ಸಚಿವ ರೇವಣ್ಣರನ್ನು ಟಾರ್ಗೆಟ್ ಮಾಡದಿರಿ

ಹಾಸನ:  ಸರ್ಕಾರಿ ಶಾಲಾ ಕಾಲೇಜುಗಳ ಕಟ್ಟಡ ರಿಪೇರಿಗಾಗಿ ಬಿಡುಗಡೆಯಾಗಿರುವ 4.50 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ ಎಂಬುದರ ಕುರಿತು ನನಗೇನು ಗೊತ್ತಿಲ್ಲ. ಈ ಸಂಬಂಧ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಪಟೇಲ್ ಶಿವಣ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ವರ್ಷಾರಂಭದ ಎರಡನೇ ದಿನವೇ ಗದ್ದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಏನೂ ಮಾತನಾಡದೆ ಸುಮ್ಮನಿದ್ದೇನೆ. ಆದರೆ ಪಟೇಲ್ ಶಿವಣ್ಣ ಅವರು ಸಚಿವ ಎಚ್.ಡಿ.ರೇವಣ್ಣ ಅವರನ್ನೇ ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಿದ್ದಾರೆ. ಅನುದಾನ ಬಳಕೆ ಸಂಬಂಧ ನನಗೆ ಯಾವುದೇ ಮಾಹಿತಿ ಇಲ್ಲ. ಇದು ರಾಜ್ಯಮಟ್ಟದಲ್ಲಿ ಆಗಿರುವ ನಿರ್ಧಾರ. ಜಿಪಂ ಅಧ್ಯಕ್ಷರು, ಸಿಇಒ ಹಾಗೂ ಎಲ್ಲ ಸದಸ್ಯರೂ ಸೇರಿ ಸಚಿವರನ್ನು ಭೇಟಿಯಾಗೋಣ. ಜಿಲ್ಲಾ ಪಂಚಾಯಿತಿಗೆ ಬಂದಿರುವ ಅನುದಾನವನ್ನು ಬೇರೆ ಇಲಾಖೆಗೆ ಬಿಟ್ಟುಕೊಡುವುದು ಬೇಡ ಎಂದರು.

ಸಂವಿಧಾನದಲ್ಲಿ ಅವಕಾಶ ಇದೆಯಾ?: ಸದಸ್ಯ ಪಟೇಲ್ ಶಿವಣ್ಣ ಮಾತನಾಡಿ, ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಕಟ್ಟಡ ರಿಪೇರಿಗೆ ಮೀಸಲಿರುವ 4.50 ಕೋಟಿ ರೂ. ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಮಾಡಿಸಲು ಸಚಿವ ರೇವಣ್ಣ ನಿರ್ಧರಿಸಿದ್ದಾರೆ. ಹೀಗೆ ತಮಗಿಷ್ಟ ಬಂದಂತೆ ಮಾಡುವುದಾದರೆ ಜಿಲ್ಲಾ ಪಂಚಾಯಿತಿ ಇರುವುದೇಕೆ? ಸಂವಿಧಾನದಲ್ಲಿ ಇದಕ್ಕೆ ಅವಕಾಶವಿದೆಯಾ ಎಂದು ಪ್ರಶ್ನಿಸಿದರು.
ಜಿಪಂ ಸದಸ್ಯನಾಗಿದ್ದರೂ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಯಾವುದೇ ಲಾಭವಿಲ್ಲ. ನನಗೆ ಜಿಪಂ ಸದಸ್ಯನಾಗಬೇಕೆಂಬ ಯಾವ ಆಸೆಯೂ ಇರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೊಸೆ ಚುನಾವಣೆಗೆ ಸ್ಪರ್ಧಿಸಿದ್ದು, ನನಗೂ ನಿಲ್ಲುವಂತೆ ಸ್ನೇಹಿತ ಮಂಜೇಗೌಡ ಸಲಹೆ ನೀಡಿದರು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಬೇಕಾಯಿತು. ಆದರೆ ಇಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಯಾವ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಪಂ ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಸಿ.ಪುಟ್ಟಸ್ವಾಮಿ ಮಾತನಾಡಿ, ರಾಜ್ಯದ ಎಲ್ಲ ಶಾಲಾ ಕಾಲೇಜುಗಳ ಕಟ್ಟಡ ದುರಸ್ತಿಗೆ 150 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಎಸ್‌ಡಿಎಂಸಿ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಕೆಲಸ ಬೇಗ ಪೂರ್ಣಗೊಳ್ಳಬೇಕೆಂಬ ಉದ್ದೇಶದ ಲೋಕೋಪಯೋಗಿ ಇಲಾಖೆಗೆ 150 ಕೋಟಿ ರೂ. ನೀಡಲಾಗಿದೆ. ಈ ಸಂಬಂಧ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಕ್ಷೇತ್ರದ ಜನಪ್ರತಿನಿಧಿಗಳನ್ನು ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಆಹ್ವಾನಿಸುವಂತೆ ಕಳೆದ ಸಭೆಯಲ್ಲಿ ಸೂಚನೆ ನೀಡಿದ್ದರೂ ಅಧಿಕಾರಿಗಳು ಪಾಲಿಸಿಲ್ಲ ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಮುಂದೆ ಯಾವ ಕಾರಣವನ್ನು ಕೇಳುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ನೀರು ಸರಬರಾಜು ಮಂಡಳಿ ಇಲಾಖೆ ಅಧಿಕಾರಿ ಆನಂದ್ ವಿರುದ್ಧ ಗರಂ ಆದರು. ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರನ್ನು ಕೆಳಗೆ ಹಾಕಿ ಅಧಿಕಾರಿಗಳ ಹೆಸರು ಮೇಲೆ ಇರುತ್ತದೆ. ಶಿಷ್ಟಾಚಾರದ ಅರಿವು ಇದೆಯೇ ಎಂದರು.

ಕೃಷಿ ಇಲಾಖೆಯಿಂದ ಯಾವ ಕಾಮಗಾರಿಯು ಸರಿಯಾಗಿ ಆಗುತ್ತಿಲ್ಲ. ಮಳೆ ಕೊರತೆಯಿಂದ ಬೆಳೆ ನಷ್ಟವಾಗಿದ್ದರೂ ಸಮರ್ಪಕ ವರದಿ ತಯಾರಿಸಿಲ್ಲ. ಹೀಗಾದರೆ ನಾವು ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

14ನೇ ಹಣಕಾಸು ಯೋಜನೆಯಡಿ ಬಿಡುಗೆಯಾಗುವ ಒಟ್ಟು ಅನುದಾನದಲ್ಲಿ ಶೇ.80ರಷ್ಟನ್ನು ಕುಡಿಯುವ ನೀರಿಗೆ ಮೀಸಲಿಡಲು ಆದೇಶಿಸಿದೆ. ಎಲ್ಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಪಂಗೆ ಪತ್ರ ಬರೆದು ಕ್ರಮ ವಹಿಸುವಂತೆ ಸೂಚಿಸಬೇಕು. ಕುಡಿಯುವ ನೀರಿನ ಸಮಸ್ಯೆ ಯಾವ ಗ್ರಾಮದಲ್ಲೂ ಉದ್ಭವಿಸಬಾರದು ಎಂದು ಸೂಚಿಸಿದರು.

ಸದಸ್ಯ ಪಟೇಲ್ ಶಿವಣ್ಣ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯನ್ನು ಕೇವಲ ಗ್ರಾಪಂಗೆ ವಹಿಸಿದರೆ ಸರಿಯಾಗುವುದಿಲ್ಲ. ಜಿಪಂ ಜವಾಬ್ದಾರಿ ಸಾಕಷ್ಟಿದ್ದು ಶೇ. 80ರಷ್ಟು ಅನುದಾನವನ್ನು ಅದಕ್ಕೆ ಮೀಸಲಿಟ್ಟರೆ ಪ್ರಯೋಜನವಿಲ್ಲ. ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.

ಬೇಲೂರು ಇಒ ಕ್ಷಮೆ: ಈಚೆಗೆ ಏರ್ಪಡಿಸಿದ್ದ ಬೇಲೂರು ಕೆಡಿಪಿ ಸಭೆಯಲ್ಲಿ ಜಿಪಂ ಸದಸ್ಯರನ್ನು ನೆಲದ ಮೇಲೆ ಕೂರಿಸಿದ್ದಕ್ಕೆ ತಾಪಂ ಇಒ ರವಿಕುಮಾರ್ ಕ್ಷಮೆಯಾಚಿಸಿದರು. ಸಭೆಗೆ ಹಾಜರಾಗಿದ್ದ ಸದಸ್ಯರಾದ ಸಯ್ಯದ್ ತೌಫಿಕ್, ರತ್ನಮ್ಮ ಐಸಾಮಿಗೌಡ, ಲತಾ ದೀಲಿಪ್ ಹಾಗೂ ಲತಾ ಮಂಜೇಶ್ವರಿ ಕುರ್ಚಿ ವ್ಯವಸ್ಥೆ ಮಾಡದ ಕಾರಣ ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಹೀಗಾಗಿ ಅವರು ಸಭೆಯಿಂದ ಹೊರಬಂದಿದ್ದರು.

ಸದಸ್ಯೆ ಲತಾ ಮಂಜೇಶ್ವರಿ ಮಾತನಾಡಿ, ಇಒ ರವಿಕುಮಾರ್ ಚುನಾಯಿತ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದು, ಇದೇ ರೀತಿಯಾದರೆ ನಾವು ಮುಂದಿನ ಸಭೆಗಳಿಗೆ ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಮಾತನಾಡಿದ ಬೇಲೂರು ತಾಪಂ ಇಒ ರವಿಕುಮಾರ್, ವೇದಿಕೆಯಲ್ಲಿ ಆರು ಜನರಿಗೆ ಮಾತ್ರ ಕೂರಲು ಅವಕಾಶವಿದೆ. ಅರಕಲಗೂಡು, ಅರಸೀಕೆರೆಯಲ್ಲೂ ಸದಸ್ಯರನ್ನು ಕೆಳಗಡೆ ಕೂರಿಸಲಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಆಗ ಮಧ್ಯಪ್ರವೇಶಿಸಿದ ಜಿಪಂ ಸದಸ್ಯೆ ಭವಾನಿ ರೇವಣ್ಣ, ರವಿಕುಮಾರ್ ಅವರು ಕ್ಷಮೆ ಕೇಳಬೇಕು. ಇನ್ನೊಂದು ಬಾರಿ ಈ ರೀತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

ಅವ್ಯವಹಾರ: ಜಿಪಂ ಸದಸ್ಯೆ ಚಂಚಲಾ ಕುಮಾರಸ್ವಾಮಿ ಮಾತನಾಡಿ, ಬಾಳ್ಳುಪೇಟೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿ ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಲತಾ ದಿಲೀಪ್‌ಕುಮಾರ್ ಮಾತನಾಡಿ, ಬೇಲೂರು ತಾಲೂಕಿನ ಅಡಗೂರು ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಮಾರ್ಚ್ ವೇಳೆಗೆ ಅದರ ಭೀಕರತೆ ಇನ್ನೂ ಹೆಚ್ಚಲಿದ್ದು, ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದರು.