ಹಾಸನ: 2021ರ ಜನವರಿಯೊಳಗೆ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ಭರವಸೆ ನೀಡಿದರು.
ಭಾನುವಾರ ಬೆಳಗ್ಗೆ ನಗರ ಸಮೀಪದ ಚಿಕ್ಕಹೊನ್ನೇನಹಳ್ಳಿ, ದಾಸರಕೊಪ್ಪಲು, ಹರಳಹಳ್ಳಿ ಹಾಗೂ ಜಯನಗರ ಬಡಾವಣೆಗೆ ಭೇಟಿ ನೀಡಿದ ಅವರು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿ ಹಾಗೂ ತುರ್ತಾಗಿ ಆಗಲೇಬೇಕಿರುವ ಕೆಲಸದ ಕುರಿತು ಮಾಹಿತಿ ಪಡೆದರು. ನಂತರ ಚಿಕ್ಕಹೊನ್ನೇನಹಳ್ಳಿಯಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಿನದ 24 ಗಂಟೆ ಕುಡಿಯುವ ನೀರು ಒದಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ನೆರವಿನಡಿ ಅಮೃತ್ ಯೋಜನೆ ಕಾಮಗಾರಿ ಪ್ರಾರಂಭಿಸಲಾಗಿದೆ. ಎಲ್ಲ ವಾರ್ಡ್‌ಗಳಿಗೂ ನೀರು ಲಭ್ಯವಾಗಲಿದ್ದು ಕೆಲವೇ ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಅಮೃತ್ ಯೋಜನೆಯಿಂದ ಜಯನಗರ, ಚಿಕ್ಕಹೊನ್ನೇನಹಳ್ಳಿ, ವಿಶ್ವೇಶ್ವರ ಬಡಾವಣೆ, ವಿವೇಕ ಹಾಗೂ ವಿದ್ಯಾ ನಗರ ನಿವಾಸಿಗಳು ಲಾಭ ಪಡೆಯುತ್ತಾರೆ ಎಂದರು.
ಬೇಕಾಬಿಟ್ಟಿ ಲೇಔಟ್‌ಗೆ ಅನುಮತಿ ಇಲ್ಲ: ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಸೌಲಭ್ಯ ಕಲ್ಪಿಸದ ಬೇಕಾಬಿಟ್ಟಿ ಲೇಔಟ್‌ಗೆ ಅನುಮತಿ ನೀಡಬಾರದೆಂದು ಜಿಲ್ಲಾಧಿಕಾರಿಗೆ ಈಗಾಗಲೇ ಹೇಳಿದ್ದೇನೆ. ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್, ಪಾರ್ಕ್, ಸಾರ್ವಜನಿಕ ಗ್ರಂಥಾಲಯ ಹೀಗೆ ವಿವಿಧ ಕೆಲಸ ಕೈಗೊಂಡರೆ ಮಾತ್ರ ಹೊಸ ಬಡಾವಣೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವ ಕಾರ್ಯದರ್ಶಿ ರವಿ ನಾಕಲಗೂಡು, ಲಯನ್ಸ್ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ಎಚ್.ಆರ್. ಚಂದ್ರೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಇ. ಕೃಷ್ಣೇಗೌಡ, ಬಿಜೆಪಿ ಮುಖಂಡ ಪ್ರಕಾಶ್, ಮೊಗಣ್ಣಗೌಡ ಹಾಗೂ ಇತರರಿದ್ದರು.