ತಿಂಗಳಾಂತ್ಯದಲ್ಲಿ ರಣಘಟ್ಟ ನೀರಾವರಿ ಯೋಜನೆಗೆ ಸಿಎಂ ಚಾಲನೆ

ಶಾಸಕ ಕೆ.ಎಸ್.ಲಿಂಗೇಶ್ ಮಾಹಿತಿಪೂರ್ವಭಾವಿ ಸಭೆ

ಹಳೇಬೀಡು: ಫೆಬ್ರವರಿ ತಿಂಗಳಾಂತ್ಯದಲ್ಲಿ ರಣಘಟ್ಟ ನೀರಾವರಿ ಯೋಜನೆ ಸೇರಿದಂತೆ ಬೇಲೂರು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಳೇಬೀಡಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ರಣಘಟ್ಟ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭಾನುವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವರು ಹಳೇಬೀಡಿಗೆ ಆಗಮಿಸಲಿದ್ದು, ರಣಘಟ್ಟ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಎತ್ತಿನಹೊಳೆ ಯೋಜನೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಕಾಮಗಾರಿಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಜತೆಗೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಆಗಮಿಸಲಿದ್ದು, ಸಮಾರಂಭದ ಸ್ಥಳ ಹಾಗೂ ದಿನಾಂಕವನ್ನು ಶೀಘ್ರವೇ ನಿಗದಿಪಡಿಸಲಾಗುವುದು ಎಂದರು.
ರಣಘಟ್ಟ ನೀರಾವರಿ ಯೋಜನೆಗೆ 168 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಲಾಗಿದ್ದು, ಪ್ರಸ್ತುತ ಮೊದಲ ಹಂತದ ಕಾಮಗಾರಿಗೆ 100 ಕೋಟಿ ರೂ. ಮೀಸಲಿರಿಸಲಾಗಿದೆ. ತಾಲೂಕಿಗೆ ಐದು ಹೊಸ ಎಂಯುಎಸ್‌ಎಸ್ ಸ್ಟೇಷನ್‌ಗಳು ಮಂಜೂರಾಗಿದ್ದು, ಕೆಪಿಟಿಸಿಎಲ್ ಉಸ್ತುವಾರಿಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಹಳೇಬೀಡಿನ ಸೆಸ್ಕ್ ಶಾಖೆಯು ಉಪ ವಿಭಾಗವಾಗಿ ಮೇಲ್ದರ್ಜೆಗೇರಲಿದೆ. ಹೋಬಳಿಯ ಆಯ್ದ ಗ್ರಾಮಗಳಲ್ಲಿ ಹೊಸದಾಗಿ ಐದು ಪಶು ವೈದ್ಯ ಶಾಲೆಗಳನ್ನು ನಿರ್ಮಿಸಲು ಅನುದಾನ ದೊರಕಿದ್ದು, ಕಾಮಗಾರಿ ಆರಂಭವಾಗಲಿದೆ. ಒಂದೇ ದಿನ ಅಂದಾಜು 300 ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಎತ್ತಿನಹೊಳೆಯಿಂದ ಹಳೇಬೀಡು-ಮಾದಿಹಳ್ಳಿ ಹೋಬಳಿ ಕೆರೆಗಳಿಗೆ ನೀರು ಪೂರೈಸಲು ಜಲಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದ್ದು, ಹಳೇಬೀಡಿಗೆ ಭೇಟಿ ನೀಡಿದ ದಿನ ಅವರು ಸ್ಥಳ ಸಮೀಕ್ಷೆ ನಡೆಸುವ ಸಾಧ್ಯತೆಯಿದೆ. ಯಗಚಿ ಹಾಗೂ ರಣಘಟ್ಟ ನಾಲೆಗಳ ಮೇಲ್ಭಾಗದ ಗ್ರಾಮಗಳಾದ ಚೀಲನಾಯ್ಕನ ಹಳ್ಳಿ, ಕಟ್ಟೆಸೋಮನ ಹಳ್ಳಿ, ಹೆಬ್ಬಾಳು, ಮುತ್ತುಗನ್ನೆ ಮುಂತಾದ ಗ್ರಾಮಗಳಿಗೆ ಜಲಾಶಯದಿಂದಲೇ ಕುಡಿಯುವ ನೀರು ಪೂರೈಕೆ ಮಾಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಜಲಧಾರೆ ಯೋಜನೆಯಡಿ ನೀರು ಪಡೆಯಲು 220 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅನುಮೋದನೆ ದೊರಕುವ ವಿಶ್ವಾಸವಿದೆ ಎಂದರು.
ಜೆಡಿಎಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿದರು. ಸಭೆಯಲ್ಲಿ ತಾಪಂ ಅಧ್ಯಕ್ಷ ರಂಗೇಗೌಡ, ತಾಪಂ ಸದಸ್ಯರಾದ ವಿಜಯ್‌ಕುಮಾರ್, ಸುಮಾ ಪರಮೇಶ್, ಜೆಡಿಎಸ್ ಮುಖಂಡರಾದ ಡಿ.ಎಲ್.ಸೋಮಶೇಖರ್, ಸಂಗಮ್ ಗುರುಮಲ್ಲೇಗೌಡ, ಪರಮೇಶ್, ಕಾಂಗ್ರೆಸ್ ಮುಖಂಡ ಹುಲಿಕೆರೆ ರಾಜು, ರೈತ ಮುಖಂಡ ಗಡಿ ಮಲ್ಲಿಕಾರ್ಜುನ, ಹಾಲಪ್ಪ ಹಾಗೂ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.