ಜೀತದಾಳಾಗಿ ಕೆಲಸ ಮಾಡಲು ಸಿದ್ಧ

ಹಾಸನ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ನಿಮ್ಮ ಮನೆಯ ಜೀತದಾಳಾಗಿ ಕೆಲಸ ಮಾಡಲು ಸಿದ್ಧನಿದ್ದು, ಆತನಿಗೆ ಮತ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕೋರಿದರು.

ತಾಲೂಕಿನ ಶಾಂತಿಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.

2009ರ ಚುನಾವಣೆಯಲ್ಲಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ 85 ಸಾವಿರ ಲೀಡ್ ದೊರಕಿಸಿಕೊಟ್ಟಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಅಂತರ ದಾಖಲಾಗಬೇಕು. ಶಾಂತಿಗ್ರಾಮ ಹೋಬಳಿಯಲ್ಲಿ 25 ಸಾವಿರ ಮತಗಳ ಅಂತರ ಸಾಧಿಸಬೇಕು. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಮುಂದಿನ ಹದಿನೈದು ದಿನ ವಿಶ್ರಮಿಸದೆ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರದಲ್ಲೇ ಪತನವಾಗುತ್ತದೆ ಎಂದು ಕೆಲವರು ಭವಿಷ್ಯ ನುಡಿಯುತ್ತಿದ್ದಾರೆ. ಆದರೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಆಡಳಿತ ಪೂರೈಸಲಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅವರು ಕಟಿಬದ್ಧರಾಗಿದ್ದಾರೆ ಎಂದರು.

ಎ.ಮಂಜು ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕ, ಸಚಿವರಾಗಿದ್ದ ವ್ಯಕ್ತಿ ಇಂದು ಸ್ವಹಿತಕ್ಕಾಗಿ ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವಕಾಶವಾದಿ ರಾಜಕಾರಣಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಹೆಸರು ಹೇಳದೆ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ದೇಶಕ್ಕೆ ಯಾವ ಲಾಭವೂ ಆಗಲಿಲ್ಲ. ಸಣ್ಣ ಹಿಡುವಳಿದಾರರಿಗೆ ವಾರ್ಷಿಕ 6 ಸಾವಿರ ರೂ. ನೀಡುತ್ತೇವೆ ಎಂದು ಘೋಷಿಸಿ ಹಣ ಬಿಡುಗಡೆ ಮಾಡಲಿಲ್ಲ. ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ನಿರ್ಮಿಸಿದ್ದಾರೆ. ನರೇಗಾ ಅಡಿ 2,500 ಕೋಟಿ ರೂ. ನೀಡಬೇಕಿದ್ದರೂ ಕೇವಲ 900 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರತಿ ಹಂತದಲ್ಲೂ ಕರ್ನಾಟಕವನ್ನು ನಿರ್ಲಕ್ಷಿಸಿರುವ ಬಿಜೆಪಿಗೆ ಯಾವ ಕಾರಣಕ್ಕೂ ಮತ ಹಾಕಬಾರದು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಶಾಂತಿಗ್ರಾಮಕ್ಕೆ ನೀರು: ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು 330 ಕೋಟಿ ರೂ., ಹೇಮಾವತಿ ಜಲಾಶಯದಿಂದ ಪ್ರತಿ ಮನೆಗೆ ಕುಡಿಯುವ ನೀರು ಕಲ್ಪಿಸಲು 258 ಕೋಟಿ ರೂ. ಕಾಮಗಾರಿಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಶಾಂತಿಗ್ರಾಮದಲ್ಲಿ ಹೆಣ್ಣು ಮಕ್ಕಳಿಗಾಗಿ ಕಸ್ತೂರಿ ಬಾ ಶಾಲೆ, ಸೋಮನಹಳ್ಳಿಯಲ್ಲಿ ಮುರಾರ್ಜಿ ಶಾಲೆ, ಗೋಪನಹಳ್ಳಿಯಲ್ಲಿ ಸರ್ಕಾರಿ ಆಸ್ಪತ್ರೆ ತೆರೆಯಲಾಗುತ್ತಿದೆ ಎಂದರು.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ರಾಜೇಗೌಡ, ಜಿಪಂ ಸದಸ್ಯ ಹನುಮೇಗೌಡ, ಜಿಪಂ ಮಾಜಿ ಸದಸ್ಯ ಸ್ವಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ತಾಲೂಕು ಪಂಚಾಯಿತಿ ಸದಸ್ಯರಾದ ದಿನೇಶ್, ಸುರೇಂದ್ರ ಮತ್ತು ಪದ್ಮಾ ಚುಂಚೇಗೌಡ, ಎಪಿಎಂಸಿ ಉಪಾಧ್ಯಕ್ಷ ಸಿದ್ದರಾಮಯ್ಯ, ಮುಖಂಡರಾದ ಶಿವಶಂಕರ್, ಜಯರಾಂ, ಕೃಷ್ಣಯ್ಯ ಹಾಗೂ ಇತರರು ಇದ್ದರು.