ಇಂಧನ ದರ ಏರಿಕೆಗೆ ಖಂಡನೆ

ಹಾಸನ:  ಇಂಧನಗಳ ಮೇಲಿನ ರಾಜ್ಯ ಸರ್ಕಾರದ ಸುಂಕ ಏರಿಕೆ ಖಂಡಿಸಿ ಹಾಗೂ ಸಚಿವ ಪುಟ್ಟರಂಗಶೆಟ್ಟಿ ವಜಾಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ದೇಶಾದ್ಯಂತ ಇಂಧನ ದರ ಇಳಿಮುಖವಾಗುವ ಮೂಲಕ ವಾಹನ ಸವಾರರು ತುಸು ನಿರಾಳ ಅನುಭವಿಸುತ್ತಿದ್ದರು. ಅಷ್ಟರಲ್ಲಿಯೇ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಏರಿಕೆ ಮಾಡಿ ಜನಸಾಮಾನ್ಯರ ಜೇಬು ಸುಡುವಂತೆ ಮಾಡಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರದ ನಿರ್ಧಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ 2 ರೂ. ಹೆಚ್ಚಳವಾಗಿದೆ. ತಿಂಗಳಿನಿಂದ ನಿರಂತರವಾಗಿ ಇಳಿಕೆ ಕಂಡಿದ್ದ ಬೆಲೆ ಈಗ ದಿಢೀರ್ ಏರಿಕೆಯಾಗಿದೆ. ಈ ಹಿಂದೆ ಇಂಧನ ದರ ಏರಿಕೆಯಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತ್ತು. ಇಂಧನ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ಹೇಳಿದ್ದ ರಾಜ್ಯ ಸರ್ಕಾರ ಶೇ.2 ಸುಂಕ ಕಡಿತ ಮಾಡಿತ್ತು. ಆದರೆ ಪುನಃ ಜನಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕಿರುವುದು ಸಮಿಶ್ರ ಸರ್ಕಾರದ ನಾಟಕ ಬಯಲು ಮಾಡಿದೆ ಎಂದರು.

ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಆಪ್ತ ಸಿಬ್ಬಂದಿ ಬಳಿ 25.76ಲಕ್ಷ ರೂ. ನಗದು ಪತ್ತೆಯಾಗಿದೆ. ವಿಧಾನಸೌಧದಲ್ಲಿ ದಂಧೆ ತಡೆಯುವುದಾಗಿ ಅಧಿಕಾರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ ಸಚಿವರ ಅಪ್ತ ಸಿಬ್ಬಂದಿಯೇ 25.76 ಲಕ್ಷ ರೂ. ನಗದಿನೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವುದನ್ನು ನೋಡಿದರೆ ನಿಜವಾಗಿ ದಂಧೆ ಎಲ್ಲಿ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ದೂರಿದರು.

ಶಕ್ತಿಸೌಧದಲ್ಲೆ ಲಕ್ಷಾಂತರ ರೂ. ಸಿಕ್ಕಿರುವುದು ಸಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿರುವುದಕ್ಕೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಮುಖಂಡರಾದ ನವಿಲೆ ಅಣ್ಣಪ್ಪ, ವೇಣುಗೋಪಾಲ್, ಚಂದ್ರು, ಶೋಭನ್‌ಬಾಬು, ಚನ್ನಕೇಶವ ಮತ್ತಿತರರಿದ್ದರು.