ಎಂಸಿಎಫ್, ಪ್ರವಾಸಿ ಕೇಂದ್ರಗಳಿಗೆ ಭದ್ರತೆ ಹೆಚ್ಚಳ

ಹಾಸನ: ಪಾಕ್ ಮೂಲದ ಭಯೋತ್ಪಾದಕರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಇಸ್ರೋನ ಬಾಹ್ಯಾಕಾಶ ಮುಖ್ಯ ನಿಯಂತ್ರಣ ಕೇಂದ್ರ (ಎಂಸಿಎಫ್) ಸೇರಿ ಪ್ರಮುಖ ಸ್ಥಳಗಳಿಗೆ ಭದ್ರತೆ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಭಯೋತ್ಪಾದಕ ದಾಳಿ ನಡೆಯಬಹುದು ಎನ್ನುವ ಗುಪ್ತಚರ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಯಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಹೈ ಅಲರ್ಟ್ ಭಾಗವಾಗಿ ಜಿಲ್ಲೆಯಲ್ಲಿಯೂ ಪೊಲೀಸ್ ಅಧಿಕಾರಿಗಳು ಚುರುಕಾಗಿದ್ದಾರೆ. ಶುಕ್ರವಾರ ರಾತ್ರಿಯಿಂದಲೇ ಪ್ರಮುಖ ಕೇಂದ್ರಗಳಿಗೆ ಭದ್ರತೆ ಹೆಚ್ಚಿಸಿದ್ದು, ನಿಯಮಿತ ತಪಾಸಣೆ ಆರಂಭಿಸಲಾಗಿದೆ.

ದೇಶದ ಎಲ್ಲ ಉಪಗ್ರಹಗಳನ್ನು ನಿಯಂತ್ರಿಸುವ ನಗರ ಸಮೀಪದ ತವರದೇವರ ಕೊಪ್ಪಲಿನಲ್ಲಿರುವ ಬಾಹ್ಯಾಕಾಶ ಮುಖ್ಯ ನಿಯಂತ್ರಣ ಕೇಂದ್ರಕ್ಕೆ ಜಿಲ್ಲಾ ಪೊಲೀಸರಿಂದಲೂ ಭದ್ರತೆ ನೀಡಲಾಗಿದೆ.

ಸಾಮಾನ್ಯವಾಗಿ ಎಂಸಿಎಫ್‌ಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಿಂದಲೇ ಭದ್ರತೆ ಒದಗಿಸಲಾಗುತ್ತದೆ. ದಿನದ 24 ಗಂಟೆಯೂ ಆಯಕಟ್ಟಿನ ಸ್ಥಳಗಳಲ್ಲಿನ ವಾಚಿಂಗ್ ಟವರ್‌ಗಳಲ್ಲಿ ಕುಳಿತ ಆಧುನಿಕ ಶಸ್ತ್ರಸಜ್ಜಿತ ಸಿಐಆರ್‌ಎಫ್ ಸಿಬ್ಬಂದಿ ಸುತ್ತಮುತ್ತಲಿನ ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಿರುತ್ತಾರೆ.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸ್ಥಳವಾದ್ದರಿಂದ ಅಲ್ಲಿ ಹಾದು ಹೋಗುವವರು ಅನುಮಾನಾಸ್ಪದವಾಗಿ ವರ್ತಿಸಿದರೂ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಈಗ ಭಯೋತ್ಪಾದಕ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಕೆ ಬಂದಿರುವ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮನವಿ ಮೇರೆಗೆ ಅಲ್ಲಿಗೆ ಪೊಲೀಸರನ್ನೂ ನಿಯೋಜಿಸಲಾಗಿದೆ.

ಸಾಲಗಾಮೆ ರಸ್ತೆಯಲ್ಲಿ ಸಾಗುವ ಎಲ್ಲ ವಾಹನಗಳನ್ನು ತಪಾಸಣೆಗೊಳಪಡಿಸಿ ಮುಂದೆ ಬಿಡಲಾಗುತ್ತಿದೆ. ಜಿಲ್ಲಾ ಪೊಲೀಸ್ ಶ್ವಾನದಳ ಎಂಸಿಎಫ್ ಹೊರ ಆವರಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸುತ್ತಿದೆ.

ಪ್ರವಾಸಿ ಕೇಂದ್ರಗಳಿಗೆ ಭದ್ರತೆ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಾದ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ, ಬೇಲೂರಿನ ಚನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಗಳಲ್ಲಿನ ಸಿಬ್ಬಂದಿಗೆ ಎಚ್ಚರವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ. ಒಳಬರುವ ಎಲ್ಲ ಪ್ರವಾಸಿಗರಿಗೆ ಲೋಹ ಶೋಧಕ ಯಂತ್ರದ ಮೂಲಕ ಹಾದು ಹೋಗಲು ಸೂಚಿಸಲಾಗಿದೆ.

ಜಿಲ್ಲಾಧಿಕಾರಿ ಕಚೇರಿಗೂ ಭದ್ರತೆ: ನಗರದ ಜಿಲ್ಲಾಧಿಕಾರಿ ಕಚೇರಿಗೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ನಗರದ ರೈಲು, ಬಸ್ ನಿಲ್ದಾಣಗಳಲ್ಲಿ ಶುಕ್ರವಾರ ರಾತ್ರಿಯಿಂದ ನಿಯಮಿತವಾಗಿ ಶ್ವಾನದಳದಿಂದ ತಪಾಸಣೆ ನಡೆಸಲಾಗುತ್ತಿದೆ. ಪ್ರಮುಖ ಸ್ಥಳಗಳಿಗೆ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿ, ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯಲ್ಲಿಯೂ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಎಂಸಿಎಫ್‌ಗೆ ನಮ್ಮ ಪೊಲೀಸರು ಹಾಗೂ ಶ್ವಾನದಳವನ್ನು ಕಳುಹಿಸಿದ್ದೇವೆ. ಅಲ್ಲಿ ಸಾಗುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ, ಬಸ್, ರೈಲು ನಿಲ್ದಾಣಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ಶ್ವಾನದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರವಾಸಿ ತಾಣಗಳಲ್ಲಿ ಭದ್ರತಾ ಕ್ರಮಗಳನ್ನು ಶಿಸ್ತಾಗಿ ಪಾಲಿಸಲು ಸೂಚಿಸಲಾಗಿದೆ.
ಡಾ.ಎ.ಎನ್.ಪ್ರಕಾಶ್‌ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

 

Leave a Reply

Your email address will not be published. Required fields are marked *