ಹುಟ್ಟಿನಿಂದಲೇ ಆರಂಭವಾಗಲಿದೆ ಗಣಿತ

blank

ಶ್ರವಣಬೆಳಗೊಳ: ಸಕಾರಾತ್ಮಕ ಗುಣಗಳನ್ನು ಸಂಕಲನ ಮಾಡಿ, ನಕಾರಾತ್ಮಕತೆಯನ್ನು ದೇಹದಿಂದ ಹೊರ ಹಾಕುವ ವ್ಯವಕಲನ ಮಾಡಿ, ದಿವ್ಯತೆಯ ಗುಣಗಳನ್ನು ತಮ್ಮ ಜ್ಞಾನಾರ್ಜನೆಯಿಂದ ಗುಣಿಸಿ, ಬೇಡವಾದುದನ್ನು ಭಾಗಿಸಿ ಒಳಿತನ್ನು ಎಲ್ಲರಿಗೂ ಹಂಚುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ವೃದ್ಧಿಗೊಳಿಸಬೇಕು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಆಯೋಜಿಸಿದ್ದ ಪ್ರಥಮ ಅಖಿಲ ಕರ್ನಾಟಕ ಗಣಿತ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿ, ಸೊನ್ನೆಯನ್ನು ಯಾವುದೇ ಚಿಕ್ಕ ಅಥವಾ ದೊಡ್ಡ ಸಂಖ್ಯೆಯಿಂದ ಸಂಕಲನ ಅಥವಾ ವ್ಯವಕಲನ ಕ್ರಿಯೆ ಮಾಡಿದರೂ ಸೊನ್ನೆಗೆ ಸೊನ್ನೆಯನ್ನು ಸೇರಿಸಿದರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅದೇ ರೀತಿ ಮನುಷ್ಯ ಸುಖ ದುಃಖಗಳಲ್ಲಿ, ಕಷ್ಟ ನಷ್ಟಗಳಲ್ಲಿ ವಿಚಲಿತನಾಗದೆ ಸಮಚಿತ್ತನಾಗಿ ಸ್ಥಿರವಾಗಿರುವುದನ್ನು ಕಲಿಯಬೇಕು ಮತ್ತು ಪೂರ್ಣತೆಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿಯ ಧನಾತ್ಮಕ ಅಥವಾ ಋಣಾತ್ಮಕ ವ್ಯಕ್ತಿತ್ವದ ರಚನೆಗೆ ಅರಿಷಡ್ವರ್ಗಗಳು ಕಾರಣವಾಗಿರುತ್ತವೆ. ಇದು ನಿಸರ್ಗ ಸಹಜ ಪ್ರವೃತ್ತಿಯಾಗಿದ್ದು, ಅರಿಷಡ್ವರ್ಗಗಳನ್ನು ಮನಸ್ಸು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಧನಾತ್ಮಕ ವ್ಯಕ್ತಿತ್ವಕ್ಕೆ ನಾಂದಿ ಆಗುವುದು. ಒಂದು ಸಂಖ್ಯೆಯ ಹಿಂದೆ ಅಥವಾ ಮುಂದೆ ಎಷ್ಟೇ ಸೊನ್ನೆ ಹೆಚ್ಚಾದರೂ ಉತ್ತಮ ವ್ಯಕ್ತಿಯು ತನ್ನ ವ್ಯಕ್ತಿತ್ವದಲ್ಲಿ ವ್ಯತ್ಯಾಸ ಮಾಡಿಕೊಳ್ಳುವುದಿಲ್ಲ. ಇದು ಮಹಾವೀರಚಾರ್ಯರ ಪ್ರಕಾರ ಸೊನ್ನೆಯ ಕಲ್ಪನೆ. ಇದು ಜೈನ ಧರ್ಮದ ಸಾರವಾಗಿದೆ ಎಂದರು.
ಮನುಷ್ಯನಿಗೆ ಹುಟ್ಟಿನಿಂದಲೇ ಗಣಿತ ಆರಂಭವಾಗುತ್ತದೆ. ಯಾವ ಧರ್ಮವೇ ಆಗಲಿ, ಯಾವ ಶಾಸ್ತ್ರಗಳೇ ಆಗಲಿ ಅಲ್ಲಿ ಗಣಿತ ಇರುತ್ತದೆ ಎಂದು ಹೇಳಿದರು.
ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕತ್ತರಿಘಟ್ಟ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಎಸ್.ಪ್ರಕಾಶ್, ಡಿ.ಟಿ.ಪುಟ್ಟರಾಜು ಮಾತನಾಡಿದರು. ಸಮ್ಮೇಳನದ ಅಧ್ಯಕ್ಷೆ ವಿದುಷಿ ಡಾ. ಪದ್ಮಾವತಮ್ಮ ಅವರಿಗೆ ಗಣಿತದ ಆಕೃತಿಗಳ ಹಾರ ಹಾಕಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಾಮಣ್ಣ, ಸದಸ್ಯರಾದ ಮಹಾಲಕ್ಷ್ಮೀ ಶಿವರಾಜ್, ಪ್ರಮೀಳಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ರಮೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಲುವನಾರಾಯಣಸ್ವಾಮಿ, ನಿವೃತ್ತ ನಿರ್ದೇಶಕ ಎಸ್.ಜಯಕುಮಾರ್, ನಿವೃತ್ತ ಜಂಟಿ ನಿರ್ದೇಶಕ ರಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ್, ಎನ್.ಜೆ.ಸೋಮನಾಥ್, ಶಿವಾನಂದ ಮತ್ತು ಹಾಸನ ಜಿಲ್ಲಾ ಗಣಿತ ಸಮಾವೇಶ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಇದ್ದರು.

blank

ವಿಶ್ವಕ್ಕೆ ಸೊನ್ನೆ ಪರಿಚಯಿಸಿದ್ದು ಭಾರತ
ಶ್ರವಣಬೆಳಗೊಳ: ಪ್ರಾಚೀನ ಕಾಲದಿಂದಲೂ ಗಣಿತ ಜ್ಯೋತಿಷಕಾರರ ಹಿಡಿತದಲ್ಲಿತ್ತು ಎಂದು ಮೈಸೂರು ಮಾನಸ ಗಂಗೋತ್ರಿಯ ನಿವೃತ್ತ ಪ್ರಾಧ್ಯಾಪಕಿ ವಿದುಷಿ ಡಾ. ಪದ್ಮಾವತಮ್ಮ ಹೇಳಿದರು.
ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಿತವು ವಿಜ್ಞಾನದ ಪ್ರಮುಖ ಅಂಗವಾಗಿದ್ದು, ಇದು ವಿಜ್ಞಾನಗಳ ರಾಣಿಯಾಗಿದೆ. ಭಾರತವು ಸೊನ್ನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು, ಆರ್ಯಭಟ, ಭಾಸ್ಕರ, ಬ್ರಹ್ಮಗುಪ್ತ, ಶ್ರೀನಿವಾಸ ರಾಮಾನುಜಂ ಮೊದಲಾದ ಗಣಿತಜ್ಞರು ವಿಶ್ವ ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಪ್ರಥಮವಾಗಿ ರಾಜಾದಿತ್ಯ ವ್ಯವಹಾರ ಗಣಿತ ಕೃತಿಯನ್ನು ರಚಿಸಿದ್ದು, ವೇದ ಗಣಿತ, ಕ್ಷೇತ್ರಗಣಿತ, ವ್ಯವಹಾರ ಗಣಿತ, ಜೈನ ಗಣಿತ, ಸೂತ್ರೋದಾಹರಣ ಮೊದಲಾದ ಕೃತಿಗಳಲ್ಲಿ ಗಣಿತ ವಿಷಯವಿದೆ ಎಂದರು.

 

Share This Article
blank

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

ಸಕ್ಕರೆ ಪುಡಿಗೆ ಇದೊಂದನ್ನು ಮಿಕ್ಸ್​ ಮಾಡಿ ಇಟ್ಟರೆ ಸಾಕು ಇರುವೆಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ! Ants

Ants : ಮನೆಯಲ್ಲಿ ಇರುವೆಗಳ ಕಾಟದ ಕಿರಿಕಿರಿ ಅನುಭವಿಸದವರೇ ಇಲ್ಲ. ಮನೆ ಎಂದ ಮೇಲೆ ಇರುವೆಗಳು…

blank