ಜೀತವಿಮುಕ್ತರನ್ನು ಭೇಟಿಯಾದ ಡಿಸಿ

ಹಾಸನ: ಜೀತದಿಂದ ವಿಮುಕ್ತಿಗೊಂಡು ತಾಲೂಕಿನ ಎಂ.ಡಿ.ಹೊಸೂರು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಸ್ತವ್ಯ ಹೂಡಿರುವ 52 ಜನರನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗುರುವಾರ ಸಂಜೆ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಈ ವೇಳೆ ಜೀತವಿಮುಕ್ತರು ಡಿಸಿ ಎದುರು ಸಮಸ್ಯೆ ಹೇಳಿಕೊಂಡರು. ಈಗಾಗಲೇ ಮಾನಸಿಕ ಹಾಗೂ ದೈಹಿಕವಾಗಿ ಬಳಲಿದ್ದು ತಮ್ಮನ್ನು ಊರುಗಳಿಗೆ ಕಳಿಸಿಕೊಡುವಂತೆ ಕೋರಿದರು. ಸಂತ್ರಸ್ತರು ಊರಿಗೆ ತಲುಪಲು ಬೇಕಾಗುವ ಸಾರಿಗೆ ವೆಚ್ಚವನ್ನು ಜಿಲ್ಲಾಧಿಕಾರಿ ನೀಡಿದರು.

ಶುಕ್ರವಾರ ಎಲ್ಲರೂ ತಮ್ಮ ಊರುಗಳಿಗೆ ಬಸ್ ಅಥವಾ ರೈಲಿನ ಮೂಲಕ ತೆರಳಲಿದ್ದಾರೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.

ಆರು ತಿಂಗಳು ಅಥವಾ ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಧನದಲ್ಲಿದ್ದು ದುಡಿದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯ ನೀಡಲಾಗುವುದು. ಇತರರಿಗೆ ಮಾನವೀಯ ದೃಷ್ಟಿಯಿಂದ ನೆರವು ಒದಗಿಸಲಾಗುವುದು. ಇದಕ್ಕಾಗಿ ತಮ್ಮ ಗ್ರಾಮಗಳಿಗೆ ತೆರಳಿದ ನಂತರ ಎಲ್ಲರೂ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್, ಪಡಿತರ ಕಾರ್ಡ್ ವಿವರ ಕಳಿಸಿಕೊಡುವಂತೆ ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜ್, ತಹಸೀಲ್ದಾರ್ ಶಿವಶಂಕರಪ್ಪ ಜತೆಗಿದ್ದರು.