ಹೊಳೆನರಸೀಪುರ: ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದೇಶವ್ಯಾಪಿ ನಡೆಯುತ್ತಿರುವ ಮುಷ್ಕರ ಬೆಂಬಲಿಸಿ ಸಿಐಟಿಯು ಸಂಘಟನೆ ತಾಲೂಕು ಘಟಕದ ಸದಸ್ಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಮುಂಭಾಗದಿಂದ ಪ್ರತಿಭಟನಾಕಾರರು ಆರಂಭಿಸಿದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ಮಹಾತ್ಮ ಗಾಂಧಿ ವೃತ್ತದಲ್ಲಿ ಕೆಲ ಸಮಯ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ತಡೆ ನಡೆಸಿದರು. ನಂತರ ತಾಲೂಕು ಕಚೇರಿ ಆವರಣದಲ್ಲಿ ಘೋಷಣೆಗಳನ್ನು ಕೂಗಿ ಮುಷ್ಕರ ಅಂತ್ಯಗೊಳಿಸಿದರು.
ಸಿಐಟಿಯು ಸಂಘಟನೆ ತಾಲೂಕು ಘಟಕದ ಗೌರವ ಅಧ್ಯಕ್ಷೆ ಲತಾ, ಅಧ್ಯಕ್ಷ ಮಲ್ಲಿಕಾರ್ಜುನ್, ಅಂಗನವಾಡಿ ಕಾರ್ಯಕರ್ತರ ಸಂಘದ ಗೌರವ ಅಧ್ಯಕ್ಷೆ ಗೀತಾ, ಅಧ್ಯಕ್ಷೆ ವೀಣಾ, ಶೈಲಜಾ, ವಿಜಯ ಕುಮಾರಿ, ಕೃಷ್ಣಮೂರ್ತಿ, ಸಿಗರನಹಳ್ಳಿ ರಾಜು ಇತರರು ಭಾಗವಹಿಸಿದ್ದರು.
