ರಾಕ್ಷಸನ ಸಂಹರಿಸಿದ ಹನುಮ

ಹಾಸನ: ಲಂಕಾವನವನ್ನು ಭಸ್ಮ ಮಾಡಿ ವಾಪಸಾಗುತ್ತಿದ್ದಾಗ ಮಾಯಾಸುರ ಎಂಬ ರಾಕ್ಷಸನ ಸಂಹರಿಸಿದ ಶ್ರೀಆಂಜನೇಯ ನಿಂತಿರುವ ಭಂಗಿಯ ವಿಶೇಷ ಮೂರ್ತಿ ಹಾಸನ ನಗರದಲ್ಲಿದೆ.
ದೇವಿಗೆರೆಯಲ್ಲಿರುವ ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯ ಅನೇಕ ಐತಿಹ್ಯಗಳನ್ನು ಒಳಗೊಂಡಿದೆ. ಈ ತರಹದ ವಿಗ್ರಹಗಳು ದೇಶದ ಏಳು ಕಡೆ ಮಾತ್ರವಿದ್ದು, ಹಾಸನದಲ್ಲಿಯೂ ಪ್ರತಿಷ್ಠಾಪನೆಯಾಗಿರುವುದು ವಿಶೇಷ.
ನಗರದ ನೀರುಬಾಗಿಲು ಆಂಜನೇಯಸ್ವಾಮಿ ದೇವಾಲಯ ಸ್ಥಾಪನೆ, ರಾಜರ ಆಡಳಿತಾವಧಿ ಕುರಿತು ಸ್ಪಷ್ಟ ಮಾಹಿತಿ ದೊರೆತಿಲ್ಲವಾದರೂ ಸಂಶೋಧಕರ ಪ್ರಕಾರ ಕ್ರಿ.ಶ. 450ರ ಸಮಯದಲ್ಲಿ ಆಂಜನೇಯ ವಿಗ್ರಹ ಇಲ್ಲಿ ಪ್ರತಿಷ್ಠಾಪನೆ ಆಗಿದೆ ಎನ್ನಲಾಗಿದೆ. ಬಾದಾಮಿ ಚಾಲುಕ್ಯರ ಆಳ್ವಿಕೆ ಅವಧಿಯಲ್ಲಿ ಈ ದೇಗುಲ ನಿರ್ಮಾಣವಾಗಿದೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ.
ಮಾಯಾಸುರನ ಸಂಹಾರ: ಅಪಹರಣಕ್ಕೀಡಾಗಿದ್ದರಾಮನ ಪತ್ನಿ ಸೀತಾಮಾತೆಯನ್ನು ವಾಪಸು ತರಲು ಆಂಜನೇಯ ಲಂಕೆಯನ್ನೇ ಸಂಪೂರ್ಣ ಭಸ್ಮ ಮಾಡಿರುತ್ತಾನೆ. ಈ ವೇಳೆ ಮಾಯಾಸುರ ಎಂಬ ರಾಕ್ಷಸ ತನ್ನ ಮಾಯಾ ಶಕ್ತಿಯಿಂದ ಲಂಕಾವನ್ನು ಪುನಃ ನಿರ್ಮಾಣ ಮಾಡುತ್ತಿರುತ್ತಾನೆ. ಈ ವಿಚಾರ ತಿಳಿದ ಆಂಜನೇಯ ಉಗ್ರರೂಪ ತಾಳಿ ಆತನನ್ನು ಸಂಹರಿಸಿ ಸೀತೆಯನ್ನು ಕರೆದುಕೊಂಡು ಬರುತ್ತಾನೆ.
ಮಾಯಾಸುರನ ವಧೆ ಮಾಡುವ ಸಂದರ್ಭದಲ್ಲಿ ಆಂಜನೇಯ ತಾಳಿದ ಸ್ವರೂಪವನ್ನು ಪ್ರಸ್ತುತ ಏಕಶಿಲಾ ವಿಗ್ರಹದಲ್ಲಿ ಕಾಣಬಹುದು. ಪೂರ್ವಾಭಿಮುಖವಾಗಿ ನಿಂತಿರುವ ಆಂಜನೇಯ ಒಂದು ಕೈಯಲ್ಲಿ ಮಾವಿನ ಗೊಂಚಲು ಹಾಗೂ ಇನ್ನೊಂದು ಕೈಯಲ್ಲಿ ಲೋಕಕ್ಕೆ ಅಭಯ ಹಸ್ತ ನೀಡಿದ್ದಾನೆ. ಮಾಯಾಸುರ ಎಂಬ ರಾಕ್ಷಸನನ್ನು ವಧೆ ಮಾಡಿದ್ದು ಇನ್ನು ಮುಂದೆ ಯಾರೂ ಹೆದರಬೇಕಿಲ್ಲ ಎಂಬ ಸೂಚನೆಯನ್ನು ವಿಗ್ರಹ ನೀಡುವಂತಿದೆ. ಆಂಜನೇಯನ ಬಾಲಕ್ಕೆ ಗಂಟೆ ಕಟ್ಟಲಾಗಿದೆ.
ನೀರುಬಾಗಿಲು ಹೆಸರಿಗೆ ಕಾರಣ: ಪ್ರಾಚೀನ ಕಾಲದಲ್ಲಿ ಈ ಸನ್ನಿಧಿಯು ರಸ್ತೆಯ ಮಟ್ಟಕ್ಕಿಂತ ತುಂಬಾ ಆಳದಲ್ಲಿದ್ದು ಶ್ರೀ ಆಂಜನೇಯ ನಿಂತಿರುವ ‘ಪಾಣಿ ಪೀಠ’ದಷ್ಟು ಎತ್ತರದವರೆಗೂ ನಿತ್ಯ ನೀರು ಉಕ್ಕುತ್ತಿತ್ತು. ಅರ್ಚಕರು ಅದೇ ನೀರಿನಲ್ಲಿ ನಿಂತು ಪೂಜೆ ಮಾಡುತ್ತಿದ್ದರು. ಆದ್ದರಿಂದಲೇ ಈ ಸ್ಥಳಕ್ಕೆ ನೀರುಬಾಗಿಲು ಎಂಬ ಹೆಸರು ಬಂದಿದೆ. ಊರ ಹೊರಗಿದ್ದ ಆಂಜನೇಯ ಸ್ವಾಮಿ ದೇಗುಲ ನಗರ ವಿಸ್ತಾರವಾದಂತೆ ನಗರ ಮಧ್ಯದಲ್ಲಿ ಇದ್ದಂತಾಗಿದೆ.
ಆಂಜನೇಯನ ಅಪ್ಪಣೆ ಬೇಕಿತ್ತು: ಹಾಸನದ ಒಳಗೆ ಯಾರೇ ಪ್ರವೇಶಿಸಬೇಕಿದ್ದರೂ ಮತ್ತು ಇಲ್ಲಿ ವಾಸ್ತವ್ಯ ಹೂಡಲು ಆಂಜನೇಯ ಸ್ವಾಮಿಯ ಅಪ್ಪಣೆ ಪಡೆಯುವುದು ಕಡ್ಡಾಯವಾಗಿತ್ತು. ಬೇರೆ ಪ್ರದೇಶದಿಂದ ಬರುವ ಜನರನ್ನು ದೇವಸ್ಥಾನ ಆವರಣದಲ್ಲಿಯೇ ನಿಲ್ಲಿಸಿ ಆಂಜನೇಯ ಅಪ್ಪಣೆ ಕೊಟ್ಟ ನಂತರವೇ ಅವರಿಗೆ ಪ್ರವೇಶ ದೊರೆಯುತ್ತಿತ್ತು.
ಸಾವಿರಾರು ಜನರ ಭೇಟಿ: ನಗರದ ನೀರುಬಾಗಿಲು ಆಂಜನೇಯಸ್ವಾಮಿ ದೇಗುಲಕ್ಕೆ ನಿತ್ಯ ನೂರಾರು ಜನರು ಭೇಟಿ ನೀಡುತ್ತಿದ್ದು, ಪ್ರತಿ ಶನಿವಾರ ಸಾವಿರಕ್ಕೂ ಅಧಿಕ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾಮನವಮಿ ಹಾಗೂ ಹನುಮ ಜಯಂತಿಯನ್ನು ವೈಭವದಿಂದ ಆಚರಿಸಲಾಗುತ್ತದೆ. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತದೆ.