೊರತೆ ಕಂಡುಬಂದಿಲ್ಲ. ಹೊಸ ಪುಸ್ತಕ ಬಂದ ತಕ್ಷಣ ಮಕ್ಕಳಿಗೆ ಅದನ್ನು ವಿತರಿಸಲಾಗುತ್ತದೆ. ಪುಸ್ತಕಗಳ ಆಮದು, ಹಂಚಿಕೆ ಪ್ರಕ್ರಿಯೆ ಆನ್ಲೈನ್ ಮೂಲವೇ ನಡೆಯುತ್ತಿದ್ದು ಪ್ರಕಾಶಕರು ವಾರದಲ್ಲಿ ಪುಸ್ತಕ ಪೂರೈಸುವ ಭರವಸೆ ನೀಡಿದ್ದಾರೆಂದು ಡಿಡಿಪಿಐ ತಿಳಿಸಿದ್ದಾರೆ.
ಆಂಗ್ಲ ಮಾಧ್ಯಮ ಶಾಲೆ: ರಾಜ್ಯ ಸರ್ಕಾರ ಈ ವರ್ಷದಿಂದ ಆರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗಳು ಜಿಲ್ಲೆಯ 30 ಕಡೆಗಳಲ್ಲಿ ಆರಂಭವಾಗುತ್ತಿರುವುದು ಈ ವರ್ಷದ ವಿಶೇಷಗಳಲ್ಲಿ ಒಂದಾಗಿದೆ. ತಾಲೂಕಿಗೆ ಒಂದರಂತೆ ಎಂಟು ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭವಾಗಿವೆ.
ಸಮವಸ್ತ್ರಗಳು ಅಗತ್ಯ ಪ್ರಮಾಣದಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ವಿತರಿಸಲಾಗುವುದು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಹಿನ್ನೆಲೆಯಲ್ಲಿ ಶಿಕ್ಷಕ ವರ್ಗ ಉತ್ಸಾಹದಲ್ಲಿದ್ದು ಮಕ್ಕಳ ಭವಿಷ್ಯ ರೂಪಿಸಲು ಸಜ್ಜಾಗಿದ್ದಾರೆ.
ಮಕ್ಕಳ ಜತೆಗೆ ಪೋಷಕರು ಬಂದರು: ತಿಂಗಳಿಗೂ ಅಧಿಕ ಕಾಲ ರಜೆಯಲ್ಲಿದ್ದ ಕಾರಣ ಶಾಲೆಗೆ ಬರಲು ಹಿಂದೇಟು ಹಾಕಿದ ಮಕ್ಕಳಿಗೆ ಸಮಾಧಾನ ಹೇಳಲು ಪಾಲಕರು ಶಾಲೆಗೆ ಬಂದಿದ್ದು ಕಂಡುಬಂದಿತು. ನಗರದ ಮಹಾವೀರ ವೃತ್ತದ ಸಮೀಪವಿರುವ ವಾಣಿ ವಿಲಾಸ ಶಾಲೆಗೆ ಮಕ್ಕಳೊಂದಿಗೆ ತಾಯಂದಿರು ಬಂದಿದ್ದರು. ಕೆಲ ಮಕ್ಕಳು ಪ್ರಥಮ ದಿನದ ಉತ್ಸಾಹದ ಚಿಲುಮೆಯಾಗಿದ್ದರೆ, ಮತ್ತೆ ಕೆಲವರು ಸಪ್ಪೆಯಾಗಿ ಕಂಡರು.
ಶೇ.80 ರಷ್ಟು ಪುಸ್ತಕಗಳ ಪೂರೈಕೆಯಾಗಿದ್ದು ಹಳೆಯ ಪುಸ್ತಕ ಸಂಗ್ರಹಿಸಿಟ್ಟಿದರಿಂದ ಯಾವುದೇ ತೊಂದರೆಯಾಗಿಲ್ಲ. ತರಗತಿ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಕು. ಎಚ್. ಮಂಜುನಾಥ್, ಡಿಡಿಪಿಐ ಹಾಸನ