ಭ್ರಷ್ಟಾಚಾರ ಮೊದಲು ಪರಿಚಯಿಸಿದ್ದೇ ದೇವೇಗೌಡರು

ಹಾಸನ: ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಮೊದಲಿಗೆ ಪರಿಚಯಿಸಿದ್ದೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಂದು ಬಿಜೆಪಿ ಮಾಜಿ ಸಚಿವ ಬಿ. ಸೋಮಶೇಖರ್ ಆರೋಪಿಸಿದರು.

1996ರಲ್ಲಿ ಪ್ರಧಾನಿಯಾಗಿದ್ದ ದಿನಗಳಲ್ಲಿ ಎಲ್ಲ ಕ್ಷೇತ್ರಕ್ಕೂ ಭ್ರಷ್ಟಾಚಾರದ ರುಚಿ ತೋರಿಸಿದರು. ಈಗ ಮೊಮ್ಮಕ್ಕಳ ಮೂಲಕ ಪ್ರಜಾಪ್ರಭುತ್ವದ ಕಡೆಗಣನೆಗೆ ಮುಂದಾಗಿದ್ದಾರೆ. ದೇವೇಗೌಡರ ಮಕ್ಕಳ ಕಾಟ ಸಹಿಸಿಕೊಂಡಿರುವ ಜನರು ಇನ್ನು ಮೊಮ್ಮೊಕ್ಕಳ ಸರ್ವಾಧಿಕಾರಕ್ಕೆ ಬಲಿಯಾಗುವುದು ಬೇಡ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಾಗಿದೆಯಾದರೂ ಜೆಡಿಎಸ್ ಹಾಸನ, ಮಂಡ್ಯ ಹಾಗೂ ತುಮಕೂರಿನಲ್ಲಿ ಗೆದ್ದರೆ ಸಾಕು ಬೇರೆ ಕ್ಷೇತ್ರಗಳ ಉಸಾಬರಿ ಬೇಡ ಎಂಬಂತಿದೆ. ಕಾಂಗ್ರೆಸ್ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಜೆಡಿಎಸ್ ಸಹಕಾರ ನೀಡುತ್ತಿಲ್ಲ. ಅದೇ ರೀತಿ ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಇದರ ಲಾಭವನ್ನು ಬಿಜೆಪಿ ಪಡೆಯಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಾತಿ ರಾಜಕಾರಣಕ್ಕೆ ದೇವೇಗೌಡರು ಆದ್ಯತೆ ನೀಡಿದರು. ದಲಿತ ವರ್ಗದ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಯಿತು. 1985ರಲ್ಲಿ ಜನತಾ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ದಲಿತರನ್ನು ಶಾಶ್ವತವಾಗಿ ರಾಜಕೀಯದಿಂದ ದೂರ ಉಳಿಯುವಂತೆ ಮಾಡಿದರು. ಆರಂಭದಿಂದಲೂ ಎಚ್.ಡಿ. ದೇವೇಗೌಡ ಜಾತಿಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಇಂದಿಗೂ ಹಿಂದುಳಿದ ವರ್ಗದವರು ಸಾಮಾಜಿಕವಾಗಿ ಏಳಿಗೆ ಸಾಧಿಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಹಾವು-ಮುಂಗುಸಿಯಂತಿದ್ದ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದ್ದು, ಅದರಿಂದ ಬಿಜೆಪಿ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಪರ್ವತಯ್ಯ, ವೇಣುಗೋಪಾಲ್, ದಯಾನಂದ ಸುದ್ದಿಗೋಷ್ಠಿಯಲ್ಲಿದ್ದರು.