ಶೃಂಗೇರಿ ಶಾರದೆ ಮೇಲೆ ರೇವಣ್ಣ ಪ್ರಮಾಣ ಮಾಡ್ಲಿ

ಬೆಂಗಳೂರು: ಹಾಸನದಲ್ಲಿ ತಲೆದೋರಿರುವ ಮೈತ್ರಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಇನ್ನು ಮುಂದೆ ಕಿರುಕುಳ ಕೊಡಲ್ಲ ಎಂದು ಸಚಿವ ಎಚ್.ಡಿ.ರೇವಣ್ಣರಿಂದ ಶೃಂಗೇರಿ ಶಾರದೆ ಮೇಲೆ ಪ್ರಮಾಣ ಮಾಡಿಸಿ, ನಂತರ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬೆಂಬಲಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹಾಸನ ಕಾಂಗ್ರೆಸಿಗರು, ಪಕ್ಷಕ್ಕೆ ನೇರ ಸವಾಲು ಹಾಕಿದ್ದಾರೆ.

ಬುಧವಾರ ಸಿದ್ದರಾಮಯ್ಯ ಮನೆಗೆ ಆಗಮಿಸಿದ್ದ ಹಾಸನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ಹಾಗೂ ಅವರ ತಂದೆ ಎಚ್.ಡಿ.ರೇವಣ್ಣ ವಿರುದ್ಧ ಆರೋಪಗಳ ಪಟ್ಟಿಯನ್ನೇ ಬಿಡಿಸಿಟ್ಟರು. ಅಲ್ಲದೆ, ಈ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಅಭ್ಯರ್ಥಿ ಬೆಂಬಲಿಸಲು ಸಾಧ್ಯವೇ ಇಲ್ಲ. ನೀವು ಮೈತ್ರಿ ಮಾಡಿಕೊಂಡಿರಬಹುದು, ನಾವು ಕೆಲಸ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಮುಂದೆ ಘಂಟಾಘೋಷವಾಗಿ ಹೇಳಿದರು.

ಎಂಎಲ್​ಸಿ ಗೋಪಾಲಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ಮಾಜಿ ಸಚಿವ ಗಂಡಸಿ ಶಿವರಾಂ, ಮಾಜಿ ಶಾಸಕ ಪುಟ್ಟೇಗೌಡ, ಜಿಲ್ಲಾ ಹಾಗೂ ತಾಲೂಕು ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕಗಳ ಮುಖಂಡರು ಕಾರ್ಯಕರ್ತರ ಮಾತಿಗೆ ದನಿಗೂಡಿಸಿದರು. ಬಸ್, ಕಾರ್​ಗಳಲ್ಲಿ ಆಗಮಿಸಿದ್ದ ನೂರಾರು ಕಾರ್ಯಕರ್ತರದ್ದು ಒಂದೇ ಹಠ, ಯಾವುದೇ ಕಾರಣಕ್ಕೂ ಪ್ರಜ್ವಲ್ ಬೆಂಬಲಿಸಲ್ಲ! ನಮ್ಮ ಮೇಲೆ ರೇವಣ್ಣ ಕೇಸು ಹಾಕಿಸುತ್ತಿದ್ದಾರೆ ಎಂದು ಪಟ್ಟಿಯೊಂದನ್ನು ಬಿಡುಗಡೆ ಮಾಡಿದರು. ‘ನೀವು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ ಅಂತೀರ, ಜಿಲ್ಲಾ ಮಟ್ಟದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಇದು ನಿಮಗೂ ಗೊತ್ತಿಲ್ಲದೇ ಏನಿಲ್ಲ. ರೇವಣ್ಣ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಾರೆ. ಎಲ್ಲ ಅಧಿಕಾರಿಗಳು ಅವರು ಹೇಳಿದಂತೆ ಕೇಳುತ್ತಾರೆ. ನಮ್ಮ ಯಾವುದೇ ಕೆಲಸಗಳು ಆಗುವುದಿಲ್ಲ. ಸಣ್ಣ ಪುಟ್ಟ ಜಗಳಕ್ಕೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿಸುತ್ತಾರೆ. ಅಲ್ಲಿ ಜೆಡಿಎಸ್ ಕಾರ್ಯಕರ್ತರದ್ದೇ ದರ್ಬಾರು’ ಎಂದು ಆರೋಪಗಳ ಸುರಿಮಳೆಗರೆದರು. ಮಾಜಿ ಶಾಸಕ ಪುಟ್ಟೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಜನ ತಬ್ಬಲಿತನ ಅನುಭವಿಸುತ್ತಿದ್ದಾರೆ. ಇನ್ನು ಮುಂದೆ ನಮ್ಮ ಮೇಲೆ ದೌರ್ಜನ್ಯ ನಡೆಸುವುದಿಲ್ಲ ಎಂದು ರೇವಣ್ಣ ಹಾಗೂ ದೇವೇಗೌಡರು ಶಾರದಾಂಬೆ ಮೇಲೆ ಪ್ರಮಾಣ ಮಾಡಲಿ ಎಂದರು. ‘ಯಾರಾದರೂ ದೊಡ್ಡವರನ್ನು ನಿಲ್ಲಿಸಿದ್ದರೆ ಕೆಲಸ ಮಾಡುತ್ತಿದ್ದೆವು. ಹುಡುಗನ ಪರ ಸಾಧ್ಯವಿಲ್ಲ. ಕೊನೇ ಪಕ್ಷ ಪ್ರಜ್ವಲ್ ಜಿಪಂ, ತಾಪಂ ಸದಸ್ಯನೂ ಆಗಿಲ್ಲ. ಏಕಾಏಕಿ ಸಂಸದರನ್ನಾಗಿ ಮಾಡಲು ಹೊರಟಿದ್ದಾರೆ’ ಎಂದು ಸಕಲೇಶಪುರ ಕೈ ಮುಖಂಡ ಮಲ್ಲೇಶ್ ಟೀಕಿಸಿದರು. ಜೆಡಿಎಸ್ ಜತೆಗಿನ ಮೈತ್ರಿ ಹೈಕಮಾಂಡ್ ನಿರ್ಧಾರ. ಇದನ್ನು ನಾವೆಲ್ಲರೂ ಒಪ್ಪಲೇಬೇಕು. ಹಾಗಾಗಿ ಏನೇ ಅಸಮಾಧಾನ ಇದ್ದರೂ ಮರೆತು ಜೆಡಿಎಸ್ ಜತೆ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಆದರೂ ಅಸಮಾಧಾನ ನಿಲ್ಲಿಸದ ಕಾರ್ಯಕರ್ತರು, ಮುಖಂಡರು ಪ್ರಜ್ವಲ್ ಬೆಂಬಲಿಸಲ್ಲವೆಂದರು. ‘ಮತ್ತೊಂದು ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆ, ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿ’ ಎಂದು ಸಿದ್ದರಾಮಯ್ಯ ಕೋರಿದರು.

ಇಂದು ಮೈತ್ರಿ ನಾಯಕರ ಸಭೆ

ಹಾಸನ ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳಿಗೆ ಸಮಾನ ಅವಕಾಶ ಸಿಗಬೇಕು, ಈ ಕಾರಣಕ್ಕೆ ಸಮನ್ವಯ ಸಮಿತಿ ರಚಿಸಿ, ಎಲ್ಲವೂ ಅಲ್ಲೇ ತೀರ್ಮಾನ ಆಗಲಿ ಎಂದು ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ. ಆಕ್ರೊಶ ತಣ್ಣಗಾಗದ ಹಿನ್ನೆಲೆಯಲ್ಲಿ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆದು, ಗುರುವಾರ ಮೈತ್ರಿ ನಾಯಕರ ಸಭೆ ಕರೆಯಲು ನಿರ್ಣಯಿಸಲಾಯಿತು. ಈ ಸಭೆಗೆ ರೇವಣ್ಣರನ್ನೂ ಕರೆಸಿ, ಅವರಿಂದಲೇ ಸಮಜಾಯಿಷಿ ಕೊಡಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಆಗುತ್ತಿದೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡುವುದಿಲ್ಲ ಅಂತ ರೇವಣ್ಣ ಮಾಧ್ಯಮಗಳ ಮುಂದೆ ಹೇಳಬೇಕು.

| ಗಂಡಸಿ ಶಿವರಾಂ ಮಾಜಿ ಸಚಿವ