ನೋಯ್ಡ: ವಿಶಾಲ್ ತಾಟೆ ಮತ್ತು ಶಿವಂ ಪತರೆ ಅವರ ಅದ್ಭುತ ಆಟದ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ 48ನೇ ಪಂದ್ಯದಲ್ಲಿ ಯು ಮುಂಬಾ ತಂಡದ ದಿಟ್ಟ ಹೋರಾಟವನ್ನು 9 ಅಂಕಗಳಿಂದ ಹತ್ತಿಕ್ಕಿತು.
ನೋಯ್ಡ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ದ್ವಿತೀಯ ಪಂದ್ಯದಲ್ಲಿ ಹರಿಯಾಣ ತಂಡವು 48-39 ಅಂಕಗಳಿಂದ ಮುಂಬಾ ತಂಡಕ್ಕೆ ಆಘಾತ ನೀಡಿತು. ಇದರೊಂದಿಗೆ ಹ್ಯಾಟ್ರಿಕ್ ಜಯ ದಾಖಲಿಸಿದ ಹರಿಯಾಣ, 6ನೇ ಜಯದೊಂದಿಗೆ ಒಟ್ಟಾರೆ 31 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ ಮೊದಲ ಸಲ ಅಗ್ರಸ್ಥಾನಕ್ಕೇರಿತು.
ಹರಿಯಾಣ ಸ್ಟೀಲರ್ಸ್ ಪರ ವಿಶಾಲ್ 11 ಅಂಕ , ಶಿವಂ ಮತ್ತು ಮೊಹಮ್ಮದ್ರಜಾ ಕ್ರಮವಾಗಿ 10 ಮತ್ತು 9 ಅಂಕಗಳನ್ನು ಕಲೆಹಾಕಿದರು. ಯು ಮುಂಬಾ ತಂಡದ ಪರ ಅಜಿತ್ ಚೌಹಾಣ್ (18 ಅಂಕ) ಏಕಾಂಗಿ ಹೋರಾಟ ನಡೆಸಿದರಾದರೂ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂಬಾ ಮೂರನೇ ಸೋಲಿಗೆ ಒಳಗಾಯಿತು. ಆದಾಗ್ಯೂ ಅಂಕಪಟ್ಟಿಯ ಅಗ್ರ ಮೂರರಲ್ಲಿ 30 ಅಂಕಗಳೊಂದಿಗೆ ಉಳಿಯುವಲ್ಲಿ ಸಫಲವಾಯಿತು.
ಅಜಿತ್ ಚೌಹಾಣ್ ಅವರ ಅಬ್ಬರದಿಂದಾಗಿ ಯು ಮುಂಬಾ ತಂಡ 25ನೇ ನಿಮಿಷಕ್ಕೆ 28-26ರಲ್ಲಿ ಮೇಲುಗೈ ಸಾಧಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಯತ್ನವನ್ನು ಮುಂದುವರಿಸಿತು. ಆದರೆ 27ನೇ ನಿಮಿಷಕ್ಕೆ ಉಭಯ ತಂಡಗಳು ಮೊದಲ ಬಾರಿ 29 -29 ಅಂಕಗಳಿಂದ ಸಮಬಲದ ಹೋರಾಟ ನೀಡಿದವು.
ಇದೇ ಹೋರಾಟವು ಮುಂದಿನ ಎರಡು ನಿಮಿಷಗಳ ಕಾಲ ಮುಂದುವರಿಯಿತು. 29ನೇ ನಿಮಿಷದಲ್ಲಿ ಮುಂಬಾ ತಂಡವನ್ನು ಕಟ್ಟಿಹಾಕಿದ ಹರಿಯಾಣ ಸ್ಟೀಲರ್ಸ್ 30 ನಿಮಿಷಗಳ ಹೋರಾಟದ ಅಂತ್ಯಕ್ಕೆ 36-31 ಅಂಕಗಳಿಂದ ಮೇಲೆಗೈ ಸಾಧಿಸಿತು. ಈ ವೇಳೆ ಹರಿಯಾಣ ಸ್ಟೀಲರ್ಸ್ ನ ಶಿವಂ ಸೂಪರ್ ಟೆನ್ ಸಾಹಸ ಮಾಡಿದರೆ, ವಿಶಾಲ್ ತಾಟೆ ಮತ್ತು ಮೊಹಮ್ಮದ್ರಜಾ ಅನುಕ್ರಮವಾಗಿ 8 ಮತ್ತು 9 ಅಂಕಗಳ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಎಡ ಬದಿಯ ರೇಡರ್ ಅಜಿತ್ ಚೌಹಾಣ್ ಅವರ ಮಿಂಚಿನ ಆಟದಿಂದ ಯು ಮುಂಬಾ ತಂಡ ಪಂದ್ಯದ ಮೊದಲ ಹತ್ತು ನಿಮಿಷದಲ್ಲಿ 15-8ರಲ್ಲಿ ಮೇಲುಗೈ ಸಾಧಿಸಿತು. ಪಂದ್ಯದ 8ನೇ ನಿಮಿಷದಲ್ಲಿ ಆಶೀಶ್ ಗಿಲ್ ಮತ್ತು ಸಾಹಿಲ್ ಅವರನ್ನು ಔಟ್ ಮಾಡಿದ ಅಜಿತ್, ತಂಡಕ್ಕೆ ಎರಡು ಆಲೌಟ್ ಪಾಯಿಂಟ್ಸ್ ಗಳನ್ನು ತಂದುಕೊಟ್ಟರು. ಹೀಗಾಗಿ ಮಾಜಿ ಚಾಂಪಿಯನ್ ಮುಂಬಾ ತಂಡದ ಆತ್ಮಸ್ಥೈರ್ಯ ವೃದ್ಧಿಯಾಯಿತು. ಆದರೆ ಸಮನ್ವತೆ ಕೊರತೆ ಎದುರಿಸಿದ ಹರಿಯಾಣ ಸ್ಟೀಲರ್ಸ್ ಮತ್ತಷ್ಟು ಒತ್ತಡಕ್ಕೆ ಸಿಲುಕಿತು.
ಟ್ಯಾಕಲ್ ಜತೆಗೆ 2 ಬೋನಸ್ ಅಂಕಗಳನ್ನು ಗಿಟ್ಟಿಸಿದ ಮುಂಬಾ, 15ನೇ ನಿಮಿಷಕ್ಕೆ 21-13ರಲ್ಲಿ ಮೇಲುಗೈ ಸಾಧಿಸುವ ಮೂಲಕ ನಿರಂತರ ಒತ್ತಡವನ್ನು ಎದುರಾಳಿ ತಂಡದ ಮೇಲೆ ಹೇರಿತು. ಆದರೆ 15ರಿಂದ 20 ನಿಮಿಷಗಳ ಅವಧಿಯಲ್ಲಿ ಹರಿಯಾಣ ಆಟಗಾರರು ಅನಿರೀಕ್ಷಿತವಾಗಿ ಪುಟಿದೆದ್ದರು. ವಿಶಾಲ್ ತಾಟೆ ಮತ್ತು ಶಿವಂ ಪತರೆ ಅವರ ಮಿಂಚಿನ ಆಟದಿಂದಾಗಿ 20ನೇ ನಿಮಿಷದಲ್ಲಿ ಯು ಮುಂಬಾ ತಂಡವನ್ನು ಮೊದಲ ಬಾರಿ ಕಟ್ಟಿಹಾಕಿದ ಹರಿಯಾಣ ಸ್ಟೀಲರ್ಸ್, 22-23ರಲ್ಲಿ ಮರು ಹೋರಾಟ ಸಂಘಟಿಸುವಲ್ಲಿ ಯಶಸ್ವಿಯಾಯಿತು