ತಡವಾಗಲಿರುವ ಫಲಿತಾಂಶ ಪ್ರಕಟಣೆ

ಹಾಸನ: ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಆಗಿರುವುದರಿಂದ ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.


ಮತ ಎಣಿಕೆ ಕೇಂದ್ರವಾಗಿರುವ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.


ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಎಣಿಕೆ ನಡೆಸಬೇಕು. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಫಲಿತಾಂಶ ಪ್ರಕಟಿಸಲಾಗುವುದು. ಅಂಚೆ ಮತಗಳ ಎಣಿಕೆ ಮೊದಲು ಪೂರ್ಣಗೊಳ್ಳುತ್ತದೆ. ನಂತರ ವಿದ್ಯುನ್ಮಾನ ಮತಯಂತ್ರಗಳ ಎಣಿಕೆ ನಡೆಸಲಾಗುವುದು. ಆ ಬಳಿಕ ಲಾಟರಿ ಮೂಲಕ ವಿವಿಪ್ಯಾಟ್ ಆಯ್ಕೆ ಮಾಡಿ ಎಣಿಕೆ ಆರಂಭಿಸಲಾಗುತ್ತದೆ. ವಿದ್ಯುನ್ಮಾನ ಯಂತ್ರಗಳ ಎಣಿಕೆಯಲ್ಲೇ ಯಾವ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆಂಬುದನ್ನು ಅರಿಯಬಹುದು. ಆದರೆ, ಅಧಿಕೃತ ಘೋಷಣೆಗಾಗಿ ಸಂಜೆವರೆಗೆ ಕಾಯಬೇಕಾಗುತ್ತದೆ ಎಂದು ತಿಳಿಸಿದರು.


ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕ ಕೊಠಡಿ ತೆರೆದಿದ್ದು, ತಲಾ 14 ಟೇಬಲ್ ಅಳವಡಿಸಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ 10 ಟೇಬಲ್ ಜೋಡಿಸಲಾಗಿದೆ. ಪ್ರತಿ ಟೇಬಲ್‌ಗೆ ಮೂವರು ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಮತ ಎಣಿಕೆ ಕಾರ್ಯಕ್ಕಾಗಿ 408 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದರು.

1200 ಭದ್ರತಾ ಸಿಬ್ಬಂದಿ: ಮತ ಎಣಿಕೆ ಮತ್ತು ಫಲಿತಾಂಶ ಸಂದರ್ಭ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾದ್ಯಂತ 1200 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಥೋರ್ ಹೇಳಿದರು.


ಮೇ 23ರಂದು ಬೆಳಗ್ಗೆ 6 ರಿಂದ 24ರಂದು ಸಂಜೆ 6ಗಂಟೆವರೆಗೆ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸಬಾರದು ಎಂದರು.


ಭದ್ರತೆಗಾಗಿ 7 ಕೆಎಸ್‌ಆರ್‌ಪಿ, 21 ಡಿಎಆರ್, ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲಾದ್ಯಂತ 129 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಈ ವ್ಯಾಪ್ತಿಯಲ್ಲಿ ಅಧಿಕ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದರು.
ಮತ ಎಣಿಕೆ ಕೇಂದ್ರಗಳಿಗೆ ಬರುವ ಅಭ್ಯರ್ಥಿಗಳು, ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು 3 ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಖಾಸಗಿ ವಾಹನಗಳ ನಿಲುಗಡೆಗೆ ಕಾಲೇಜು ಸುತ್ತಲಿನ ಪ್ರದೇಶದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಶಾಂತಿ, ಸುವ್ಯವಸ್ಥೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.


ಸಹಾಯಕ ಚುನಾವಣಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್, ತಹಸೀಲ್ದಾರ್ ಶ್ರೀನಿವಾಸಯ್ಯ ಇತರರಿದ್ದರು.

ಕ್ಯಾಮರಾಗಳಿಗೆ ನಿರ್ಬಂಧ: ಮತ ಎಣಿಕೆ ದೃಶ್ಯಾವಳಿ ಚಿತ್ರೀಕರಣಕ್ಕಾಗಿ ದೃಶ್ಯ ಮಾಧ್ಯಮದ ಕ್ಯಾಮರಾಮನ್‌ಗಳು ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವಂತಿಲ್ಲ. ಕೊಠಡಿಯ ದ್ವಾರದಲ್ಲೇ ಹಳದಿ ಬಣ್ಣದ ಗೆರೆ ಹಾಕಿದ್ದು, ಅಲ್ಲಿಯೇ ನಿಂತು ಚಿತ್ರೀಕರಣ ಮಾಡಿಕೊಳ್ಳಬೇಕು. ಆದರೆ ಇದಕ್ಕೂ ನೋಡಲ್ ಅಧಿಕಾರಿಗಳಾದ ವಿನೋದ್‌ಚಂದ್ರ ಹಾಗೂ ರೂಪಾಶೆಟ್ಟಿ ಅವರನ್ನು ಜತೆಗೆ ಕರೆತರಬೇಕು ಎಂಬ ಕಟ್ಟಪ್ಪಣೆಯನ್ನು ಚುನಾವಣಾ ಆಯೋಗ ಹೊರಡಿಸಿದೆ.

Leave a Reply

Your email address will not be published. Required fields are marked *