ತಂತ್ರಜ್ಞಾನದಲ್ಲಿ ನಾವೀನ್ಯತೆ ಅವಶ್ಯಕ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಿಇಒ ಡಾ.ಎ.ಎಂ.ರಮೇಶ್ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಹಾಸನ
ಸುಸ್ಥಿರ ಪರಿಸರಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ಅವಶ್ಯಕ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎ.ಎಂ.ರಮೇಶ್ ಹೇಳಿದರು.
ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ. 1975ರಲ್ಲಿ ಇಸ್ರೋದಲ್ಲಿ ತಯಾರಾದ ಆರ್ಯಭಟ ಉಪಗ್ರಹ ಉಡಾವಣೆ ಮಾಡಿದ ಅಂದಿನ ಮುಖ್ಯಸ್ಥರಾಗಿದ್ದ ಸಿ.ಎನ್.ಆರ್. ರಾವ್ ಅವರ ತಂಡದ ಸಾಧನೆಯಿಂದ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಜ್ಜೆ ಗುರುತು ಮೇಲಕ್ಕೇರಿದೆ ಎಂದರು.
ಸಮಾಜದ ವಿವಿಧ ಸ್ತರದಲ್ಲಿ ಮಹಿಳೆಯರ ಸಾಧನೆ ಅಮೋಘವಾಗಿದೆ. ಅನುರಾಧ ಎಂಬ ಮಹಿಳೆ ಜಿ ಸ್ಯಾಟ್ ಉಪಗ್ರಹದ ಮುಂದಾಳತ್ವ ವಹಿಸಿದ್ದರು. ಅಗ್ನಿ-4 ಮಿಸೈಲ್ ತಯಾರಿಕೆಯಲ್ಲಿ ಜಸ್ಸಿ ಥಾಮಸ್ ಎಂಬ ಸ್ತ್ರೀ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರೂ ಯಾವುದರಲ್ಲಿಯು ಕಡಿಮೆ ಇಲ್ಲ ಎಂಬುದು ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ಬಿಎಸ್ಸಿ ಮತ್ತು ಎಂಸ್ಸಿ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಪ್ರಾಥಮಿಕ ವಿಜ್ಞಾನಕ್ಕೆ ಬಹಳ ಅನುಕೂಲವಾಗಲಿದೆ. ಜತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ವಿದ್ಯಾರ್ಥಿಗಳು ವಿಷಯಾಧಾರಿತವಾಗಿ ಸಂಶೋಧನೆಯಲ್ಲಿ ತೊಡಗಿಕೊಂಡಲ್ಲಿ ಉಜ್ವಲ ಭವಿಷ್ಯ ರೂಪುಗೊಳ್ಳಲು ಸಹಕಾರಿಯಾಗಲಿದೆ. ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಕುರಿತಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಹೆಚ್ಚಿನ ಸಂಶೋಧನೆಯಲ್ಲಿ ಯುವ ಪೀಳಿಗೆ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಾಗಲಿದೆ ಎಂದರು.
ಹೈದರಾಬಾದ್‌ನ ಉಸ್ಮಾನಿಯಾ, ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ವಿಷಯ ಮಂಡನೆ ಮಾಡಿದರು.
ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಕೆ.ಎಂ. ಶಿವಣ್ಣ, ಪ್ರಾಂಶುಪಾಲರಾದ ಡಾ.ಎಂ.ಬಿ.ಆಶಾಲತಾ, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ. ಡಾ.ಜನಾರ್ಧನ ರೆಡ್ಡಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್.ರವಿಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಪಿ.ಲಿಂಗರಾಜು, ಡಾ.ಎಸ್.ರವಿಕಿರಣ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *