More

    ಬೇಲೂರಲ್ಲಿ ಅಕ್ಷರ ಜಾತ್ರೆ ಸಂಭ್ರಮ

    ಬೇಲೂರು: ಶಿಲ್ಪಕಲೆಗಳ ತವರೂರಿನಲ್ಲಿ ಅಕ್ಷರ ಜಾತ್ರೆಯ ಸಂಭ್ರಮ ಪ್ರತಿಯೊಬ್ಬ ಕನ್ನಡಿಗರಲ್ಲೂ ಮನೆ ಮಾಡಿತ್ತು. ಕನ್ನಡದ ನುಡಿ ಜಾತ್ರೆಯಲ್ಲಿ ಸಾಹಿತ್ಯ ಪ್ರೇಮಿಗಳು, ಕನ್ನಡಾಭಿಮಾನಿಗಳು ಮಿಂದೆದ್ದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸಿದ್ದ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ಗಮನ ಸೆಳೆಯಿತು.
    ಪುರಸಭೆ ಮುಂಭಾಗದಿಂದ ಅಶ್ವಾರೋಹಣ ರಥದಲ್ಲಿ ಸಮ್ಮೇಳನಾಧ್ಯಕ್ಷ ಬೇಲೂರು ರಘುನಂದನ್ ದಂಪತಿ ಹಾಗೂ ನಟ ಮಂಡ್ಯ ರಮೇಶ್ ಅವರನ್ನು ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ಡೊಳ್ಳುಕುಣಿತ, ವೀರಗಾಸೆ, ನಾದಸ್ವರ, ಸೋಮನ ಕುಣಿತ, ಸ್ಕೌಟ್ಸ್ ಆ್ಯಂಡ್ ಗೈಡ್ ಹಾಗೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕನ್ನಡದ ಧ್ವಜಗಳನ್ನು ಹಿಡಿದಿದ್ದ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಆಕರ್ಷಿಸಿದರು.
    ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ ಸೇರಿದಂತೆ ಕನ್ನಡಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು. ಶಾಸಕ ಲಿಂಗೇಶ್ ಹಾಗೂ ಪ್ರಮುಖರ ನೃತ್ಯ ಮೆರವಣಿಗೆಗೆ ಮೆರುಗು ನೀಡಿತು. ಚನ್ನಕೇಶವ ದೇಗುಲ ಸಮೀಪದ ಬಯಲು ರಂಗಮಂದಿರದ ಆವರಣದ ಸಭಾಂಗಣದ ಸಮೀಪ ಮೆರವಣಿಗೆ ಅಂತ್ಯವಾಯಿತು.
    ಕಸಾಪ ಅಧ್ಯಕ್ಷ ಬಿ.ಎಂ.ರವೀಶ್, ಗೌರವಾಧ್ಯಕ್ಷ ಎಚ್.ಎಂ.ದಯಾನಂದ್, ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ, ತೊ.ಚ.ಅನಂತಸುಬ್ಬರಾಯ, ವಿವಿಧ ಸಂಘಟನೆಗಳ ಪ್ರಮುಖರಾದ ಚಂದ್ರಶೇಖರ್, ಎಂ.ಕೆ.ಆರ್.ಸೋಮೇಶ್, ತೀರ್ಥಂಕರ್ ಮತ್ತಿತರರು ಹಾಜರಿದ್ದರು.
    ಮೆರವಣಿಗೆಗೂ ಮುನ್ನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಮುಂಭಾಗದಲ್ಲಿ ಶನಿವಾರ ಬೆಳಗ್ಗೆ 8.30ರಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ತಹಸೀಲ್ದಾರ್ ಎನ್.ವಿ.ನಟೇಶ್, ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಸಾಪ ತಾಲೂಕು ಗೌರವ ಅಧ್ಯಕ್ಷ ಎಚ್.ಎಂ.ದಯಾನಂದ್, ನಾಡ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ಬಿ.ಎಂ.ರವೀಶ್ ನೆರವೇರಿಸಿದರು. ರಾಷ್ಟ್ರಗೀತೆ, ನಾಡಗೀತೆಯನ್ನು ಬೇಲೂರು ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಹಾಡಿದರು. ಡಾ.ನರಸೇಗೌಡ, ಕಸಾಪ ಗೌರವ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ವಿವಿಧ ಸಮಿತಿಯ ಬಿ.ಸಿ.ಆನಂದ್, ಬಿ.ಎಂ.ನಾಗರಾಜ್, ಆರ್.ಎಸ್.ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts