26ರಂದು 1400 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ

ಶಾಸಕ ಎ.ಟಿ.ರಾಮಸ್ವಾಮಿ ಮಾಹಿತಿ* ಜೆಡಿಎಸ್ ಕಾರ್ಯಕರ್ತರ ಸಭೆ

ಅರಕಲಗೂಡು: ಕ್ಷೇತ್ರದಲ್ಲಿ ಫೆ. 26ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 1400 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ಪಟ್ಟಣದ ಶಿಕ್ಷಕರ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಾಗಡಿ- ಸೋಮವಾರಪೇಟೆ ಮಾರ್ಗದ ರಸ್ತೆ ಅಭಿವೃದ್ಧಿಗೆ 5.5 ಸಾವಿರ ಕೋಟಿ ರೂ. ಮಂಜೂರಾಗಿದೆ. ತಾಲೂಕಿನಲ್ಲಿ ಹಾದು ಹೋಗಲಿರುವ ಈ ಮಾರ್ಗದ ರಸ್ತೆಯನ್ನು ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಫೆ. 26ರಂದು ಸಿಎಂ ರಾಮನಾಥಪುರದಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಅರಕಲಗೂಡಿಗೆ ಆಗಮಿಸಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 16 ಕೋಟಿ ರೂ ಮಂಜೂರಾಗಿದೆ. 380 ಕೋಟಿ ರೂ. ವೆಚ್ಚದ ಗೊರೂರು ಹೇಮಾವತಿ ಬಲ ಮೇಲ್ದಂಡೆ ನಾಲೆ ನವೀಕರಣ, 2 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಲ್ಲಿ ಪಾಲಿ ಕ್ಲಿನಿಕ್, ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ 13.25 ಕೋಟಿ ರೂ. ಗಳಲ್ಲಿ ಶಾಪಿಂಗ್ ಮಾಲ್ ನಿರ್ಮಿಸಲಾಗುವುದು. ಸಾಲು ಮರದ ತಿಮ್ಮಕ್ಕ ಉದ್ಯಾನ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಮುರಾರ್ಜಿ ವಸತಿ ಶಾಲೆ, ಗುಡ್ಡೇನಹಳ್ಳಿ ಬಳಿ 20 ಕೋಟಿ ರೂ.ನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಿಸಲಾಗುವುದು. ತಾಲೂಕಿನ ಕಣಿಯಾರು ಬಳಿ 80 ಕೋಟಿ ರೂ.ನಲ್ಲಿ 220 ಕೆ.ವಿ ವಿದ್ಯುತ್ ಪ್ರಸರಣಾ ಘಟಕ, ಬೆಳವಾಣಿ, ಸಂತೆಮರೂರು, ಲಿಂಗದಹಳ್ಳಿ ಬಳಿ ವಿದ್ಯುತ್ ಪ್ರಸರಣ ಉಪ ವಿಭಾಗ ಸ್ಥಾಪನೆಯಾಗಲಿದೆ ಎಂದರು.
ತಾಲೂಕಿನ ಮೋಕಲಿ ಬಳಿ ಪಶು ಆಹಾರ ಘಟಕ ಸ್ಥಾಪಿಸುವುದಾಗಿ ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಹಣ ಮಂಜೂರಾಗಿರಲಿಲ್ಲ. ಇದೀಗ ಸಿಎಂ ಕುಮಾರಸ್ವಾಮಿ 70 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಪಶು ಆಹಾರ ಘಟಕ ಸ್ಥಾಪನೆಯಾದರೆ ರೈತರಿಂದ ಮೆಕ್ಕೆಜೋಳ ಖರೀದಿಗೆ ಅನುಕೂಲವಾಗುವುದಲ್ಲದೇ ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಸಿಗಲಿದೆ. ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ 190 ಕೋಟಿ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದೆ. ಸದ್ಯಕ್ಕೆ ಸರ್ಕಾರ 120 ಕೋಟಿ ರೂ. ಬಿಡುಗಡೆ ಮಾಡಿದೆ. ಹಳ್ಳಿಮೈಸೂರು ಹೋಬಳಿ ಸೇರಿದಂತೆ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡಿದೆ. ಈ ಎಲ್ಲ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ, ಮುಖಂಡರಾದ ಜನಾರ್ಧನ ಗುಪ್ತ, ಪುಟ್ಟಸ್ವಾಮಪ್ಪ, ಮುದ್ದನಹಳ್ಳಿ ರಮೇಶ್, ಮುತ್ತಿಗೆ ರಾಜೇಗೌಡ, ಜಿಪಂ ಮಾಜಿ ಸದಸ್ಯ ಪಾಪಣ್ಣಿ ಮಾತನಾಡಿದರು. ಹಾರಂಗಿ ಮಹಾ ಮಂಡಲ ಅಧ್ಯಕ್ಷ ಚೌಡೇಗೌಡ, ಮುಖಂಡರಾದ ವೆಂಕಟೇಶ್, ನರಸೇಗೌಡ, ಎಂ.ಎಸ್.ಯೋಗೇಶ್, ಸಾದಿಕ್ ಸಾಬ್, ಜಯಣ್ಣ, ಹೊನ್ನರಸೇಗೌಡ, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.