ವಾರದ ಸಂತೆ ಸ್ಥಳಾಂತರ ತಂದ ಸಮಸ್ಯೆ

ಹಾಸನ: ನಗರದ ರೈಲ್ವೆ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಮೂವತ್ತು ವರ್ಷಗಳಿಂದ ನಡೆಯುತ್ತಿದ್ದ ವಾರದ ಸಂತೆಯನ್ನು ದಿಢೀರ್ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರ ಮಾಡಿದ್ದು, ವರ್ತಕರಿಗೆ ಸಮಸ್ಯೆ ಉಂಟು ಮಾಡಿದೆ.

ಹಾಸನ ಸುತ್ತಲಿನ ಗ್ರಾಮಗಳಿಂದ ಬರುವ 200ಕ್ಕೂ ಅಧಿಕ ವರ್ತಕರು ಜಿಲ್ಲಾಡಳಿತದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಯಾವ ಸೌಕರ್ಯವನ್ನು ಕಲ್ಪಿಸದೆ ಏಕಾಏಕಿ ಸಂತೆ ಜಾಗ ಬದಲಿಸಿದ್ದರಿಂದ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಿದೆ. 2 ವಾರದಿಂದ ಸಂತೆ ಸ್ಥಳ ಬದಲಾಗಿದ್ದು ಮಂಗಳವಾರ ಬೆಳಗ್ಗೆ ತರಕಾರಿ ಹಾಗೂ ಇತರ ಸಾಮಗ್ರಿ ತರಲೆಂದು ರೈಲ್ವೆ ನಿಲ್ದಾಣ ಕಡೆಗೆ ಹೋಗುತ್ತಿದ್ದ ಶಂಕರಿಪುರಂ, ಕುವೆಂಪುನಗರ, ಬಿ.ಕಾಟಿಹಳ್ಳಿ, ಸತ್ಯಮಂಗಲ, ವಿದ್ಯಾನಗರ ನಿವಾಸಿಗಳು ಮತ್ತಷ್ಟು ದೂರ ಹೋಗಬೇಕಾಗಿದೆ.

ಕೆಎಸ್‌ಆರ್‌ಟಿಸಿ ಕ್ಯಾತೆ:  ಮೂವತ್ತು ವರ್ಷದಿಂದ ರೈಲ್ವೆ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ನಡೆಯುತ್ತಿದ್ದ ಸಂತೆ ಸ್ಥಳ ಬದಲಾವಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧಿಕಾರಿಗಳೇ ಕಾರಣ ಎಂದು ವರ್ತಕರು ಆರೋಪಿಸುತ್ತಾರೆ. ಡಿಪೊಗೆ ಹೋಗುವ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು. ವರ್ತಕರು ರಸ್ತೆ ಮೇಲೆಯೇ ಅಂಗಡಿಗಳನ್ನು ಹಾಕುತ್ತಾರೆ. ಇದರಿಂದ ಬಸ್ ಚಾಲಕರು ತೊಂದರೆ ಎದುರಿಸುವಂತಾಗಿದೆ.

ರೈಲ್ವೆ ನಿಲ್ದಾಣದಿಂದ ಜನರು ನಿರಂತರವಾಗಿ ಬರುವುದು, ಆಟೋಗಳು ಅಲ್ಲಿಯೇ ನಿಲ್ಲುವುದರಿಂದ ಸಂತೆ ಸ್ಥಳ ಬದಲಾಯಿಸಬೇಕೆಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಅದರನ್ವಯ ಡಿಸಿ ರೋಹಿಣಿ ಸಿಂಧೂರಿ, ನಗರಸಭೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ನಡೆಸಿ ಮಂಗಳವಾರದ ಸಂತೆ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ.

ಮೂಲಸೌಕರ್ಯಗಳಿಲ್ಲ: ಹಾಸನ ನಗರದಲ್ಲಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದ ರಸ್ತೆ, ಸಂತೆಪೇಟೆ ಹಾಗೂ ರೇಷ್ಮೆ ಗೂಡಿನ ಇಲಾಖೆ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದೆ. ಉಳಿದೆಲ್ಲ ಸಂತೆ ಜಾಗದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೂ ಹೊಸದಾಗಿ ಆರಂಭವಾಗಿರುವ ರೇಷ್ಮೆ ಇಲಾಖೆ ಆವರಣದಲ್ಲಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಕುಡಿಯುವ ನೀರು, ವಿದ್ಯುತ್, ಶೌಚಗೃಹ ವ್ಯವಸ್ಥೆಯಿಲ್ಲದೆ ವ್ಯಾಪಾರಿಗಳು ಹೈರಾಣಾಗಿದ್ದಾರೆ.

ಬಿಎಂ ರಸ್ತೆಯಲ್ಲಿ ವಿದ್ಯುತ್ ದೀಪಗಳಿದ್ದರಿಂದ ರಾತ್ರಿ 10ರವರೆಗೆ ಸಂತೆ ನಡೆಯುತ್ತಿತ್ತು. ಆದರೆ ಇಲ್ಲಿ ಸಂಜೆ 6 ಗಂಟೆಗೆ ಸಂತೆ ಮುಕ್ತಾಯಗೊಳ್ಳಬೇಕು. ಶೌಚಗೃಹ ನಿರ್ಮಿಸುವ ಯಾವ ಯೋಜನೆಯನ್ನು ನಗರಸಭೆ ಇದುವರೆಗೆ ಹಾಕಿಕೊಂಡಿಲ್ಲ. ಗ್ರಾಮೀಣ ಭಾಗದಿಂದ ಬರುವ ಬಹುತೇಕ ಮಹಿಳಾ ವ್ಯಾಪಾರಿಗಳು ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡದ ಕಾರಣ ಬಿಎಂ ರಸ್ತೆಯಲ್ಲೇ ದ್ವಿಚಕ್ರವಾಹನ, ಆಟೋ ಹಾಗೂ ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಅರಸೀಕೆರೆ, ಬೆಂಗಳೂರು ಕಡೆಗೆ ಹೋಗುವ ಪ್ರಯಾಣಿಕರಿಗೂ ಕಿರಿಕಿರಿಯಾಗಿದೆ.

ನಗರದಲ್ಲಿ ನಡೆಯುವ ಎಲ್ಲ ಸಂತೆಗಳ ನಿರ್ವಹಣೆಯನ್ನು ಬೆಂಗಳೂರಿನ ಕುಮಾರ್ ಎಂಬ ಗುತ್ತಿಗೆದಾರರಿಗೆ ವಹಿಸಿದ್ದು ವಾರ್ಷಿಕ 27 ಲಕ್ಷ ರೂ.ಗಳನ್ನು ನಗರಸಭೆಗೆ ಅವರು ಪಾವತಿಸುತ್ತಾರೆ. ಸಂತೆ ಶುಲ್ಕ ಎಂದು ಪ್ರತಿಯೊಬ್ಬರಿಂದ 20 ರೂ. ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ಸಾವಿರಕ್ಕೂ ಅಧಿಕ ವ್ಯಾಪಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಒಳ್ಳೆಯದೇ ಆಯ್ತು: ಸಂತೆ ಸ್ಥಳ ಬದಲಾಯಿಸಿದ್ದರಿಂದ ತಾತ್ಕಾಲಿಕವಾಗಿ ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗುವುದು ನಿಜವಾದರೂ ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರವನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೆಎಸ್‌ಆರ್‌ಟಿಸಿ ಕಾರ್ಯಾಗಾರವನ್ನು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವುದರಿಂದ ಆ ರಸ್ತೆಯಲ್ಲಿ ಬಸ್‌ಗಳ ಸಂಚಾರ ಸಂಖ್ಯೆ ಹೆಚ್ಚಲಿದೆ. ಸಂತೆ ಸ್ಥಳ ಬದಲಾವಣೆ ವಿಚಾರ ತಿಳಿಯುವವರೆಗೆ ವ್ಯಾಪಾರದಲ್ಲಿ ಹಿನ್ನೆಡೆಯಾಗಬಹುದು. ಈ ಸಮಸ್ಯೆ ಶಾಶ್ವತ ಅಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿ ಅನಂತ್.

ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಆವರಣದಲ್ಲಿ ವಾರದ ಸಂತೆಗೆ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಶೌಚಗೃಹ, ವಿದ್ಯುತ್ ವ್ಯವಸ್ಥೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ. ಜಿಲ್ಲಾಧಿಕಾರಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಆದೇಶದಂತೆ ಸಂತೆ ಸ್ಥಳ ಬದಲಾವಣೆ ಮಾಡಲಾಗಿದೆ. ಟೆಂಡರ್‌ದಾರರು ವಾರ್ಷಿಕ 27 ಲಕ್ಷ ರೂ.ಗಳನ್ನು ನಗರಸಭೆಗೆ ಕಟ್ಟುತ್ತಾರೆ.
ಬಿ.ಎ.ಪರಮೇಶ್, ನಗರಸಭೆ ಆಯುಕ್ತ

ಸಂತೆ ಸ್ಥಳ ಬದಲಾಯಿಸಿದ್ದರಿಂದ ವ್ಯಾಪಾರದಲ್ಲಿ ಕುಸಿತವಾಗಿದೆ. ಇಲ್ಲಿ ವಿದ್ಯುತ್, ಶೌಚಗೃಹ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. ಪ್ರತಿ ವಾರ 20ರೂ. ಸಂತೆ ಶುಲ್ಕ ಪಾವತಿಸುತ್ತಿದ್ದು, ನಗರಸಭೆ ಮುತುವರ್ಜಿ ವಹಿಸಿ ಸೌಕರ್ಯ ಕಲ್ಪಿಸಿಕೊಡಬೇಕು.
ಮಂಜಮ್ಮ, ತರಕಾರಿ ವ್ಯಾಪಾರಿ. ಚಿಕ್ಕಕಡಲೂರು