ಹಾಲು ಉತ್ಪಾದಕರಿಗೆ 2400 ಕೋಟಿ ರೂ. ಸಹಾಯಧನ

ಕೇಂದ್ರದ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ 220 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಹಾಸನ: ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವುದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದು, ಈ ಯೋಜನೆಯಡಿ ರಾಜ್ಯಕ್ಕೆ ಅವರು ನೀಡುವ 2400 ಕೋಟಿ ರೂ.ಗಳಷ್ಟನ್ನು ನಾವು ಹಾಲು ಉತ್ಪಾದಕರಿಗೆ ಸಹಾಯಧನವಾಗಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ದುದ್ದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಯ 196 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ 220 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಐದು ವರ್ಷದಿಂದ ಅನ್ನದಾತರನ್ನು ನೆನಪು ಮಾಡಿಕೊಳ್ಳದ ನರೇಂದ್ರಮೋದಿ ಚುನಾವಣೆ ಸಮೀಪಿಸುತ್ತಿದ್ದಂತೆ ಕೃಷಿ ಕ್ಷೇತ್ರದತ್ತ ಗಮನ ಹರಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುವ 6 ಸಾವಿರ ರೂ.ಗಳ ಒಟ್ಟು ಮೊತ್ತ ವಾರ್ಷಿಕ 2400 ಕೋಟಿ ರೂ. ಆಗಲಿದೆ. ಆದರೆ, ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 1 ರೂ.ಗಳನ್ನು ಏಪ್ರಿಲ್ 1ರಿಂದ ನೀಡಲು ನಿರ್ಧರಿಸಿದೆ. ಇದರ ಮೊತ್ತ 2098 ಕೋಟಿ ರೂ. ಆಗುತ್ತದೆ. ನಮ್ಮ ರೈತರನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವು ನಮಗಿದೆ ಎಂದರು.
11 ಸಾವಿರ ಕೋಟಿ ರೂ.ಗಳನ್ನು ಪಂಪ್‌ಸೆಟ್‌ಗಳ ವಿದ್ಯುಚ್ಛಕ್ತಿಗೆ ರಾಜ್ಯ ಸರ್ಕಾರ ಮೀಸಲಿಟ್ಟಿದೆ. ರಾಜ್ಯದ 44 ಲಕ್ಷ ರೈತರ 46 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಲಾಗುತ್ತಿದೆ. ಮಾರ್ಚ್ ಅಂತ್ಯಕ್ಕೆ ಎಲ್ಲ ರೈತರಿಗೂ ಋಣಮುಕ್ತ ಪತ್ರ ನೀಡಲಾಗುವುದು. 2020ಕ್ಕೆ ಸರ್ಕಾರಕ್ಕೆ ಅನುದಾನ ಶೇಖರಣೆ ಆಗಲಿದ್ದು, ಬಳಿಕ ರೈತರಿಗೆ ಉತ್ತಮ ಯೋಜನೆಗಳ ಘೋಷಿಸಲಾಗುವುದು ಎಂದು ಹೇಳಿದರು.
ಸಾಲಮನ್ನಾ ವಿಚಾರದಲ್ಲಿ ಹಳೇಯ ಹಾಗೂ ಉತ್ತರ ಕರ್ನಾಟಕ ಎಂಬ ಭೇದ ಭಾವವನ್ನು ನಾವು ಮಾಡಿಲ್ಲ. ಭೂಮಿಯಲ್ಲಿ ಕೆಲಸ ಮಾಡುವ ಎಲ್ಲರೂ ರೈತರೇ ಆಗಿದ್ದಾರೆ. ರೈತರು ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ. ಬ್ಯಾಂಕ್‌ನಿಂದ ಸಾಲ ಪಡೆದು ಕಾನೂನುಬದ್ಧವಾಗಿ ಮರುಪಾವತಿಸಿದವರಿಗೆ 25 ಸಾವಿರ ರೂ. ನೀಡುವುದಾಗಿ ಮೊದಲೇ ಘೋಷಿಸಿದ್ದೇನೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದರು.

ದೇವೇಗೌಡರಿಗೆ ಶಕ್ತಿ ನೀಡಿದ ಕ್ಷೇತ್ರ: ಶಾಂತಿಗ್ರಾಮ ಹಾಗೂ ದುದ್ದ ಹೋಬಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜಕೀಯ ಶಕ್ತಿ ನೀಡಿದ ಕ್ಷೇತ್ರವಾಗಿದ್ದು, ಯಾವ ಕಾರಣಕ್ಕೂ ಈ ಭಾಗ ಅಭಿವೃದ್ಧಿಯಿಂದ ಹಿಂದೆ ಉಳಿಯಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
2004ರಲ್ಲಿ ಕೆ.ಎಂ.ಶಿವಲಿಂಗೇಗೌಡರು ಕೇವಲ 14 ಮತಗಳಿಂದ ಸೋತಿದ್ದರು. ನಂತರ ಅವರು ಅರಸೀಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ರಾಜಕೀಯ ಭವಿಷ್ಯ ಕಂಡುಕೊಂಡಿದ್ದಾರೆ. ಜೆಡಿಎಸ್‌ಗೆ ಈ ಭಾಗದ ಜನರ ಋಣ ಸಾಕಷ್ಟಿದೆ. ಸಚಿವ ರೇವಣ್ಣ ಅವರು ಮುತುವರ್ಜಿ ವಹಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 196 ಹಳ್ಳಿಗಳಿಗೆ ಶುದ್ಧ ನೀರು ಕಲ್ಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, 220 ಕೋಟಿ ರೂ. ವೆಚ್ಚದಲ್ಲಿ 196 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲು ಕ್ರಮ ಕೈಗೊಂಡಿದ್ದು ಯೋಜನೆಗೆ ಇನ್ನೂ 22 ಹಳ್ಳಿಗಳನ್ನು ಸೇರಿಸಲಾಗುವುದು ಎಂದರು.
ಫೆ.18ರಂದು ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ರೈತರಿಗೆ ಋಣಮುಕ್ತ ಪತ್ರ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲೆಯ 2.20 ಲಕ್ಷ ರೈತರ 1500 ಕೋಟಿ ರೂ. ಸಾಲಮನ್ನಾ ಆಗಿದೆ ಎಂದರು.
ಶಾಸಕರಾದ ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಾಪಂ ಅಧ್ಯಕ್ಷ ಬಿ.ಟಿ.ಸತೀಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡರಾದ ಕೆ.ಎಂ.ರಾಜೇಗೌಡ, ಲಕ್ಷ್ಮಣೇಗೌಡ, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್, ಸೂರಜ್ ರೇವಣ್ಣ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಎಲ್.ಕೆ.ಅತೀಖ್, ರಾಕೇಶ್ ಸಿಂಗ್, ದಕ್ಷಿಣ ವಲಯ ಐಜಿಪಿ ಶರತ್‌ಚಂದ್ರ, ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಸಿ.ಪುಟ್ಟಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್.ಪ್ರಕಾಶ್‌ಗೌಡ ಇತರರು ಇದ್ದರು.

ಸರ್ಕಾರ ಪತನಕ್ಕೆ ಪ್ರಯತ್ನಿಸಿದರೆ ಸರ್ವನಾಶ:
ಸಿಎಂ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಆಡಳಿತ ನಡೆಸಲಿದ್ದು, ಸರ್ಕಾರ ಪತನಕ್ಕೆ ಪ್ರಯತ್ನಿಸಿದರೆ ಅವರು ಖಂಡಿತವಾಗಿಯೂ ಸರ್ವನಾಶವಾಗುತ್ತಾರೆ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ರೈತರ ಸಾಲಮನ್ನಾ, ಬಡವರ ಬಂಧು, ಗೃಹಲಕ್ಷ್ಮೀ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ರಾಜ್ಯವನ್ನು ಸಿಎಂ ಕುಮಾರಸ್ವಾಮಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಸರಿಸಾಟಿಯಾಗಿ ಕುಮಾರಸ್ವಾಮಿ ಬೆಳೆಯುತ್ತಿದ್ದಾರೆ. ರಾಜ್ಯದ ಏಳಿಗೆ ಸಹಿಸದ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಶಾಸಕ ಶತಮೂರ್ಖ: ಬಿಜೆಪಿ ಕಾರ್ಯಕರ್ತನ ಮೇಲೆ ಕಲ್ಲೇಟು ಬಿದ್ದ ತಕ್ಷಣವೇ ಶಾಸಕರ ನಿವಾಸಕ್ಕೆ ರಕ್ಷಣೆ ನೀಡುವಂತೆ ಸಿಎಂ ಆದೇಶಿಸಿದರು. ಪೊಲೀಸರಿಗೆ ಆ ಸಂದರ್ಭದಲ್ಲಿ ಭದ್ರತೆ ನೀಡುವಂತೆ ಸೂಚನೆ ನೀಡದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು. ಆದರೆ, ಶತಮೂರ್ಖ ಶಾಸಕ ನಮ್ಮ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಇಂತವರಿಗೆ ಏನು ಹೇಳುವುದು ಎಂದು ಹೆಸರು ಹೇಳದೆ ಶಾಸಕ ಪ್ರೀತಂ ಗೌಡರಿಗೆ ಟಾಂಗ್ ನೀಡಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಲು ಸರ್ಕಾರ ಬದ್ಧವಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕಾನೂನಿನ ನೆಪವೊಡ್ಡಿ ಸಾಲಮನ್ನಾ ಆಗದಂತೆ ತಡೆಯೊಡ್ಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ರಾಷ್ಟ್ರ ಮಟ್ಟದ ನಾಯಕರಾಗಿ ತಮಗೆ ಪೈಪೋಟಿ ನೀಡುತ್ತಾರೆ ಎಂಬ ಭಯ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ ಎಂದರು.