ಒತ್ತಡ ಅನುಭವಿಸಿದ್ದಾರೆ ಕುಮಾರಸ್ವಾಮಿ!

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಹಾಸನ
ಸಿದ್ದರಾಮಯ್ಯ ಸರ್ಕಾರದ ಎಲ್ಲ ಯೋಜನೆಗಳನ್ನೂ ಮುಂದುವರಿಸುವ ಜತೆಗೆ ರೈತರ ಬೆಳೆಸಾಲ ಮನ್ನಾ ಮಾಡುವ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕಷ್ಟು ಒತ್ತಡ ಅನುಭವಿಸಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿಸಾಲ ಋಣಮುಕ್ತ ಪ್ರಮಾಣ ಪತ್ರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನನ್ನ 60 ವರ್ಷಗಳ ರಾಜಕೀಯ ಅನುಭವದಿಂದ ನೋಡಿದರೆ ರೈತರ ಸಾಲ ಮನ್ನಾಗೆ ಸಂಪನ್ಮೂಲ ಸಂಗ್ರಹಿಸುವುದು ಹೇಗೆ ಎನ್ನುವ ಭಾವನೆ ನನ್ನಲ್ಲಿದೆ. ಬೆಳೆಸಾಲ ಮನ್ನಾ ಮಾಡುವ ಜತೆಗೆ ಹಿಂದಿನ ಸರ್ಕಾರಗಳ ಕಾರ್ಯಕ್ರಮಗಳನ್ನು ಮುಂದುವರಿಸುವುದು ಬಹಳ ಕಷ್ಟಕರ. ಹೀಗಿದ್ದರೂ ಕೊಟ್ಟ ಮಾತು ಉಳಿಸಿಕೊಳ್ಳಲೇಬೇಕು ಎಂದು ಕುಮಾರಸ್ವಾಮಿ ದೃಢ ನಿರ್ಧಾರ ಕೈಗೊಂಡರು ಎಂದು ಶ್ಲಾಘಿಸಿದರು.
ನಮ್ಮ ರಾಜ್ಯದ ರೈತರ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ 2 ಲಕ್ಷ ರೂ.ವರೆಗಿನ ಬೆಳೆ ಸಾಲವನ್ನು ಕುಮಾರಸ್ವಾಮಿ ಮನ್ನಾ ಮಾಡುವ ತೀರ್ಮಾನ ಕೈಗೊಂಡಿದ್ದಾರೆ. 46 ಸಾವಿರ ಕೋಟಿ ರೂ.ನಷ್ಟು ದೊಡ್ಡ ಸಂಪನ್ಮೂಲವನ್ನು ಈ ಯೋಜನೆಗೆ ಒದಗಿಸುವುದು ಅಷ್ಟು ಸುಲಭವಲ್ಲ ಎಂದರು.
ರಾಜ್ಯ ಸರ್ಕಾರ ಇದರ ನಡುವೆಯೇ ಬೀದಿ ಬದಿ ವರ್ತಕರನ್ನು ಮೀಟರ್ ಬಡ್ಡಿ ದಂಧೆಯವರಿಂದ ರಕ್ಷಿಸಲು ಜಾರಿಗೆ ತಂದಿರುವ ಬಡವರ ಬಂಧು ಯೋಜನೆ ಬಡ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ಹೆಚ್ಚು ಮಾತನಾಡಲು ಇದು ಚುನಾವಣೆಯ ಸಂದರ್ಭವಲ್ಲ. ಎದುರಾಳಿಗಳಿಗೆ ಉತ್ತರ ನೀಡುವ ಶಕ್ತಿ ನನ್ನಲ್ಲಿದೆ. ಚುನಾವಣೆ ಬಂದಾಗ ಈವರೆಗೆ ನಾವೇನು ಮಾಡಿದ್ದೇವೆ ಎನ್ನುವುದನ್ನು ಹೇಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.