ಜಿಲ್ಲೆಯಲ್ಲಿ 14,29,765 ಮತದಾರರು

ಅಂತಿಮ ಮತದಾರರ ಪಟ್ಟಿ ಸಿದ್ಧ ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಹಾಸನ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಿಸಿದ್ದು, ಜಿಲ್ಲೆಯಲ್ಲಿ 7,21,677 ಮಹಿಳೆಯರು ಹಾಗೂ 7,08,088 ಪುರುಷರು ಸೇರಿ ಒಟ್ಟು 14,29,765 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ನಿಗದಿಪಡಿಸಿರುವ ವೇಳಾಪಟ್ಟಿಯಂತೆ 2018ರ ಅ.10 ರಂದು ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ, ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಮತಗಟ್ಟೆಗಳ ಹಂತದಲ್ಲಿ ಪ್ರಕಟಿಸಲಾಗಿದೆ ಎಂದರು.
2018ರ ಅ.10 ರಿಂದ ನ. 25 ರವರೆಗೆ ಸಾರ್ವಜನಿಕರಿಂದ ಹಾಗೂ ರಾಜಕೀಯ ಪಕ್ಷಗಳಿಂದ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಒಟ್ಟು 39,386 ಅರ್ಜಿಗಳು ಸ್ವೀಕೃತಗೊಂಡಿವೆ. ಈ ಪೈಕಿ 38,856 ಅರ್ಜಿಗಳನ್ನು ಪುರಸ್ಕರಿಸಿ, 468 ಅರ್ಜಿಗಳನ್ನು ಆಯಾ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಾಣಾಧಿಕಾರಿ ಹಾಗೂ ಸಹಾಯಕ, ಮತದಾರರ ನೋಂದಾಣಾಧಿಕಾರಿ ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.
ಪಟ್ಟಿಯಲ್ಲಿದ್ದ 257 ಭಾವಚಿತ್ರವಿಲ್ಲದ ಮತದಾರರ ವಿವರಗಳನ್ನು ಪಡೆದು ಪರಿಶೀಲನೆ ನಡೆಸಿ, ಭಾವಚಿತ್ರವನ್ನು ಅಪ್‌ಲೋಡ್ ಮಾಡುವ ಕಾರ್ಯವನ್ನು ಸಂಪೂರ್ಣವಾಗಿ ನಿರ್ವಹಿಸಿ ಶೇ.100 ಪ್ರಗತಿ ಸಾಧಿಸಲಾಗಿದೆ. ಇದರಿಂದ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಎಲ್ಲ ಮತದಾರರ ಪಟ್ಟಿಯಲ್ಲಿಯೂ ಭಾವಚಿತ್ರಗಳಿವೆ. ಗುರುತಿನ ಚೀಟಿ ವಿತರಣೆಯಲ್ಲಿಯೂ ಶೇ. 100 ಪ್ರಗತಿ ಸಾಧಿಸಲಾಗಿದೆ ಎಂದರು.
ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ- 2019ರ ಅಂತಿಮ ಮತದಾರರ ಪಟ್ಟಿಯನ್ನು ಕೇಂದ್ರ ಚುನವಾಣಾ ಆಯೋಗದ ವೇಳಾಪಟ್ಟಿಯಂತೆ ಪ್ರಚುರಪಡಿಸಲಾಗಿದ್ದು, ಸಾರ್ವಜನಿಕರು ಆಯಾ ಮತಗಟ್ಟೆಗಳ ಹಂತದಲ್ಲಿ, ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೇ ಭಾರತ ಚುನಾವಣಾ ಆಯೋಗದ ವೆಬ್‌ಸೈಟ್‌ಗಳಲ್ಲೂ ಮಾಹಿತಿ ವೀಕ್ಷಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಅಂತಿಮ ಪಟ್ಟಿಯಂತೆ ಶ್ರವಣಬೆಳಗೊಳ ಕ್ಷೇತ್ರದಲ್ಲಿ 1,99,235, ಅರಸೀಕೆರೆಯಲ್ಲಿ 2,07,621, ಬೇಲೂರಿನಲ್ಲಿ 1,90,383, ಹಾಸನದಲ್ಲಿ 2,11,905, ಹೊಳೆನರಸೀಪುರದಲ್ಲಿ 2,08,824, ಅರಕಲಗೂಡಿನಲ್ಲ್ಲಿ 2,16,223 ಹಾಗೂ ಸಕಲೇಶಪುರ ಕ್ಷೇತ್ರದಲ್ಲಿ 1,95,574 ಮತದಾರರಿದ್ದಾರೆ. ಮತದಾರರಿಗೆ ಅನುಕೂಲವಾಗುವಂತೆ ಜಿಲ್ಲಾಮಟ್ಟದಲ್ಲಿ ಸಾಮಾನ್ಯ ಉಚಿತ ಸಹಾಯವಾಣಿ ಸಂಖ್ಯೆ 1950 ತರೆಯಲಾಗಿದೆ ಎಂದು ತಿಳಿಸಿದರು.

ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ ಜಿಲ್ಲಾ ಮಟ್ಟದಲ್ಲಿ ಮತದಾರರ ಪಟ್ಟಿಗಳ ಕುರಿತು ಸಾರ್ವಜನಿಕರು ಮಾಹಿತಿ ಪಡೆಯಬಹುದು. ಜ.25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಜಿಲ್ಲೆ, ತಾಲೂಕು ಹಾಗೂ ಗ್ರಾಮಾಂತರ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಜನರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.