21ರಂದು ಬೃಹತ್ ಪ್ರತಿಭಟನೆ

ಹಾಸನ : ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿ ಕೇವಲ 2 ಲಕ್ಷ ರೂ. ಮನ್ನಾ ಮಾಡಿ ಮಾತು ತಪ್ಪಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆ ಖಂಡಿಸಿ ಜು. 21 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ತಿಳಿಸಿದರು.

ನಗರದ ಸಂಸ್ಕೃತ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ರೈತ ಸಂಘದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗೆ ಪ್ರಾಮಾಣಿಕತೆಯಿಂದ ಅಧಿಕಾರ ನಡೆಸುವ ಆತ್ಮವಿಶ್ವಾಸ ಇರಬೇಕು. ಓಟಿಗಾಗಿ ಸುಳ್ಳು ಭರವಸೆ ನೀಡಿ ಆ ಬಳಿಕ ಹೇಳಿದ ಮಾತಿನಂತೆ ನಡೆಯಲಾಗದೆ ಕಣ್ಣೀರು ಸುರಿಸುವುದು ಒಳ್ಳೆಯದಲ್ಲ ಎಂದು ಟೀಕಿಸಿದರು.

ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಒಂದು ಯೋಜನೆಯನ್ನು ಕಾರ್ಯಗತಗೊಳಿಸಲಿಲ್ಲ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದೇ ಪರಮ ಗುರಿ ಎಂದು ಕುಮಾರಸ್ವಾಮಿ ಭಾಷಣ ಮಾಡಿದ್ದರು. ಆದರೆ ಈಗ ಕೇವಲ 2 ಲಕ್ಷ ರೂ. ಸಾಲ ಮನ್ನಾ ಘೋಷಿಸಿದ್ದಾರೆ. ಸಾಲ ಮನ್ನಾ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದು ‘ಋಣ ಮುಕ್ತ’ ಪತ್ರ ಕೈ ಸೇರುವವರೆಗೆ ಯಾವ ರೈತರ ಸಾಲ ಮನ್ನಾ ಆಗಿದೆ ಎಂಬುದು ತಿಳಿಯುವುದಿಲ್ಲ. ಸಿಎಂ ಕುಮಾರಸ್ವಾಮಿ ಅವರ ದಿಢೀರ್ ನಿರ್ಧಾರಗಳು ರಾಜ್ಯವನ್ನು ಮತ್ತಷ್ಟು ಅಧೋಗತಿಗೆ ತಳ್ಳುತ್ತಿವೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಾಸಿಕ 6 ಸಾವಿರ ರೂ. ನೀಡುವುದಾಗಿ ಹೇಳಿದ್ದ ಅವರು ಸಾವಿರ ರೂ.ಗೆ ನಿಗದಿಮಾಡಿದ್ದಾರೆ. ವೃದ್ಧಾಪ್ಯ ಪಿಂಚಣಿಯಲ್ಲೂ ಆಡಿದ ಮಾತು ತಪ್ಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘ ಬಲವರ್ಧನೆಗೆ ಕ್ರಮ: ಚುನಾವಣೆ ಹಾಗೂ ನಂತರ ಮಾತಿನಲ್ಲಿ ಬದಲಾವಣೆ ಕಂಡುಕೊಳ್ಳುವ ರಾಜಕೀಯ ಮುಖಂಡರ ವಿರುದ್ಧ ಪ್ರಬಲವಾಗಿ ಹೋರಾಡಲು ರೈತ ಸಂಘ ಮತ್ತುಷ್ಟು ಬಲವರ್ಧನೆಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರೈತರಿಗೆ ಹೋರಾಟದ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಆರ್ಥಿಕ ತಜ್ಞ ಶಿವಸಂದರ್, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಲೋಕೆಶ್, ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ ಹಾಗೂ ಇತರರು ಇದ್ದರು.