ನಟ ಡಾ.ರಾಜ್‌ಕುಮಾರ್ ಎಲ್ಲರಿಗೂ ಮಾದರಿ

ಹಾಸನ : ಜೀವನವೇ ಒಂದು ಮೌಲ್ಯವಾಗಿ ಕನ್ನಡದ ಶಕ್ತಿ ಆಗಿರುವ ಪದ್ಮಭೂಷಣ ಡಾ.ರಾಜಕುಮಾರ್ ಎಲ್ಲರಿಗೂ ಆದರ್ಶವಾಗಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಫಲ ದೊರಕುತ್ತದೆ ಎನ್ನುವುದಕ್ಕೆ ಅವರೇ ಉತ್ತಮ ಉದಾಹರಣೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ರಾಜಕುಮಾರ್ ಅವರ 91ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಡಾ.ರಾಜಕುಮಾರ್ ಕನ್ನಡ ಚಿತ್ರರಂಗದ ದೊಡ್ಡ ಆದರ್ಶ, ಬಡವರ ಬಗ್ಗೆ ಕಾಳಜಿ ಹೊಂದಿದ್ದ ಅಪುರೂಪದ ಸರಳ ವ್ಯಕ್ತಿತ್ವ ಹೊಂದಿದ್ದರು ಎಂದು ಬಣ್ಣಿಸಿದರು.

ಕನ್ನಡ ಹೊರತುಪಡಿಸಿ ಬೇರೆ ಯಾವ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸದ ಡಾ.ರಾಜಕುಮಾರ್, ತಮ್ಮನ್ನು ಕನ್ನಡಕ್ಕಾಗಿ ಅರ್ಪಿಸಿಕೊಂಡಿದ್ದರು. ಅವರ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ಡಾ.ರಾಜಕುಮಾರ್ ಅವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಕನ್ನಡ ಚಿತ್ರಮಂದಿರದಲ್ಲಿ ಕನ್ನಡಕ್ಕೆ ಪ್ರಾಶಸ್ತ್ಯವಿಲ್ಲದ ಕಾಲಘಟ್ಟದಲ್ಲಿ ರಾಜಕುಮಾರ್ ಹೋರಾಟದ ಮೂಲಕ ಅದನ್ನು ದೊಕಿಸಿದರು.

ರಾಜ್ಯದ ಹಿತಾಸಕ್ತಿ ಕಾಪಾಡಿದ ನಾಡಿನ ಸಾಂಸ್ಕೃತಿಕ ರಾಯಭಾರಿಯಾದ ಅವರು, ತೆರೆಯ ಮೇಲಷ್ಟೆ ಅಲ್ಲ, ನಿಜ ಜೀವನದಲ್ಲಿಯೂ ಅನುಕರಣೀಯವಾದ ಔದಾರ್ಯ, ಅಂತಃಕರಣ, ಜೀವನ ಮೌಲ್ಯಗಳನ್ನು ಹೊಂದಿದ್ದರು. ನಿರ್ದೇಶಕರು ಕೊಟ್ಟ ಪಾತ್ರಕ್ಕೆ ತಕ್ಕಂತೆ ಜೀವ ತುಂಬುವ ಗುಣ ಹೊಂದಿದ್ದ ಅಪುರೂಪದ ವ್ಯಕ್ತಿತ್ವ ಎಂದು ಶ್ಲಾಘಿಸಿಸಿದರು.

ಅವರ ಎಲ್ಲ ಚಲನಚಿತ್ರಗಳನ್ನು ಮುಂದಿನ ಪೀಳಿಗೆಗೆ ದಾಖಲೆಯಾಗಿ ತೋರಿಸಬಹುದು. ಬಂಗಾರದ ಮನುಷ್ಯ, ಸನಾದಿ ಅಪ್ಪಣ್ಣ, ಕೃಷ್ಣದೇವರಾಯ, ಮಯೂರ ಸೇರಿದಂತೆ ಎಲ್ಲ ಚಿತ್ರಗಳಲ್ಲಿಯೂ ಅವರು ತಮ್ಮ ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಅವರ ಚಿತ್ರಗಳು ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತಿದ್ದವು. ಮಹಿಳೆಯರನ್ನು ಗೌರವಿಸಬೇಕು ಎನ್ನುವಂತಹ ಸಾಮಾನ್ಯ ಕಾಳಜಿಯನ್ನು ಎಲ್ಲ ಚಿತ್ರಗಳಲ್ಲಿಯೂ ಕಾಣಬಹುದು ಎಂದರು.
ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕ ಮನ್ಸೂರ್ ಪಾಷಾ ಮಾತನಾಡಿ, ಡಾ.ರಾಜಕುಮಾರ್ ನಟಿಸಿದ ಬಂಗಾರದ ಮನುಷ್ಯ ಕನ್ನಡ ಚಲನಚಿತ್ರ ಹಳ್ಳಿ ಜನರಲ್ಲಿ ಬಹಳ ಗಾಢ ಪರಿಣಾಮ ಬೀರಿತು. ಹಳ್ಳಿಯಿಂದ ಪಟ್ಟಣಕ್ಕೆ ಹೊರಟಿದ್ದ ಅದೆಷ್ಟೋ ರೈತರನ್ನು ಗ್ರಾಮಗಳಲ್ಲಿ ಉಳಿಯುವಂತೆ ಮಾಡಿತು. ಕೃಷಿ ಬದುಕು ಎಂದರೇನು ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿತು ಎಂದರು.

ಕಲಾವಿದರಾದ ಟಿ.ಎನ್.ವಿಜಯ್ ಕುಮಾರ್ ಹಾಗೂ ತಂಡದವರು ರಾಜಕುಮಾರ್ ಅವರ ವೇಷಭೂಷಣದೊಂದಿಗೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರೊಬೆಷರಿ ಐಎಎಸ್ ಅಧಿಕಾರಿ ಪ್ರಿಯಾಂಗ, ಎಎಸ್‌ಪಿ ನಂದಿನಿ, ವಾರ್ತಾಧಿಕಾರಿ ವಿನೋದ್ ಚಂದ್ರ, ಡಾ.ರಾಜಕುಮಾರ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ಬಾಳ್ಳುಗೋಪಾಲ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಮುಂತಾದವರಿದ್ದರು.