ಸಿನಿಮಾ

ಮಾಧುಸ್ವಾಮಿ ಪರ ಹರಿಯಾಣ ಲೋಕಸಭಾ ಸದಸ್ಯ ರಾಜೀವ್ ಜೈನ್ ಪ್ರಚಾರ

ಹುಳಿಯಾರು: ವಿವಿಧ ಕ್ಷೇತ್ರಗಳಿಗೆ ಹಲವು ವಿಶೇಷ ಪ್ಯಾಕೇಜ್ ನೀಡುವ ಮೂಲಕ ಡಬಲ್ ಇಂಜಿನ್ ಸರ್ಕಾರ ಸಾಕಷ್ಟು ಜನಪರ ಕೆಲಸ ಮಾಡಿದ್ದು, ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕೆಂದು ಜನ ಬಯಸಿದ್ದಾರೆ ಎಂದು ಹರಿಯಾಣ ಲೋಕಸಭಾ ಸದಸ್ಯ ರಾಜೀವ್ ಜೈನ್ ಹೇಳಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಹೋಬಳಿಯ ಮತ್ತಿಘಟ್ಟದಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಉತ್ತಮ ಆಡಳಿತವೇ ನಮ್ಮ ಸರ್ಕಾರದ ಸಾಧನೆಯಾಗಿದ್ದು, ಕರೊನಾ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಕೃಷಿ ಸಮ್ಮಾನ್ ಯೋಜನೆಯಡಿ ವಾರ್ಷಿಕ 10 ಸಾವಿರ ರೂ. ನೀಡುವುದೂ ಸೇರಿ ಸಾಮಾನ್ಯ ರೈತಾಪಿ ವರ್ಗಕ್ಕೆ ಅನುಕೂಲವಾಗುವ ಹಲವು ಯೋಜನೆ ಜಾರಿಗೊಳಿಸಿದ್ದು, ನುಡಿದಂತೆ ನಡೆಯುತ್ತಿದೆ ಎಂದರು.

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ನೀರು, ರಸ್ತೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಮಾಧುಸ್ವಾಮಿ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ಯಾವ ಊರಿಗೆ ಹೋದರೂ ಆಗಿರುವ ಕೆಲಸಗಳು ಮಾತನಾಡುತ್ತಿವೆ. ಜತೆಗೆ ಮತದಾರರೂ ಕ್ಷೇತ್ರ ಇನ್ನೂ ಅಭಿವೃದ್ಧಿಯಾಗಬೇಕಾದರೆ ಮಾಧುಸ್ವಾಮಿ ಅವರೇ ಮತ್ತೆ ಗೆಲ್ಲಬೇಕು ಎನ್ನುತ್ತಿದ್ದು, ಮಾಧುಸ್ವಾಮಿ ಬಹುಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ನಿರಂಜನಮೂರ್ತಿ, ಮಿಲಿಟರಿ ಶಿವಣ್ಣ, ಪಿಎಸಿಬಿ ಅಧ್ಯಕ್ಷ ನಟರಾಜ್, ಮಾಜಿ ಅಧ್ಯಕ್ಷ ನಾಗರಾಜ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಇತರರು ಉಪಸ್ಥಿತರಿದ್ದರು.

ಬಿಜೆಪಿಯಿಂದ ಜನಸ್ನೇಹಿ ಪ್ರಣಾಳಿಕೆ

ಹುಳಿಯಾರು: ಉತ್ತಮ ಆಡಳಿತ ನೀಡಿದ ಬಿಜೆಪಿ ಸರ್ಕಾರ ಈ ಬಾರಿ ಜನಸ್ನೇಹಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಸಚಿವ ಮಾಧುಸ್ವಾಮಿ ಅವರ ಪತ್ನಿ ತ್ರಿವೇಣಿ ಮಾಧುಸ್ವಾಮಿ ತಿಳಿಸಿದರು.

ಅವಳಗೆರೆ ಗೊಲ್ಲರಹಟ್ಟಿಯಲ್ಲಿ ಪತಿ ಜೆ.ಸಿ.ಮಾಧುಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 3 ಗೃಹಬಳಕೆ ಸಿಲಿಂಡರ್, ಪ್ರತಿದಿನ ಅರ್ಧ ಲೀಟರ್ ಹಾಲು, 5 ಕೆಜಿ ಅಕ್ಕಿ ಹಾಗೂ 5 ಕೆ.ಜಿ. ಸಿರಿಧಾನ್ಯ ಸೇರಿ ವಾರ್ಡ್‌ಗೆ ಒಂದರಂತೆ ಅಟಲ್ ಆಹಾರ ಕೇಂದ್ರ ಸ್ಥಾಪನೆ ಮಾಡಲಾಗುವುದೆಂದು ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.

ಬಿಜೆಪಿ ಸೇರ್ಪಡೆ: ಹುಳಿಯಾರು ಪಟ್ಟಣ ಪಂಚಾಯಿತಿಯ 4ನೇ ಬ್ಲಾಕ್ ವಿವಿಧ ಪಕ್ಷದ ಕಾರ್ಯಕರ್ತರು ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಬಿಜೆಪಿ ಸೇರ್ಪಡೆಯಾದರು.

Latest Posts

ಲೈಫ್‌ಸ್ಟೈಲ್