ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಆಗ್ರಹ

ಅರೆಕೆರೆ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಕೆ

ಹಾಸನ: ಅರಸೀಕೆರೆ ತಾಲೂಕು ಅರೆಕೆರೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಜಾವಗಲ್ ಹೋಬಳಿ ಅರಕೆರೆ ಗ್ರಾಮದ ಸ.ನಂ.180 ಮತ್ತು ಬೈರಾಪುರ ಗ್ರಾಮದ ಸ.ನಂ.21 ರಲ್ಲಿ ಅಕ್ರಮವಾಗಿ ಕಲು ್ಲಗಣಿಗಾರಿಕೆ ಮತು ಕ್ರಷರ್ ನಡೆಸಲಾಗುತ್ತಿದೆ. ಗಣಿಗಾರಿಕೆಗೆ ನಿರಾಕ್ಷೇಪಣ ಪತ್ರ ನೀಡದಂತೆ ಅರಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಅಭಿವೃದ್ಧಿ ಅಧಿಕಾರಿಗೆ ಅರಕೆರೆ, ಕಂಚೇನಹಳ್ಳಿ, ಹೊಸಹಟ್ಟಿ, ಕೋರನಹಳ್ಳಿಕೊಪ್ಪಲು, ಬೆಳುವಳ್ಳಿ, ಕೋಳಗುಂದ ಗ್ರಾಮಸ್ಥರು ಮನವಿ ಸಲ್ಲಿಸಿದ್ದೆವು. ಆಗ ಎನ್‌ಒಸಿ ನೀಡುವುದಿಲ್ಲವೆಂಬ ಭರವಸೆ ಸಿಕ್ಕಿತ್ತು. ಅಂತೆಯೆ, ಕೆಲವು ದಿನ ಕ್ರಷರ್ ಸ್ಥಗಿತಗೊಂಡಿತ್ತು. ಆದರೆ ಈಗ ಪುನಃ ಗಣಿಗಾರಿಕೆ ಆರಂಭಿಸಲಾಗಿದೆ. ರಾತ್ರಿ ವೇಳೆ ಸ್ಫೋಟ ಮಾಡಿ ಜಲ್ಲಿ, ಎಂ-ಸ್ಯಾಂಡ್ ಸಿದ್ಧಪಡಿಸಿ ಸಾಗಣೆ ಮಾಡಲಾಗುತ್ತಿದೆ ಎಂದು ದೂರಿದರು.
ಸತತ ಸ್ಫೋಟದಿಂದ ಸುತ್ತಮುತ್ತಲ ಗ್ರಾಮಗಳ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಸಣ್ಣ ಭೂಕಂಪನದ ಅನುಭವವಾಗುತ್ತಿದೆ. ಗಣಿಗಾರಿಕೆಯಿಂದಾಗಿ ಅಂತರ್ಜಲ ಕುಸಿದಿದ್ದು, ಬೋರ್‌ವೆಲ್‌ಗಳು ಬತ್ತುತ್ತಿವೆ. ಜನ-ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುತ್ತಿಲ್ಲ. ಗೋಮಾಳದಲ್ಲಿಯೇ ಗಣಿಗಾರಿಕೆ ನಡೆಯುತ್ತಿದೆ. ಅಧಿಕಾರಿಗಳು ಅಕ್ರಮ ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಕ್ಷಣ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.
ಅರೆಕೆರೆ ಗ್ರಾಮದ ಮೃತ್ಯುಂಜಯ, ಗಂಗಾಧರ್, ಶಿವಣ್ಣ, ರಾಜ್ ಬೇಗ್, ತೇಜಮೂರ್ತಿ, ಶಂಕರಪ್ಪ ಇತರರು ಇದ್ದರು.