ಬೇಲೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ, ಬೆಲೆ ಏರಿಕೆ, ಕಾರ್ಮಿಕ ವಿರೋಧಿ ನೀತಿ ಹಾಗೂ ಸಿಎಎ, ಎನ್‌ಆರ್‌ಸಿ ಜಾರಿ ಖಂಡಿಸಿ ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರ ಬೆಂಬಲಿಸಿ ಸಿಐಟಿಯು ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಬೇಲೂರಿನ ಹರ್ಡಿಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದಸಂಸ ಜಿಲ್ಲಾ ಸಂಚಾಲಕ ಅಬ್ದುಲ್‌ಸಮದ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದುಬಾರಿ ಬಟ್ಟೆ, ಕನ್ನಡಕ ಧರಿಸಿ ಪ್ರಪಂಚ ಸುತ್ತುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ದೇಶದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ದುಡಿಯುವ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುತಿಲ್ಲ. ರೈತರು ಆತ್ಮಹತ್ಯೆಗೆ ಶರಣಾದರೂ ಅವರ ಬಗ್ಗೆ ಕಾಳಜಿ ಇಲ್ಲ. ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ಗಮನ ನೀಡುತ್ತಿಲ್ಲ. ದೇಶದ ಆರ್ಥಿಕ ಸ್ಥಿತಿ ಕುಸಿದಿದ್ದರೂ ಚಿಂತಿಸದೆ, ಸಿಎಎ, ಎನ್‌ಆರ್‌ಸಿಯಂಥ ಕಾನೂನುಗಳನ್ನು ತಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಅಧ್ಯಕ್ಷ ಭೋಗಮಲ್ಲೇಶ್ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಇಂದಿರಮ್ಮ, ಸಿಐಟಿಯು ತಾಲೂಕು ಅಧ್ಯಕ್ಷೆ ಮಂಜುಳಾ, ನಾಗರಿಕ ಹಕ್ಕುಗಳ ಸಮಿತಿ ಅಧ್ಯಕ್ಷ ಶಕೀಲ್‌ಅಹಮದ್, ದಲಿತ ಮುಖಂಡ ಯೋಗೇಶ್, ಜನಸಂಗ್ರಾಮ ಪರಿಷತ್ ಅಧ್ಯಕ್ಷ ಅಹಮ್ಮದ್, ಮುಖಂಡರಾದ ರಂಗನಾಥ್, ಜಾಕೀರ್‌ಪಾಷಾ, ರವಿ, ನಿಂಗರಾಜು ಇತರರು ಇದ್ದರು.